ಸ್ವಾರ್ಥಿಗಳಿಗೆ ಮತದಾರರು ತಕ್ಕ ಪಾಠ ಕಲಿಸಿ

ಲೋಕದರ್ಶನ ವರದಿ 

ಶೇಡಬಾಳ 27:  17 ಜನ ಅನರ್ಹ ಶಾಸಕರು ಮಂತ್ರಿ ಆಸೆಗಾಗಿ ಪಕ್ಷಕ್ಕೆ ಮತದಾರರಿಗೆ ಬೆನ್ನಿಗೆ ಚೂರಿ ಹಾಕಿ ಸ್ವಾರ್ಥಕ್ಕಾಗಿ ಪಕ್ಷವನ್ನು ಬಿಟ್ಟು ಬಿಜೆಪಿಗೆ ಸೇರಿದ್ದಾರೆ. ಅವರು ಕ್ಷೇತ್ರದ ಅಭಿವೃದ್ದಿಗೋಸ್ಕರ, ಜನರ ಹಿತಾಸಕ್ತಿಗಾಗಿ ಪಕ್ಷ ತ್ಯಜಿಸಲಿಲ್ಲ ಕೆಲವರು ಮಂತ್ರಿಯಾಗುವ ಆಸೆಗಾಗಿ ಇನ್ನೊಬ್ಬರು ಉಪಮುಖ್ಯಮಂತ್ರಿ ಆಗುವ ಆಸೆಗಾಗಿ ಪಕ್ಷ ತ್ಯಜಿಸಿ ಹೋಗಿದ್ದಾರೆ ಇಂತಹವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕೆಂದು ರಾಜ್ಯ ಕೆಪಿಸಿಸಿ ದಿನೇಶ ಗುಂಡುರಾವ ಹೇಳಿದರು. 

ಅವರು ಮಂಗಳವಾರ ದಿ 26 ರಂದು ಕಾಗವಾಡ ಮತಕ್ಷೇತ್ರದ ಜುಗೂಳ ಗ್ರಾಮದಲ್ಲಿ ಕಾಂಗ್ರೇಸ್ ಅಭ್ಯರ್ಥಿ  ರಾಜು ಕಾಗೆ ಪರ ರೋಡ್ ಶೋ ಮೂಲಕ ಮತ ಯಾಚಿಸಿ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಯಡಿಯೂರಪ್ಪನವರು ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ದಿಗೋಸ್ಕರ ಮತ ಯಾಚಿಸದೇ ಬಿಜೆಪಿಯವರು ಅನರ್ಹರನ್ನು ಗೆಲ್ಲಿಸಿ ಅವರನ್ನು ಮಂತ್ರಿ ಮಾಡುತ್ತೇವೆ ಉಪಮುಖ್ಯಮಂತ್ರಿ ಮಾಡುತ್ತೇವೆ ಅಂತಾ ಹೇಳುತ್ತಿದ್ದಾರೆ. ಅನರ್ಹರ ಆಶೀರ್ವಾದದಿಂದ ನಾನು ಮುಖ್ಯಯಾಗಿದ್ದೇನೆ ಅವರ ಋಣದ ಭಾರ ನನ್ನ ಮೇಲಿದೆ ಅದಕ್ಕಾಗಿ ಅವರನ್ನು ಗೆಲ್ಲಿಸಿ ಅಂತಾ ಸಿಎಮ್ ಹೇಳುತ್ತಿರುವುದು ಪ್ರಜಾಭುತ್ವದ ಕಗ್ಗೋಲೆ ಎಂದರು.

ಅನರ್ಹರರು ಮಾರಾಟ: ರಾಜ್ಯದಲ್ಲಿ ಜೆಡಿಎಸ್ ಹಾಗೂ ಕಾಂಗ್ರೇಸ್ ಉತ್ತಮ ಆಡಳಿತ ನೀಡುತ್ತಿರುವ ಸಂದರ್ಭದಲ್ಲಿ ಬಿಜೆಪಿಯವರು ಅಧಿಕಾರದ ಆಸೆಗಾಗಿ ಕಾಂಗ್ರೇಸ್ ಹಾಗೂ ಜೆಡಿಎಸ್ನ 17 ಶಾಸಕರನ್ನು ಖರೀದಿ ಮಾಡಿ ವಾಮ ಮಾರ್ಗದಿಂದ ಸರ್ಕಾರ ರಚನೆ ಮಾಡಿದ್ದಾರೆ ಇಂತಹವರಿಗೆ ಮತದಾರರು ತಕ್ಕ ಪಾಠ ಕಲಿಸಬೇಕೆಂದು ಹೇಳಿದರು. 

