ಮುಂಬೈ, ಮಾ 25 (ಯುಎನ್ಐ) ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಜತೆ ಮಾತನಾಡಿದ ಫಲಶ್ರುತಿಯಾಗಿ ನನಗೆ ಉತ್ತಮ ಬ್ಯಾಟಿಂಗ್ ಮಾಡಲು ಸುಲಭವಾಯಿತು ಎಂದು ಮುಂಬೈ ಇಂಡಿಯನ್ಸ್ ತಂಡದ ಎಡಗೈ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಮೊಟ್ಟ ಮೊದಲ ಬಾರಿ ಮುಂಬೈ ಇಂಡಿಯನ್ಸ್ ಪ್ರತಿನಿಧಿಸಿದ ಯುವರಾಜ್ ಸಿಂಗ್, ಭಾನುವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 35 ಎಸೆತಗಳಲ್ಲಿ 53 ರನ್ ದಾಖಲಿಸಿ ಎಲ್ಲರ ಗಮನ ಸೆಳೆದರು. ಆದರೆ, ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ರಿಷಭ್ ಪಂತ್ (78 ರನ್, 27 ಎಸೆತಗಳು) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ಗೆ 214 ರನ್ ಬೃಹತ್ ಗುರಿ ನೀಡಿತ್ತು.
ಮುಂಬೈ ಇಂಡಿಯನ್ಸ್ ಪರ ಯುವರಾಜ್ ಸಿಂಗ್ ಹಾಗೂ ಕೃನಾಲ್ ಪಾಂಡ್ಯ ಬಿಟ್ಟರೆ ಇನ್ನುಳಿದ ಬ್ಯಾಟ್ಸ್ಮನ್ಗಳ ತಂಡದ ಗೆಲುವಿಗೆ ಸಹಕರಿಸಲಿಲ್ಲ. ಅಂತಿಮವಾಗಿ ಮುಂಬೈ ಇಂಡಿಯನ್ಸ್ 37 ರನ್ಗಳಿಂದ ಸೋಲು ಅನುಭವಿಸಿತ್ತು.
ಪಂದ್ಯದ ಬಳಿಕ ಮಾತನಾಡಿದ ಯುವರಾಜ್ ಸಿಂಗ್, " ಸೂಕ್ತ ಸಮಯ ಬಂದಾಗ ಮೊದಲು ನನ್ನ ಶೂಗಳನ್ನು ನೇತಾಕುತ್ತೇನೆ ಎಂದು ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯದ ಬಗ್ಗೆ ಪ್ರತಿಕ್ರಿಯಿಸಿದರು. ಐಪಿಎಲ್ ಗೂ ಮುನ್ನ ಸಚಿನ್ ತೆಂಡೂಲ್ಕರ್ ಅವರ ಬಳಿ ಕ್ರಿಕೆಟ್ ಬಗ್ಗೆ ಮಾತನಾಡಿದ್ದೇನೆ. ಹಾಗಾಗಿ, ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಲು ಸಾಧ್ಯವಾಯಿತು" ಎಂದು ತಿಳಿಸಿದರು.
"ಕಳೆದ ಎರಡು ವರ್ಷಗಳಲ್ಲಿ ಕ್ರಿಕೆಟ್ ವೃತ್ತಿ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇನೆ. ಪ್ರಸ್ತುತ ಭಾರತ ತಂಡದಲ್ಲಿ ಇಲ್ಲದೇ ಇದ್ದರೂ, ಐಪಿಎಲ್ 12ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ್ದು ಹೆಚ್ಚು ಖುಷಿ ನೀಡಿದೆ. 14, 16 ವಯೋಮಿತಿ ಯಿಂದ ಹಿಡಿದು ಇಲ್ಲಿಯವರೆಗೂ ಕ್ರಿಕೆಟ್ ಅನ್ನು ಆಹ್ಲಾದಿಸಿದ್ದೇನೆ" ಎಂದು ಹೇಳಿದರು.
ಯುವರಾಜ್ ಸಿಂಗ್, ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದು, 2017ರ ಜೂನ್ ನಲ್ಲಿ ಕೊನೆಯ ಬಾರಿ ಭಾರತ ತಂಡದಲ್ಲಿ ಆಡಿದ್ದರು. ಅಲ್ಲಿನಿಂದ ಇಲ್ಲಿಯ ವರೆಗೂ ಹಿರಿಯ ಎಡಗೈ ಬ್ಯಾಟ್ಸ್ಮನ್ ಭಾರತ ತಂಡಕ್ಕೆ ಮರಳುವಲ್ಲಿ ವಿಫಲರಾಗಿದ್ದಾರೆ.