ಲೋಕದರ್ಶನ ವರದಿ
ತಾಳಿಕೋಟೆ 15: ಖಾಸ್ಗತ ಶಿವಯೋಗಿಗಳ ಜಾತ್ರೋತ್ಸವ ನಿಮಿತ್ತ ಭಾನುವಾರ ಖಾಸ್ಗತ ಶ್ರೀಗಳ ಬೆಳ್ಳಿ ಮೂರ್ತಿಯನ್ನು ಆನೆ ಅಂಬಾರಿಯಲ್ಲಿ ಹಾಗೂ ಶ್ರೀಮಠದ ಸಿದ್ದಲಿಂಗ ಸ್ವಾಮೀಜಿ ಅವರನ್ನು ಅಶ್ವರಥದಲ್ಲಿ ಮೆರವಣಿಗೆ ಮಾಡಲಾಯಿತು.
ಬೆಳಗ್ಗೆ 8 ಗಂಟೆಗೆ ಆರಂಭವಾದ ಪಲ್ಲಕ್ಕಿ ಹಾಗೂ ರಥ ಕಲಶದ ಮಹಾ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪುರಾತನ ಭೀಮನಬಾವಿಯಲ್ಲಿ 'ಓಂ ನಮಃ ಶಿವಾಯ' ಭಜನೆಯೊಂದಿಗೆ ಗಂಗಸ್ಥಳ ಕಾರ್ಯಕ್ರಮ ನಡೆದ ನಂತರ ಮಧ್ಯಾಹ್ನ 2.30 ಗಂಟೆಗೆ ಮೆರವಣಿಗೆ ಮರಳಿ ಮಠಕ್ಕೆ ತಲುಪಿತು.
ರಸ್ತೆಯುದ್ದಕ್ಕೂ ಸುಮಂಗಲೆಯರು ಮನೆ ಅಂಗಳದಲ್ಲಿ ರಂಗೋಲಿಯ ಚಿತ್ತಾರ ಹಾಗೂ ತಳಿರು ತೋರಣಗಳಿಂದ ಸಿಂಗರಿಸಿದ್ದರು. ಗೊಂಬೆ ಕುಣಿತ, ಕರಡಿ ಮಜಲು, ಸನಾದಿ ವಾದನ ಹಾಗೂ ಕಲಾ ತಂಡಗಳು ಸೇರಿ ವಿವಿಧ ವಾದ್ಯ ವೈಭವಗಳು ಮೆರವಣಿಗೆ ಮೆರಗು ತಂದವು.
ರಾಜವಾಡೆ ಕಿಂಗ್ಸ್, ಭಗತ್ಸಿಂಗ್ ಹಾಗೂ ರಾಮಸಿಂಗ್ ಗೆಳೆಯರ ಬಳಗ, ಭಾರತ ವಿಕಾಸ ಪರಿಷತ್, ವಿರಕ್ತೇಶ್ವರ ತರುಣ ಸಂಘ, ನಮ್ಮ ಗೆಳೆಯರ ಬಳಗ, ಸಜ್ಜನ ಸಮಾಜ ಬಾಂಧವರು ಹಾಗೂ ಅನೇಕ ಯುವಕ ಸಂಘದವರು ದಾರಿಯುದ್ದಕ್ಕೂ ಪ್ರಸಾದ ಸೇವೆ ಹಾಗೂ ತಂಪು ಪಾನಿಯ, ಕುಡಿಯುವ ನೀರಿನ ವ್ಯವಸ್ಥೆ ಏರ್ಪಡಿಸಿದ್ದರು.
ಖಾಸ್ಗತೇಶ್ವರ ಮಠದ ಉಸ್ತುವಾರಿ ಮುರುಗೇಶ ವಿರಕ್ತಮಠ, ಸಂಗಯ್ಯ ವಿರಕ್ತಮಠ, ವಿಶ್ವನಾಥ ವಿರಕ್ತಮಠ, ಶರಭಯ್ಯ ಪುರಾಣಿಕಮಠ, ಮುರುಗನವರ ಶಿರೂರ, ಶ್ರೀಧರ ಕಾಗನೂರಮಠ ಇತರರು ಇದ್ದರು. ಸಿಪಿಐ ರವಿಕುಮಾರ ಕಪ್ಪತ್ತನವರ, ಪಿಎಸ್ಐ ಗೋವಿಂದೆಗೌಡ ಪಾಟೀಲ ಹಾಗೂ ಪೊಲೀಸ್ ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದ್ದರು.