ದೆಹಲಿಯಲ್ಲಿ ಪ್ರತಿಭಟನಕಾರರ ವಿರುದ್ಧ ಸಂಘಿಗಳ ಹಿಂಸಾಚಾರ ನಿಲ್ಲಿಸಲು ತಕ್ಷಣ ಕಠಿಣ ಕ್ರಮಕೈಗೊಳ್ಳಿ: ಎಸ್‌ಡಿಪಿಐ

ನವದೆಹಲಿ, ಫೆ.29 :   ಸಿಎಎ ವಿರೋಧಿ ಪ್ರತಿಭಟನಕಾರರ ಮೇಲೆ ಪೊಲೀಸರ ಪೂರ್ಣ ಬೆಂಬಲದೊಂದಿಗೆ ಈಶಾನ್ಯ ದೆಹಲಿಯಲ್ಲಿ ಸಂಘಿ ಗೂಂಡಾಗಳು ನಡೆಸಿದ ಅಮಾನುಷ ಹಲ್ಲೆ, ದೌರ್ಜನ್ಯ ಬಗ್ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ,  ಹಿಂಸಾಚಾರದಲ್ಲಿ ಸ್ಲಿಮರ ಆಸ್ತಿ ಪಾಸ್ತಿಗಳಿಗೆ ಅಪಾರ ಹಾನಿ ಮಾಡಿದ್ದಲ್ಲದೆ, ಹಲವು ಮುಸ್ಲಿಮರನ್ನು ಹತ್ಯೆ ಮಾಡಲಾಗಿದೆ. ಪೊಲೀಸ್, ಆಡಳಿತ ಮತ್ತು ಸರ್ಕಾರದ ಪಿತೂರಿ ಇಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹಲವಾರು ವೀಡಿಯೊ ತುಣುಕುಗಳು, ನೈಜ ಅಪರಾಧಿಗಳನ್ನು ಮತ್ತು ಗುಜರಾತ್ ಜನಾಂಗೀಯ ಹತ್ಯೆಯನ್ನು ಪುನರಾವರ್ತಿಸುವ ಮಾದರಿಯನ್ನು ತೋರಿಸುತ್ತಿವೆ ಎಂದು ಹೇಳಿದ್ದಾರೆ.

ಮಸೀದಿಗಳು, ಮಜಾರ್‌ಗಳು ಮತ್ತು ಮುಸ್ಲಿಮರ ಆಸ್ತಿಗಳನ್ನು ಗೂಂಡಾಗಳು ಧ್ವಂಸಗೊಳಿಸುವ ಮತ್ತು ಬೆಂಕಿ ಹಚ್ಚುವ ಕೃತ್ಯದಲ್ಲಿ ನಿರತರಾಗಿದ್ದಾಗ, ಪೊಲೀಸರು ಕೆಲವು ಹಂತಗಳಲ್ಲಿ ಮೂಕ ಪ್ರೇಕ್ಷಕರಾಗಿ ನಿಂತಿದ್ದರು. ಮಾತ್ರವಲ್ಲ ಕೆಲವು ಕಡೆಗಳಲ್ಲಿ ಅವರು ದುಷ್ಕರ್ಮಿಗಳೊಂದಿಗೆ ಹಿಂಸಾಚಾರದಲ್ಲಿ ನೇರವಾಗಿಯೇ ಭಾಗಿಯಾಗಿದ್ದಾರೆ. ಅಶೋಕ್ ನಗರದ ಮಸೀದಿಯ ಮಿನಾರದ ಮೇಲೆ ಗೂಂಡಾಗಳು ಹತ್ತುವ, ಧ್ವನಿವರ್ಧಕವನ್ನು ಧ್ವಂಸಗೊಳಿಸುವ, ಅದರ ಮೇಲೆ ಹನುಮಾನ್ ಮತ್ತು ಜೈ ಶ್ರೀರಾಮ್ ಘೋಷಣೆಯನ್ನು ಮುದ್ರಿಸಲಾದ ಕೇಸರಿ ಧ್ವಜವನ್ನು ಕಟ್ಟುತ್ತಿರುವ ಮತ್ತು ಮಿನಾರ್ ಮೇಲೆ ತ್ರಿವರ್ಣ ಧ್ವಜವನ್ನು ಕಟ್ಟುವ ದೃಶ್ಯವನ್ನು ಒಳಗೊಂಡ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ್ದು, ಇದು ಅಲ್ಲಿನ ಪರಿಸ್ಥಿತಿಯ ಭೀಕರತೆಯನ್ನು ಹೇಳುತ್ತಿದೆ ಎಂದು ಅವರು ಹೇಳಿದ್ದಾರೆ.

