ವಾಷಿಂಗ್ಟನ್, ಜೂನ್ ೧೪, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಗ್ಯದ ಬಗ್ಗೆ ಸಂದೇಹಗಳು ವ್ಯಕ್ತವಾಗುತ್ತಿದೆ. ಅಮೆರಿಕಾ ಸೇನಾ ಅಕಾಡೆಮಿಯಲ್ಲಿ ಶನಿವಾರ ಟ್ರಂಪ್ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ಬಲಗೈಮೂಲಕ ಗ್ಲಾಸಿನಿಂದ ನೀರು ಕುಡಿಯಲು ತೊಂದರೆ ಅನುಭವಿಸಿದ ವಿಡಿಯೋ ವೈರಲ್ ಆಗಿದೆ. ಗ್ಲಾಸು ಎತ್ತಿ ನೀರು ಕುಡಿಯಲು ಮುಂದಾಗಿ ಕಷ್ಟಪಟ್ಟ ಟ್ರಂಪ್ ನಂತರ ಎಡ ಗೈ ಸಹಾಯ ಪಡೆದುಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟ್ರಂಪ್ ಆರೋಗ್ಯದ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಟ್ರಂಪ್ ಇತ್ತೀಚೆಗೆ ಸೇನಾ ಕಾಲೇಜಿನಲ್ಲಿ ಪದವೀಧರರನ್ನು ಉದ್ದೇಶಿಸಿ ಮಾತನಾಡಿದ ನಂತರ ಮೆಟ್ಟಿಲುಗಳ ಮೂಲಕ ಇಳಿದು ಹೋಗಲು ಸಾಧ್ಯವಾಗಲಿಲ್ಲ.
ಮುಂಬರುವ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅವರು ರಾಜ್ಯಗಳ ಪ್ರವಾಸದಿಂದ ದಣಿದಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನೂ ಹಲವರು ಟ್ರಂಪ್ ಅವರ ಆರೋಗ್ಯ ಹಳಿ ತಪ್ಪಿದೆ ಎಂದು ಹೇಳುತ್ತಿದ್ದಾರೆ.ಈ ವರ್ಷ ಟ್ರಂಪ್ ಆರೋಗ್ಯದ ಬಗ್ಗೆ ವಾರ್ಷಿಕ ವರದಿಯನ್ನು ಅವರು ಉಲ್ಲೇಖಿಸುತ್ತಾರೆ. ಟ್ರಂಪ್‌ಗೆ ಮೆದುಳು ತಪಾಸಣೆ ಅಗತ್ಯವಿದ್ದು, ಈ ಲಕ್ಷಣಗಳು ಅವರಲ್ಲಿ ಕಂಡುಬರುತ್ತಿವೆ ಎಂದು ಪ್ರಮುಖ ಮನೋವೈದ್ಯ ಡಾ. ಬೆಂಡಿ ಲೀ ಟ್ವೀಟ್ ಮಾಡಿದ್ದಾರೆ. ಮತ್ತೊಂದೆಡೆ, ತಾನು ಆರೋಗ್ಯವಾಗಿದ್ದೇನೆ. ತನ್ನ ವಯಸ್ಸಿಗೂ ಮೀರಿದ ದೇಹ ದಾರ್ಢ್ಯತೆಯನ್ನು ಹೊಂದಿದ್ದೇನೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ಕೊರೊನಾ ವೈರಸ್ ಸೋಂಕಿಗೆ ಒಳಗಾಗದಂತೆ ಮುನ್ನೆಚ್ಚರಿಕೆಯಿಂದ ಮಲೇರಿಯಾ ಚಿಕಿತ್ಸೆಗೆ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯನ್ನು ಎರಡು ವಾರಗಳ ಕಾಲ ಬಳಸಿರುವುದರಿಂದ ಉಂಟಾಗಿರುವ ಅಡ್ಡಪರಿಣಾಮ ಪತ್ತೆಗೆ ಶ್ವೇತಭವನದ ವೈದ್ಯಕೀಯ ತಂಡ ಇಸಿಜಿ ಸೇರಿದಂತೆ ನಿಯಮಿತವಾಗಿ ಅವರನ್ನು ತಪಾಸಣೆಗೆ ಒಳಪಡಿಸುತ್ತಿದೆ.