ಮಹಾರಾಷ್ಟ್ರದಲ್ಲಿ ರಾತ್ರಿ 12ಗಂಟೆಗೆ ರಾಜ್ಯಪಾಲ ಹಾಗೂ ರಾಷ್ಟ್ರಪತಿಗಳನ್ನು ದುರ್ಬಳಕೆ ಮಾಡಿಕೊಂಡು ಮದ್ಯರಾತ್ರಿಯಲ್ಲಿ ಸರ್ಕಾರ ರಚಿಸಿ ಬೆಳಗ್ಗೆ 8 ಗಂಟೆಗೆ ಯಾವುದೇ ಶಾಸಕರಿಲ್ಲದೇ, ಮಾದ್ಯಮದವರಿಲ್ಲದೇ ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕರಿಸಿರುತ್ತಾರೆ ಇದು ಸಂವಿಧಾನ ವಿರೋಧಿ ನೀತಿ ಎಂದು ಕಟುವಾಗಿ ಟಿಕಿಸಿದರು. ಆದರೆ ಅವರೇ ಇಂದು ರಾಜಿನಾಮೆ ನೀಡಿದ್ದಾರೆ ಇದು ಪ್ರಧಾನಿ ನರೇಂದ್ರ ಮೋದಿ, ಅಮೀತ ಶಹಾಗೆ ಕಪಾಳಮೋಕ್ಷವಾಗಿದೆ. ಇಂತಹದಕ್ಕೆಲ್ಲ ಪ್ರಧಾನಿಯವರಿಗೆ ಸಮಯವಿದೆ ಆದರೆ ಪ್ರವಾಹ ಪರಿಸ್ಥಿತಿ ಎದುರಿಸಲು ವಿಕ್ಷಿಸಲು ಸಮಯವಿಲ್ಲ ಎಂದು ಗುಂಡುರಾವ ಕುಟುಕಿದರು. 15 ಜನ ಕಾಂಗ್ರೆಸ್ಸಿಗರ ಗೆಲವು ನಿಶ್ಚಿತ: ಇಂದು ಜುಗೂಳ ಗ್ರಾಮದಲ್ಲಿ ಇಂತಹ ಅಪಾರ ಪ್ರಮಾಣದ ಜನಸ್ತೋಮವನ್ನು ಕಂಡರೆ ರಾಜು ಕಾಗೆಯವರು 50 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲವು ಸಾಧಿಸುವ ಮೂಲಕ ದಾಖಲೆ ನಿರ್ಮಿಸಲಿದ್ದಾರೆ ಜೊತೆಗೆ 15 ಕ್ಷೇತ್ರಗಳಲ್ಲೂ ಕಾಂಗ್ರೇಸ್ ತನ್ನ ಜಯಭೇರಿ ಭಾರಿಸಲಿದೇ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಮಾಜಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿ ಸ್ವಾರ್ಥಕ್ಕಾಗಿ 17ಜನ ಶಾಸಕರು ಒಂದು ಸುಭದ್ರ ಸರ್ಕಾರವನ್ನು ಕೆಡವಲು ಕಾರಣಿಕರ್ತರಾದ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಚುನಾವಣೆಗಳು ನಡೆಯುತ್ತಿದ್ದು ಅವರನ್ನು ರಾಜ್ಯದ ಜನತೆ ಹೇಗೆ ಸೋಲಿಸುತ್ತಾರೆ ಎಂಬುವುದನ್ನು ಇಡೀ ದೇಶವೇ ಎದುರು ನೋಡುತ್ತಿದೆ. ಅದಕ್ಕಾಗಿ ಅನರ್ಹರಿಗೆ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸಬೇಕೆಂದರು. ಪ್ರಧಾನಿ ನರೇಂದ್ರ ಮೋದಿಯವರ ತವರಿನಲ್ಲಿ, ಮಹಾರಾಷ್ಟ್ರದಲ್ಲಿ ಪಕ್ಷಾಂತರಗಳಿಗೆ ತಕ್ಕ ಪಾಠ ಕಲಿಸಿದ್ದಾರೆ ಇಲ್ಲೂ ಕೂಡಾ ಅನರ್ಹರಿಗೆ ತಕ್ಕ ಪಾಠ ಕಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು. 

