ಶಿಕ್ಷಕ, ಸಾಹಿತಿ : ಆರ್‌. ಎಸ್‌. ಪಾಟೀಲ

ವೃತ್ತಿಯಲ್ಲಿ ಶಿಕ್ಷಕರಾಗಿ, ಪ್ರವೃತ್ತಿಯಲ್ಲಿ ಸಾಹಿತಿ, ಕವಿ, ಲೇಖಕರಾಗಿರುವ ಆರ್‌.ಎಸ್‌.ಪಾಟೀಲರು ಉತ್ತಮ ವಾಗ್ಮಿ, ಒಳ್ಳೆಯ ನಿರೂಪಕರಾಗಿ ಶೈಕ್ಷಣಿಕ, ಸಾಹಿತ್ಯ, ಆಧ್ಯಾತ್ಮಿಕ, ಸಾಂಸ್ಕೃತಿಕ ಪರಿಸರದಲ್ಲಿ ಎಲ್ಲರ ಮೆಚ್ಚುಗೆಯನ್ನು ಪಡೆದವರು. ಉತ್ತಮ ಸಂಘಟನಾತ್ಮಕ ಮನೋಭಾವದವರಾದ ಅವರು ಸ್ವಸ್ಥ ಸಮಾಜದ ಕನಸು ಕಾಣುತ್ತ ಹಲವಾರು ಸೃಜನಾತ್ಮಕ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡವರು.   

ರಾಮನಗೌಡ ಪಾಟೀಲರು ವಿಜಯಪುರ ಜಿಲ್ಲೆಯ ಹುನಗುಂದ ತಾಲೂಕಿನ ಚಿಕ್ಕಕೊಡಗಲಿ ಗ್ರಾಮದಲ್ಲಿ 1951ರ ಆಗಸ್ಟ್‌ 17ರಂದು ಜನಿಸಿದರು. ತಂದೆ ಶಿವಸಂಗನಗೌಡ, ತಾಯಿ ನೀಲಮ್ಮ. ರಾಮನಗೌಡರು ಅವಿಭಕ್ತ ಕುಟುಂಬದಲ್ಲಿ ಬೆಳೆದರು. ಅವರು ಪ್ರಾಥಮಿಕ ಶಿಕ್ಷಣವನ್ನು ಚಿಕ್ಕಕೊಡಗಲಿಯಲ್ಲಿ ಮತ್ತು ಇಳಕಲ್‌ದಲ್ಲಿ ಮುಗಿಸಿ ಪ್ರೌಢಶಿಕ್ಷಣವನ್ನು ಇಳಕಲ್‌ದಲ್ಲಿ ಪೂರೈಸಿದರು. ರಾಮನಗೌಡರು ಪಿಯುಸಿಯಿಂದ ಬಿ.ಎ 2ರವರೆಗೆ ಇಳಕಲ್ಲಿನ ಎಸ್‌.ವಿ.ಎಮ್‌. ಕಾಲೇಜಿಗೆ ನಾಲ್ವೈದು ಕಿಮೀ ನಡೆದುಕೊಂಡು ಹೋಗಿಯೇ ಪೂರೈಸಿದರು. ನಂತರ ಅವರು ಬಾಹ್ಯ ವಿದ್ಯಾರ್ಥಿಯಾಗಿ ಬಿ.ಎ. ಪದವಿಯನ್ನು ಪೂರ್ಣಗೊಳಿಸಿದರು. ರಾಮನಗೌಡರು ಡಿಟಿಸಿ, ಸಿಟಿಸಿ ಯಲ್ಲಿ ತರಬೇತಿ ಪಡೆದು, ಎಂ.ಎ. ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದರು. ನಂತರ ಬಿ.ಇಡಿಯನ್ನು ಮೈಸೂರ ವಿಶ್ವವಿದ್ಯಾಲಯದಿಂದ ಪೂರೈಸಿದರು.  