ದುಷ್ಕರ್ಮಿಗಳು ತಮ್ಮ ದಾಳಿಯ ಸಮಯದಲ್ಲಿ “ಮೋದಿ ಜಿ ನಾವು ನಿಮ್ಮೊಂದಿಗೆ ಇದ್ದೇವೆ” ಮತ್ತು “ಜೈ ಶ್ರೀರಾಮ್” ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ದಾಳಿಕೋರರಿಗೆ ಅಧಿಕಾರಿಗಳು ತಮ್ಮ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸುವುದಿಲ್ಲ ಎಂಬ ಭರವಸೆ ನೀಡಿರುವುದು ಇಲ್ಲಿ ಸ್ಪಷ್ಟವಾಗಿದೆ. ಪೊಲೀಸ್ ಸೇರಿದಂತೆ 38ಕ್ಕೂ ಹೆಚ್ಚು ಜನರು ಗುಂಡಿನ ದಾಳಿ ಮತ್ತು ಗುಂಪು ಹತ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಗುಂಡಿನ ಗಾಯ ಸೇರಿದಂತೆ 150 ಕ್ಕೂ ಹೆಚ್ಚು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಾವುದೇ ಭಯವಿಲ್ಲದೆ ಹಿಂಸಾಚಾರದಲ್ಲಿ ತೊಡಗಿಸಿಕೊಳ್ಳಲು ಗೂಂಡಾಗಳಿಗೆ ಸರ್ಕಾರ ಎಲ್ಲಾ ರೀತಿಯ ಅವಕಾಶ ಮಾಡಿಕೊಟ್ಟಿರುವುದು ದೃಢಪಟ್ಟಿದೆ. ಪ್ರಸ್ತುತ ಹಿಂಸಾಚಾರವು ಸ್ವಯಂಪ್ರೇರಿತ ಪ್ರತಿಕ್ರಿಯೆಯಲ್ಲ, ಆದರೆ ಸಿಎಎಯನ್ನು ವಿರೋಧಿಸುವ ಜನರಲ್ಲಿ ಭಯವನ್ನು ಉಂಟುಮಾಡಲು ಮಾಡಿರುವ ಯೋಜಿತ ಕ್ರಮವಾಗಿದೆ ಎಂದು ಅವರು ತಿಳಿಸಿದ್ದಾರೆ.

