ತಾಂಬಾ: ಜಮೀನಿನ ಫಲವತ್ತತೆ ಹೆಚ್ಚಿಸಲು ಸಂಚಾರಿ ಕುರಿಗಳು ಪ್ರಯೋಜನಕಾರಿ

ಲೋಕದರ್ಶನ ವರದಿ

ತಾಂಬಾ 01: ಬೇಸಿಗೆಯಲ್ಲಿ ಜಮೀನಿನ ಫಲವತ್ತತೆ ಹೆಚ್ಚಿಸಲು ಸಂಚಾರಿ ಕುರಿಗಳು ಬಹು ಪ್ರಯೋಜನಕಾರಿ ಹೀಗಾಗಿ ಈಗ ಕುರಿಗಾರರಿಗೆ ಬಹು ಬೇಡಿಕೆ ಬಂದಿದೆ. ಜಮೀನುಗಳಲ್ಲಿ ಬೆಳೆಗಳು ಉತ್ತಮವಾಗಿ ಬೆಳೆದಿರುವಾಗ ಜಮೀನಿನಲ್ಲಿ ಕುರಿಗಾರರು ಸಂಚರಿಸಿದರೆ. ರೈತರಿಂದ ಛೀಮಾರಿ ಹಾಕಿಕೊಳ್ಳುವ ಅದೇ ಕುರಿಗಾರರನ್ನು ಬೇಸಿಗೆ ಕಾಲದಲ್ಲಿ ಹಣ ಕೊಟ್ಟು ಕರೆಸಿಕೊಳ್ಳುತ್ತಾರೆ.

ಅವಳಿ ಜಿಲ್ಲೆಯ ನಾನಾ ಕಡೆಗಳಿಂದಲ್ಲದೇ ಬೆಳಗಾವಿ ಜಿಲ್ಲೆಯ ನಾನಾ ಭಾಗಗಳಿಂದ ಬರುವ ನೂರಾರು ಕುರಿಗಾರರನ್ನು ಸಂಚಾರಿ ಕುರಿಗಾರರೆಂದೇ ಕರೆಯುತ್ತಾರೆ. ಕುರಿಗಳ ಗೋಬ್ಬರದ ಮಹತ್ವ ತಿಳಿದಿರುವ ರೈತರು ಕುರಿಗಳ ಮಾಲಿಕರಿಗೆ ತಮ್ಮ ಜಮೀನಿನಲ್ಲಿ ತಂಗಲು ಹಿಂದೆ ಬೀಳುತ್ತಾರೆ. ಹೀಗಾಗಿ ಈ ಭಾಗದಲ್ಲಿ ಹೊಲ, ಗದ್ದೆ ತೋಟಗಳಲ್ಲಿ ಕುರಿಗಾರರು ತಮ್ಮ ಕುರಿಗಳ ಹಿಂಡಿನೋದಿಗೆ ಬಿಡಾರ ಹೂಡಿದ್ದಾರೆ.

ಜಮೀನಿಗೆ ಕುರಿ ಗೊಬ್ಬರ ಉತ್ತಮ. ಕಳೆದೆರಡು ವರ್ಷಗಳಿಂದ ಬೀಕರ ಬರಗಾಲದಿಂದ ತತ್ತರಿಸುವ ರೈತರು ಸಮೂಹ ಬಿತ್ತನೆಗೆ ಬೇಕಾದ ಕನಿಷ್ಠ ಮಳೆಯೂ ಆಗದಿರುವದರಿಂದ ಬಹುತೇಕ ಜಮೀನುಗಳು ಬಿತ್ತನೆಯಾಗದೆ ಖಾಲಿ ಬಿದ್ದಿದ್ದವು ಇದೀಗ ಭೂಮಿಯ ಫಲವತ್ತತೆ ಹೆಚ್ಚಿಸಲು ಕುರಿಗಾರರನ್ನು ಬೆನ್ನು ಬಿದ್ದು ತಮ್ಮ ಹೊಲ, ಗದ್ದೆಗಳಲ್ಲಿ ಕುರಿಗಳ ಹಿಂಡಿನ ದೊಡ್ಡಿಗಳನ್ನು ಹಾಕಿಸುತ್ತಾರೆ.

ಗೊಬ್ಬರಕ್ಕಿಂತ ಉತ್ತಮ: ಹೊಲಗಳಲ್ಲಿ ಕುರಿಗಳನ್ನು ನಿಲ್ಲಿಸಿದರೆ ಕೊಟ್ಟಿಗೆ ಗೊಬ್ಬರಕ್ಕಿಂತಲು ಉತ್ತಮ ರೀತಿಯಲ್ಲಿ ಭೂಮಿ ಹದವಾಗುತ್ತದೆ. ಫಸಲು ಚೆನ್ನಾಗಿ ಬರುತ್ತದೆ ಎಂಬ ಕಾರಣದಿಂದ ರೈತರು ಹೊಲಗಳಲ್ಲಿ ಕುರಿ ಹಿಂಡುಗಳನ್ನು ನಿಲ್ಲಿಸಲು ಹಾತೊರೆಯುತ್ತಾರೆ.