ಬೆಂಗಳೂರು, ನ 26 : ನಗರದ ಹೊರವಲಯದ ಹುಳಿಮಾವು ಕೆರೆಯ ಕೋಡಿ ಒಡೆದು ಮನೆ ಕಳೆದುಕೊಂಡ ಸಂತ್ರಸ್ತರನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಭೇಟಿ ಮಾಡಿ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಅವರು, ಅನಾಹುತದಲ್ಲಿ ಮನೆ ಕಳೆದುಕೊಂಡ 319 ಬಡ ಕುಟುಂಬಗಳಿಗೆ ಪರಿಹಾರಧನವಾಗಿ ತಲಾ 50 ಸಾವಿರ ರೂ.ಗಳನ್ನು ಕೂಡಲೇ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ತಿಳಿಸಿದರು.
ಅನಾಹುತದಿಂದಾಗಿ ಒಟ್ಟು 630 ಮನೆಗಳು ಹಾನಿಗೊಳಗಾಗಿವೆ. ಈ ಪೈಕಿ ಬಡವರ ಮನೆಗಳು ಸಂಪೂರ್ಣ ನಾಶವಾಗಿವೆ. ತಾತ್ಕಾಲಿಕ ಆಶ್ರಯ ಕೇಂದ್ರದಲ್ಲಿ ಸಂತ್ರಸ್ತರಿಗೆ ಊಟ ವಸತಿ ಸೌಲಭ್ಯಗಳು ಸೇರಿದಂತೆ ಎಲ್ಲ ರೀತಿಯ ನೆರವನ್ನು ಒದಗಿಸಲಾಗುತ್ತಿದೆ ಎಂದರು.
ಹಾನಿಗೊಳಗಾಗಿರುವ ಪ್ರದೇಶದಲ್ಲಿ ರಸ್ತೆಗಳ ನಿರ್ಮಾಣ, ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಂಬಂಧಪಟ್ಟ ಶಾಸಕರು, ಪಾಲಿಕೆ ಸದಸ್ಯರು ಮತ್ತು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ. ಭವಿಷ್ಯದಲ್ಲಿ ಇಂತಹ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದರು.
ಕೆರೆಗಳ ಒತ್ತುವರಿ ಪ್ರಕರಣಗಳ ಸಂಬಂಧ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದೇನೆ. ಒತ್ತುವರಿದಾರರ ವಿರುದ್ಧ ಕ್ರಮಕೈಗೊಳ್ಳಲಾಗುವುದು. ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇನೆ ಎಂದರು.
ನೆರೆಯಿಂದಾಗಿ ಆದ ನಷ್ಟದ ಪ್ರಮಾಣವನ್ನು ತಿಳಿಯಲು ಅಧಿಕಾರಿಗಳು ತಂಡಗಳಾಗಿ ಬಡಾವಣೆಗಳಲ್ಲಿ ಸರ್ವೆ ಕಾರ್ಯ ಆರಂಭಿಸಿದರು. ಪ್ರತಿ ಮನೆಗಳಿಗೆ ಭೇಟಿ ನೀಡಿ ಆಸ್ತಿಪಾಸ್ತಿ ನಷ್ಟಕ್ಕೊಳಗಾದ ನಿವಾಸಿಗಳಿಂದ ಆಧಾರ್ ಪ್ರತಿ ಹಾಗು ಬ್ಯಾಂಕ್ ಖಾತೆ ವಿವರಗಳನ್ನು ಪಡೆದರು.
ಕೆರೆ ದಂಡೆ ಒಡೆದು ರಾಜಕಾಲುವೆ ಮೂಲಕ ಹಾದು ಹೋಗುವ ಕಡೆ ಅಡ್ಡಲಾಗಿ ಮರಳು ಮೂಟೆಗಳ ಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿತ್ತು, ಕಾರ್ಮಿಕರು ಮುಂಜಾನೆಯಿಂದಲೇ ಗೋಡೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ತಡೆಗೋಡೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಇಂಜಿನಿಯರ್ ರೊಬ್ಬರು ಹೇಳಿದರು.
ಪಾಲಿಕೆ ಸದಸ್ಯೆ ಕಣ್ಣೀರು;
ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಮುರಳಿ ಅವಘಡದ ಬಗ್ಗೆ ಮಾಹಿತಿ ನೀಡಿ, ಈ ಅನಾಹುತದಿಂದ ನಮ್ಮ ವಾರ್ಡಿನ ಸಾವಿರಾರು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಸ್ತೆಗಳು ಸಂಪೂರ್ಣ ಹಾಳಾಗಿವೆ. ಹೀಗಾಗಿ, ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಕಳೆದ ಮೂರು ದಿನಗಳಿಂದ ಜನರ ಪಾಡು ಹೇಳ ತೀರದು, ಇಬ್ಬರು ಗರ್ಭಿಣಿಯರು ಗಂಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ, ಸಾಕಷ್ಟು ಜನ ಬಡವರು ಮನೆಗಳನ್ನು ಕಳೆದುಕೊಂಡಿದ್ದಾರೆ, ನನ್ನ ವಾರ್ಡಿನ ಜನಕ್ಕೆ ಈ ಪರಿಸ್ಥಿತಿ ಬರಬಾರದಿತ್ತು ಎಂದು ಭಾಗ್ಯಲಕ್ಷ್ಮಿ ಮುರಳಿ ಕಣ್ಣೀರು ಹಾಕಿದರು.