ಆರ್‌.ಎಸ್‌.ಪಾಟೀಲರು  1974ರ ಜೂನ್ 26ರಂದು ರಾಮದುರ್ಗ ತಾಲೂಕಿನ ಸಾಲಹಳ್ಳಿಯ ಮಹಾಂತೇಶ ಪ್ರೌಢಶಾಲೆಯಲ್ಲಿ ವೃತ್ತಿಯನ್ನು ಪ್ರಾರಂಭಿಸಿದರು. ಅವರು 2011ರ ಆಗಸ್ಟ್‌ 31ರವರೆಗೆ ಒಟ್ಟು 37 ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾದರು. ಶಿಕ್ಷಕ ವೃತ್ತಿಯಲ್ಲಿನ ವೃತ್ತಿ ಬದ್ಧತೆಗೆ, ಪ್ರಾಮಾಣಿಕತೆಗೆ ಹೆಸರಾಗಿ ಶಿಕ್ಷಣ ಇಲಾಖೆ ನೀಡಿದ ಹಲವು ಜವಾಬ್ದಾರಿಗಳನ್ನುಸಮರ್ಥವಾಗಿ ನಿಭಾಯಿಸಿದವರು. ಅವರಿಂದ ಸ್ಪೂರ್ತಿ ಪಡೆದ ಅನೇಕ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ಕಂಡುಕೊಂಡಿದ್ದಾರೆ. ಅವರು ಮಾದರಿ ಶಿಕ್ಷಕರಾಗಿ ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಸೆಲೆಯಾಗಿದ್ದರು. ಆರ್‌.ಎಸ್‌.ಪಾಟೀಲರು ಯಾವುದೇ ಬಿಗುಮಾನಗಳಿಲ್ಲದೆ ಎಲ್ಲರೊಂದಿಗೆ ಬೆರೆಯುವ ಸಹೃದಯಿ. ಉತ್ತಮ ನಡೆನಡೆ, ಚಂದದ ಮಾತು, ಮುಕ್ತ ಮನಸ್ಸಿನ ವಿವೇಕವಂತರು. ಸ್ಪಷ್ಟವಾದ ನುಡಿ, ಸಾಹಿತ್ಯದ ಕಂಪು, ಮಿಳಿತವಾಗಿ ಬಳಸುವ ನುಡಿಗಟ್ಟುಗಳು ಮುಂತಾದವು ಅವರನ್ನು ಉತ್ತಮ ವಾಗ್ಮಿಯಾಗಿ ಒಳ್ಳೆಯ ನಿರೂಪಕರಾಗಿ ಮಾಡಿವೆ. ಆರ್‌.ಎಸ್‌.ಪಾಟೀಲರು 1974ರ ಮೇ 3ರಂದು ಕುಷ್ಟಗಿಯ ಬಸವಲಿಂಗಮ್ಮ ಅವರನ್ನು ಮದುವೆಯಾದರು. ಅವರಿಗೆ ನಾಲ್ವರು ಮಕ್ಕಳು. ಮಹಾಂತೇಶ, ಚನ್ನಬಸವ, ಶಶಿಕಲಾ ಮತ್ತು ಭಾರತಿ. ಸಾಲಹಳ್ಳಿಯಲ್ಲಿಯೇ ಮಹಾಂತೇಶ ಅವರು ವೈದ್ಯರಾಗಿ, ಚೆನ್ನಬಸವ ಅವರು ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಬ್ಬರು ಹೆಣ್ಣುಮಕ್ಕಳಿಗೆ ಮದುವೆಯಾಗಿದೆ. ಹೀಗೆ ಅವಿಭಕ್ತ ಕುಟುಮಬದಲ್ಲಿ ಮಕ್ಕಳ, ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.  

