ಶಿಕ್ಷಣದ ಜೊತೆ ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಿ: ಹರಿಪ್ರಕಾಶ

Teach children good manners with education: Hariprakash

ತಾಳಿಕೋಟಿ: ಇಂದು ನಮ್ಮ ಸಮಾಜದಲ್ಲಿ ವಿದ್ಯಾವಂತರಿಗೆ ಕೊರತೆ ಇಲ್ಲ, ಸಂಸ್ಕಾರವಂತರ ಕೊರತೆ ಇದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರಗಳು ಶಿಕ್ಷಣ ಸಂಸ್ಥೆಗಳಲ್ಲಿ ಸಿಗುವಂತಾಗಬೇಕು.ಒಂದಕ್ಷರ ಕಡಿಮೆ ಕಲಿತರು ಪರವಾಗಿಲ್ಲ, ನಮ್ಮ ಸಂಸ್ಕೃತಿ ಪರಂಪರೆಯನ್ನು ತಿಳಿದುಕೊಳ್ಳುವಂತಹ ವ್ಯವಸ್ಥೆಯನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಡಬೇಕು ಎಂದು ಹಿರಿಯ ಪತ್ರಕರ್ತ, ವಿಶ್ವ ದರ್ಶನ ಶಿಕ್ಷಣ ಸಮೂಹದ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಹೇಳಿದರು.

ಶನಿವಾರ ಪಟ್ಟಣದ ಮೈಲೇಶ್ವರದ ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ ಬ್ರಿಲಿಯಂಟ್ ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಗಳು ಕೇವಲ ಭೌತಿಕವಾದಿ ವೈದ್ಯರು ಹಾಗೂ ಇಂಜಿನಿಯರ ಗಳನ್ನು ಸೃಷ್ಟಿಸುವ ಕಾರ್ಖಾನೆಗಳಾಗಬಾರದು ಇಲ್ಲಿ ಮಕ್ಕಳಿಗೆ ಅವರ ಬದುಕು ಅರಳಿಸುವಂತಹ ಶಿಕ್ಷಣ ಸಿಗಬೇಕು ಎಂದರು. ಸಮಾರಂಭ ಉದ್ಘಾಟಿಸಿ ಕ್ಷೇತ್ರ ಸಮನ್ವಯಾಧಿಕಾರಿ ಯು.ಬಿ.ಧರಿಕಾರ ಅವರು ಮಾತನಾಡಿ ನಮ್ಮ ಮಕ್ಕಳಲ್ಲಿ ಅಗಾಧವಾದ ಪ್ರತಿಭೆಯಿದೆ, ಅವರು ತುಂಬಾ ಬುದ್ಧಿವಂತರಿದ್ದಾರೆ ಅವರಿಗೆ ಗುಣಮಟ್ಟದ ಶಿಕ್ಷಣ ಮತ್ತು ಮಾರ್ಗದರ್ಶನದ ಅಗತ್ಯವಿದೆ, ಪೋಷಕರು ತಮ್ಮ ಮಕ್ಕಳ ಕುರಿತು ಹೆಚ್ಚು ಕಾಳಜಿ ವಹಿಸಬೇಕು, ಅವರನ್ನು ಮೊಬೈಲ್ ಗೀಳಿನಿಂದ ಹೊರ ತನ್ನಿ ಇದು ಆರೋಗ್ಯದ ಬಹಳಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಕನ್ನಡ ಭಾಷೆಯ ಜೊತೆ ಬೇರೆ ಯಾವ ಭಾಷೆಯಾದರೂ ಕಲಿಸಿ ಆದರೆ ಅವರು ಹಿರಿಯರಿಗೆ ತಂದೆ-ತಾಯಿಯರಿಗೆ ಸಮಾಜದ ಗಣ್ಯರಿಗೆ ಗೌರವ ನೀಡುವಂತ ಮಕ್ಕಳಾಗಬೇಕು ಎಂದರು.ಶ್ರೀ ಮಾರುತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎನ್‌.ಬಿ.ನಡುವಿನ ಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳ ಪೋಷಕರ ಸಹಕಾರದಿಂದ ಇಂದು ನಮ್ಮ ಸಂಸ್ಥೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಹೆಸರು ಗಳಿಸಿದೆ ಇದಕ್ಕೆ ನಾನು ತಮಗೆಲ್ಲರಿಗೂ ಋಣಿ ಯಾಗಿರುವೆ ಎಂದರು.ಶ್ರೀ ಖಾಸ್ಗತೇಶ್ವರ ಮಠದ ಮುಖ್ಯಸ್ಥರಾದ ಶ್ರೀ ಮುರಗೇಶ ವಿರಕ್ತಮಠ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಳೆದ ವರ್ಷದ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಗರಿಷ್ಟ ಅಂಕ ಗಳಿಸಿದ ಸಂಸ್ಥೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಪತ್ರಕರ್ತರಿಗೆ, ಬೊಮ್ಮನಹಳ್ಳಿ ಗ್ರಾಪ್ರಂ ಅಧ್ಯಕ್ಷೆ, ಸದಸ್ಯರು,ಮೈಲೇಶ್ವರ ಗ್ರಾಮದ ಗಣ್ಯರು,ಅಗ್ನಿಶಾಮಕ ದಳ ಹಾಗೂ ಆರೋಗ್ಯ ಸಿಬ್ಬಂದಿಗಳಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕುವೆಂಪು ವಿದ್ಯಾ ಸಂಸ್ಥೆ ಅಧ್ಯಕ್ಷ ಬಿ.ಎನ್‌.ನಾಯ್ಕೋಡಿ,ತಾಳಿಕೋಟಿ ವಲಯ ಶಿಕ್ಷಣ ಸಂಯೋಜಕ ಎಸ್‌.ಎಸ್‌.ಹಿರೇಮಠ, ಶ್ರೀ ಮಾರುತಿ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯಕ್ಷ ಎನ್‌.ಬಿ.ನಡುವಿನಮನಿ, ಕಾರ್ಯದರ್ಶಿ ಎಮ್‌.ಬಿ.ಮಡಿವಾಳರ, ನಿರ್ದೇಶಕರಾದ ಎಸ್‌.ಹೆಚ್‌. ಪಾಟೀಲ ಶಶಿಧರ್ ಎಂ.ಬಿರಾದಾರ, ನಿರ್ದೇಶಕಿ ಎಲ್‌.ಎಂ.ಬಿರಾದಾರ, ಎನ್‌.ಎಸ್‌.ಗಡಗಿ, ಮುಖ್ಯೋಪಾಧ್ಯಾಯರು,ಶಿಕ್ಷಕರುಪೋಷಕರು ಹಾಗೂ ವಿದ್ಯಾರ್ಥಿಗಳು ಇದ್ದರು. ಶ್ರೀ ಬಸವರಾಜ ಬಂಟನೂರ ಪ್ರಾರ್ಥಿಸಿದರು, ಶಿಕ್ಷಕ ಎಸ್‌.ಹೆಚ್‌. ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ.ವಿನಾಯಕ ಪಟಗಾರ ವರದಿ ವಾಚಿಸಿದರು.ಶಿಕ್ಷಕ ಸಿದ್ದು ಕರಡಿ ನಿರೂಪಿಸಿ ವಂದಿಸಿದರು. ವೇದಿಕೆ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.