ಜುಮ್ ಜುಮ್ ಶಾಸಕರು: ಜಗತ್ತಿನ ಬೇರೆ ಬೇರೆ ದೇಶಗಳಿಂದ ಹೃದಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುತ್ತಾರೆ. ಆದರೆ ಕಾಗವಾಡ ಕ್ಷೇತ್ರದ ಅನರ್ಹ ಶಾಸಕ ಒಂದು ಸಾವಿರ ಕೋಟಿ ರೂಪಾಯಿ ಕೊಟ್ಟರೂ ಪಕ್ಷ ತ್ಯಜಿಸುವುದಿಲ್ಲ ಎಂದು ಹೇಳುತ್ತಿರುವ ಶ್ರೀಮಂತ ಪಾಟೀಲ ಏಕಾಏಕಿ ಮದ್ಯರಾತ್ರಿಯಲ್ಲಿ ಎದೆ ನೋವು ಎಂದು ಹೇಳಿಕೊಂಡು ಬೆಂಗಳೂರಿನಿಂದ ಹೈದರಾಬಾದ ಮೂಲಕ ಮುಂಬೈಗೆ ಹೋಗಿ ಹೆರಿಗೆ ಆಸ್ಪತ್ರೆಯಲ್ಲಿ ದಾಖಲಾಗಿರುವುದು ಹಾಸ್ಯಾಸ್ಪದ ಇಂತಹವರಿಗೆ ತಕ್ಕ ಪಾಠ ಕಲಿಸಬೇಕೆಂದರು. 

ಇಬ್ಬರಿಗೂ ಇನ್ನೊಬ್ಬ ಕ್ಯಾಪ್ಟನ್: ಕಾಗವಾಡ ಹಾಗೂ ಅಥಣಿಯ ಅನರ್ಹ ಶಾಸಕರಾದ ಶ್ರೀಮಂತ ಪಾಟೀಲ ಹಾಗೂ ಮಹೇಶ ಕುಮಟಳ್ಳಿಯವರಿಗೆ ಗೋಕಾಕದ ರಮೇಶ ಜಾರಕಿಹೊಳಿ ಕ್ಯಾಪ್ಟನ್. ಇವರಿಬ್ಬರನ್ನು ಗೆಲ್ಲಿಸಿ ಮಂತ್ರಿ ಮಾಡುತ್ತಾರಂತೆ ಅವರು ಉಪಮುಖ್ಯಮಂತ್ರಿಗಳಾಗುತ್ತಾರಂತೆ ಹೇಳುತ್ತಿದ್ದಾರೆ. ಅಲ್ಲ ಸ್ವಾಮಿ ಇವರು ಗೆದ್ದರೇ ತಾನೇ ಸಚಿವರು, ಉಪಮುಖ್ಯಮಂತ್ರಿಗಳಾಗುವುದು ಅದಕ್ಕಾಗಿ ಮತದಾರರು ಇವರಿಗೆ ತಕ್ಕ ಪಾಠ ಕಲಿಸಬೇಕೆಂದರು. ವೇದಿಕೆಯ ಮೇಲೆ ಕಾಂಗ್ರೇಸ್ ಅಭ್ಯರ್ಥಿ ರಾಜು ಕಾಗೆ ನೆರೆದಿದ್ದ ಸಾವಿರಾರು ಕಾರ್ಯಕರ್ತರಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು. ಈ ವೇಳೆ ಶಾಸಕರಾದ ಯಶವಂತಗೌಡ ಪಾಟೀಲ, ರಾಜಶೇಖರ ಪಾಟೀಲ, ಮಹಾಂತೇಶ ಕೌಜಲಗಿ, ಗಣೇಶ ಹುಕ್ಕೇರಿ, ಮಾಜಿ ಶಾಸಕರಾದ ಅಭಯಚಂದ್ರ ಜೈನ್, ಮೋಹನರಾವ ಶಹಾ, ಎಸ್.ಬಿ.ಘಾಟಗೆ ಮುಖಂಡರಾದ ದಿಗ್ವಿಜಯ ಪವಾರ ದೇಸಾಯಿ, ರವೀಂದ್ರ ಗಾಣಿಗೇರ, ಸಂಜಯ ಮಿಂಚೆ, ಲಕ್ಷ್ಮಣರಾವ ಚಿಂಗಳೆ, ವಿಜಯ ಅಕಿವಾಟೆ, ಪೋಪಟ ಪಾಟೀಲ, ರಾಜು ದುಗ್ಗೆ, ಗಜಾನನ ಯರಂಡೋಲಿ ಸೇರಿದಂತೆ ಸಾವಿರಾರು ಕಾರ್ಯಕರ್ತರು ಅಭಿಮಾನಿಗಳು ಮುಖಂಡರು ಉಪಸ್ಥಿತರಿದ್ದರು.