ಆರ್‌.ಎಸ್‌.ಪಾಟೀಲರು ಸಮಕಾಲೀನ ಸಾಹಿತ್ಯ ಮತ್ತು ಸಾಮಾಜಿಕ ಬದುಕಿನಲ್ಲಿ ಸದ್ದುಗದ್ದಲವಿಲ್ಲದೇ 50 ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕಕ್ಕೆ ಸಮರ​‍್ಿಸಿದ್ದಾರೆ. ರಾಮನಗೌಡರು 8ನೇ ತರಗತಿಯಲ್ಲಿದ್ದಾಗಲೇ ಕವನವೊಂದನ್ನು ರಚಿಸಿ ಇಳಕಲ್ ಮಠದಲ್ಲಿ ಕವನ ವಾಚನ ಮಾಡಿ, ಶ್ರೀಗಳಿಂದ ಮೆಚ್ಚುಗೆ ಪಡೆದಿದ್ದರು. ಅವರು ಕಾಲೇಜಿನಲ್ಲಿದ್ದಾಗಲೇ ಗುರುಗಳಾದ ಪ್ರೊ.ಜಿ.ಎಚ್‌.ಹನ್ನೆರಡುಮಠ ಅವರ ಪ್ರಭಾವ ಬಹಳ ಬೀರಿತು. ನಾಟಕಕಾರರಾದ ಪಿ.ಬಿ.ಧುತ್ತುರಗಿ, ಎಚ್‌.ಎನ್‌.ಹೂಗಾರ ಹಾಗೂ ಭಸ್ಮೆ ಅವರ ಒಡನಾಟದಲ್ಲಿ ನಾಟಕ ಹವ್ಯಾಸ ಬೆಳೆಯಿತು. ಕಾವ್ಯ ಕನ್ನಿಕೆ, ಮತ್ತೆ ವಸಂತ, ಹೊಂಗಿರಣಗಳು, ಪಾರಿಜಾತ ಕವನಸಂಕಲನಗಳು, ವಿಧಿಯೇ ನೀನೆಷ್ಟು ಕ್ರೂರಿ?, ಗ್ರಾಮೀಣ ಬದುಕು ಕಥಾ ಸಂಕಲನಗಳು, ಜಾಜಿ ಮಲ್ಲಿಗೆ, ಕೆಂಡ ಸಂಪಿಗೆ ಹಾಯ್ಕುಗಳ ಸಂಕಲನಗಳು, ಚಿಕ್ಕ ಕೊಡಗಲಿಯ ಮಹಾಲಿಂಗ ಶಿವಯೋಗಿಗಳು, ಸಾಧನಾ ಸಂಭ್ರಮ, ಗಿರಿಮಲ್ಲಣಾಯಕರು, ಸಿದ್ಧರಾಮ ಶಿವಯೋಗಿಗಳು, ಬ್ರಹ್ಮನಂದ ಶಿವಯೋಗಿಗಳು, ಸುವ್ರತ ದರ್ಶನ, ಕಿಣಗಿ ಬಸವಲಿಂಗಪ್ಪನವರು, ಕೃಷಿ ಋಷಿ ಮಹಾಪುರುಷರು ಜೀವನ ಚರಿತ್ರೆಗಳು, ಹೃದಯ ಶ್ರೀಮಂತ ಕಾದಂಬರಿ, ಆಧುನಿಕ ವಚನವಾರಿಧಿ, ವಚನ ವಾರಿಧಿ, ಆಧುನಿಕ ವಚನಗಳು, ಮನದೊಡಲ ಮುತ್ತುಗಳು, ಮಂದಾರ ಹೂಗಳು ಚುಟುಕು ಸಂಕಲನಗಳು, ರೇಣುಕ ವೀರಭದ್ರ ಸಂಶೋಧನಾತ್ಮಕ ಕೃತಿ ಹೀಗೆ 50ಕ್ಕೂ ಹೆಚ್ಚು ಕೃತಿಗಳನ್ನು ಆರ್‌.ಎಸ್‌.ಪಾಟೀಲರು ರಚಿಸಿದ್ದಾರೆ.  

ಆರ್‌.ಎಸ್‌.ಪಾಟೀಲರ ಮೊದಲ ಪ್ರಕಟಗೊಂಡ ಕೃತಿ ಶ್ರೀ ಮಹಾಲಿಂಗ ಶಿವಯೋಗಿಗಳ ಜೀವನ ಚರಿತ್ರೆ. ನಿರಾಭಾರಿ ಜಂಗಮರ ಈ ಶ್ರೇಷ್ಟ ಕೃತಿಯಾಧರಿಸಿ ಅಂತೂರ ಬೆಂತೂರ ಶ್ರೀಗಳು ಪುರಾಣ ರಚಿಸಿದರು. ಅಕ್ಷರ ದಾಸೋಹಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಗಂಗಾವತಿಯ ಶ್ರೀ ಮರಿಚನ್ನಬಸವ ಶ್ರೀಗಳೇ ಜ್ಞಾನಜ್ಯೋತಿ ಗುರುದೇವ ಬ್ರಹ್ಮಾನಂದರು, ಶ್ರೀ ಕಣಗಿ ಬಸವಲಿಂಗಪ್ಪನವರಂತಹ ಮಹಾಮಹಿಮರ 12 ಜೀವನ ಚರಿತ್ರೆಗಳನ್ನು ಪಾಟೀಲರು ರಚಿಸಿದರು. 04 ಕವನಸಂಕಲನ, 04 ಆಧುನಿಕ ವಚನ ಸಂಕಲನ, 04 ಕಥಾ ಸಂಕಲನ, 02 ಕಾದಂಬರಿ ಮತ್ತು 02 ಚುಟುಕು ಸಂಕಲನಗಳು ಅವರು ಹೊರತಂದಿದ್ದಾರೆ. ಮಕ್ಕಳಿಗಾಗಿ ಒಡುಪು ಮಾದರಿಯ ಒಂದೊಂದು ಸಾಲಿನಲಿ ಒಂದೊಂದು ಸುಳುಹು ನೀಡಿ ಉತ್ತರ ಬಯಸಿದ ಹೊಸ ಪ್ರಯೋಗ, ನಾಡಿನ ಹೆಸರಾಂತ ಕವಿ, ಸಾಹಿತಿ, ತತ್ವಜ್ಞಾನಿಗಳ ನುಡಿಮುತ್ತುಗಳು, ಅಲ್ಲದೇ ಮಕ್ಕಳಿಗಾಗಿ ಸಾಮಾನ್ಯ ಜ್ಞಾನದ ರೀತಿಯಲ್ಲಿ 03 ಕೃತಿಗಳನ್ನು ‘ಓದಿನಲಿ ಜಗವ ತಿಳಿ’ ಎಂಬ ಶಿರೋನಾವೆಯಲ್ಲಿ ಸಂಗ್ರಹಿಸಿ ಹೊರತಂದರು. ಪಯಣ ಕೃತಿಯು ಅವರ ಜೀವನದಲ್ಲಿ ನಡೆದ ಘಟನೆಗಳಿಂದ ಕೂಡಿದ ಕೃತಿಯಾಗಿದೆ. ಸಾಫಲ್ಯ ಕೃತಿಯು ಮಾಜಿ ಶಾಸಕ ಫಕೀರ​‍್ಪ ಕೊಪ್ಪದ ಅವರ ಜೀವನ ಚರಿತ್ರೆಯಾಗಿದೆ. ಆರ್‌.ಎಸ್‌.ಪಾಟೀಲರು 2013ರಲ್ಲಿ ಸಾನಿಧ್ಯಾ ಪ್ರಕಾಶನವನ್ನು ಪ್ರಾರಂಭಿಸಿ, ಇಪ್ಪತ್ತಕ್ಕೂ ಹೆಚ್ಚು ಕೃತಿಗಳನ್ನು ಹೊರತಂದಿದ್ದಾರೆ.  

ಆರ್‌.ಎಸ್‌.ಪಾಟೀಲರ ಶೈಕ್ಷಣಿಕ, ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ, ಸಮಾಜ ಸೇವಾ ರತ್ನ. ಆಶು ಕವಿ ಪ್ರಶಸ್ತಿ, ಮೌಲ್ಯ ಸಾಹಿತ್ಯ ಸಂಪದ ಪ್ರಶಸ್ತಿ, ರಾಜೇಂದ್ರ ಸಾಹಿತ್ಯ ಪ್ರಶಸ್ತಿ, ಸಾಹಿತ್ಯ ಸಿರಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ, ಸನ್ಮಾನ ಗೌರವಗಳು ಸಂದಿವೆ. 2016ರಲ್ಲಿ ಕನ್ನಡಸಾಹಿತ್ಯ ಪರಿಷತ್ತು ತಾಲೂಕಾ ಘಟಕ ರಾಮದುರ್ಗದಿಂದ ಸಾಲಹಳ್ಳಿಯ ಶ್ರೀ ಮಹಾಂತೇಶ ಪ್ರೌಢಶಾಲೆಯ ಆವರಣದಲ್ಲಿ ಜರುಗಿದ ಕೆ.ಚಂದರಗಿ ಹೋಬಳಿ ಮಟ್ಟದ ಪ್ರಥಮ ಕನ್ನಡಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವವು ಅವರಿಗೆ ಲಭಿಸಿದೆ. ಅಲ್ಲದೇ ಆರ್‌.ಎಸ್‌.ಪಾಟೀಲರ ಕುರಿತು ತಿ.ಯ.ಭಜಂತ್ರಿ, ಪಾಂಡುರಂಗ ಜಟಗಣ್ಣವರ, ಸಿ.ಆರ್‌.ಗಂಗಣ್ಣವರ, ಸುವೃತಾನಂದ ಸರಸ್ವತಿ ಶ್ರೀಗಳು, ಎನ್‌.ಆರ್,ಠಕ್ಕಾಯಿ ಅವರು ಲೇಖನಗಳನ್ನು ಬರೆದು ಗೌರವ ಸಮರ​‍್ಿಸಿದ್ದಾರೆ.  

ಅವರು ಚುಟುಕು ಸಾಹಿತ್ಯ ಪರಿಷತ್ತು ರಾಮದುರ್ಗ ತಾಲೂಕಾ ಘಟಕದ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಾಹಿತ್ಯಿಕ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿ ನಾಡು-ನುಡಿ ಸೇವೆಗೆ ತಮ್ಮನ್ನು ಅರ​‍್ಿಸಿಕೊಂಡಿರುವರು. ಅವರು ನಾಡಿನಾದ್ಯಂತ ನಡೆಯುವ ಶಿಕ್ಷಣ, ಸಾಹಿತ್ಯ, ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ನಮ್ಮ ಸುತ್ತಣ ಬಾಳಿನಲ್ಲಿ ಹಲವು ವೈಷಮ್ಯಗಳನ್ನು ಗಮನಿಸುವುದಕ್ಕಿಂತ ಸಮನ್ವಯದ ಹಾದಿಯಲ್ಲಿ ಮಾನವೀಯ ಬದುಕು ಸಾಧಿಸಬೇಕು ಎಂಬ ಚಿಂತನೆಯುಳ್ಳ ಶಿಕ್ಷಕ, ಸಾಹಿತಿಯಾಗಿರುವ ಆರ್‌.ಎಸ್‌.ಪಾಟೀಲರು ಚಿಂತನೆ, ಸಾಹಿತ್ಯ, ಸಂಸ್ಕೃತಿಗಳ ಸಂಗಮದ ವ್ಯಕ್ತಿತ್ವವುಳ್ಳವರಾಗಿದ್ದಾರೆ. ಸಾಹಿತ್ಯ ಚಿಂತಕ, ಮಾದರಿ ಶಿಕ್ಷಕರಾಗಿರುವ ಅವರು ಈ ಇಳಿವಯಸ್ಸಿನಲ್ಲಿಯೂ ಕ್ರಿಯಾಶೀಲರಾಗಿದ್ದು, ಅವರ ಸಾಧನೆ ಇಂದಿನ ಯುವ ಸಮುದಾಯಕ್ಕೆ ಮಾರ್ಗದರ್ಶಿಯಾಗಲಿ.  

- * * * -