 ಎಎಪಿ ಮಾಜಿ ಶಾಸಕ ಮತ್ತು ಈಗ ಬಿಜೆಪಿ ನಾಯಕನಾಗಿರುವ ಕಪಿಲ್ ಮಿಶ್ರಾ ಅವರು ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಬಳಿ ಅತ್ಯಂತ ಪ್ರಚೋದನಕಾರಿ ಭಾಷಣ ಮಾಡಿದ ನಂತರ ಹಿಂಸಾಚಾರ ಪ್ರಾರಂಭವಾಯಿತು. ಅದರ ನಂತರ ಅವರ ಬೆಂಬಲಿಗರನ್ನು ದಾಳಿ ನಡೆಸಲು ಆ ಸ್ಥಳಕ್ಕೆ ಬರುವಂತೆ ಅವರು ಟ್ವೀಟ್ ಮೂಲಕ ಕರೆ ನೀಡಿದ್ದರು. ಜನಸಮೂಹದ ಹಿಂಸಾಚಾರವು 2002ರ ಗುಜರಾತ್ ಜನಾಂಗೀಯ ಹತ್ಯೆಯ ಮಾದರಿಯಾಗಿದೆ. ಸಂಘಿಗಳು ಮುಸ್ಲಿಮರ ಮೇಲೆ ಮಾತ್ರ ದಾಳಿ ಮಾಡಲು ಸಹಾಯವಾಗುವಂತೆ, ಈ ಪ್ರದೇಶದ ಹಿಂದೂಗಳ ಮನೆಗಳು ಮತ್ತು ವ್ಯಾಪಾರ ಸಂಸ್ಥೆಗಳ ಮೇಲೆ ಕೇಸರಿ ಧ್ವಜಗಳನ್ನು ಕಟ್ಟಲಾಗಿತ್ತು. ಎರಡೂ ಬದಿಗಳಲ್ಲಿ ಹಿಂದೂಗಳ ಅಂಗಡಿಗಳಿದ್ದರೂ ಮಧ್ಯದಲ್ಲಿರುವ ಮುಸ್ಲಿಮ್ ವ್ಯಕ್ತಿಯ ಅಂಗಡಿಯೊಂದನ್ನು ಮಾತ್ರ ನಾಶಪಡಿಸಿರುವುದು, ಹಿಂದೂಗಳ ಅಂಗಡಿಗಳನ್ನು ಮುಟ್ಟದೆ ಇರುವುದನ್ನು ವೀಡಿಯೋಗಳು, ಛಾಯಾಚಿತ್ರಗಳು ಸ್ಪಷ್ಟಪಡಿಸುತ್ತಿವೆ. ದುಷ್ಕರ್ಮಿಗಳಿಗೆ ಪೊಲೀಸರ ಬೆಂಬಲ, ಉತ್ತರ ಪ್ರದೇಶದಲ್ಲಿರುವ “ಮೇಲಿನವರ” ನಿರ್ದೇಶನದಂತೆ ತೋರುತ್ತದೆ ಎಂದು ಫೈಝಿ ತಿಳಿಸಿದ್ದಾರೆ.

ಫ್ಯಾಸಿಸ್ಟ್ ಮತ್ತು ಕೋಮು ಶಕ್ತಿಗಳ ವಿರುದ್ಧ ಇತ್ತೀಚೆಗೆ ನೀಡಿದ್ದ ಎಲ್ಲ ಭರವಸೆಗಳು ಮತ್ತು ಜನಾದೇಶವನ್ನು ಅರವಿಂದ್ ಕೇಜ್ರಿವಾಲ್ ಅವರು ಛಿದ್ರಗೊಳಿಸಿದ್ದಾರೆ. ಈಶಾನ್ಯ ದೆಹಲಿಯಲ್ಲಿ ಪೂರ್ಣ ನರಕ ಸದೃಶ ಘಟನೆ ನಡೆದ ಮೂರು ದಿನಗಳ ವರೆಗೂ ಅವರು ಮೂಕ ಪ್ರೇಕ್ಷಕರಾಗಿದ್ದರು. ನಿಸ್ಸಹಾಯಕ ಸಂತ್ರಸ್ತರಿಗೆ ಯಾವುದೇ ಸಹಾಯವನ್ನು ನೀಡುವಲ್ಲಿ ದೆಹಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ.

ಗೌರವಾನ್ವಿತ ನ್ಯಾಯಮೂರ್ತಿ ಎಸ್. ಮುರಳೀಧರ್ ಅವರನ್ನು ಯಾವುದೇ ಆಧಾರವಿಲ್ಲದೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ಗೆ ರಾತ್ರೋ ರಾತ್ರಿ ವರ್ಗಾಯಿಸಲಾಯಿತು. ಮುರಳೀಧರ್ ಅವರು ದೆಹಲಿ ಪ್ರಕರಣಕ್ಕೆ ಸಂಬಂಧಿಸಿ, ದ್ವೇಷ ಭಾಷಣ ಮಾಡಿದ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿ, ಮರುದಿನ ಅಂದರೆ ಫೆಬ್ರವರಿ 26ರಂದು ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದ್ದರು. ಆದರೆ ಅದಕ್ಕೂ ಮೊದಲೇ ಕೇಂದ್ರ ಸರ್ಕಾರ ಅವರನ್ನು ರಾತ್ರೋರಾತ್ರಿ ಪಂಜಾಬ್ ಮತ್ತು ಹರ್ಯಾಣ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿರುವುದಕ್ಕೆ ಎಸ್‍ಡಿಪಿಐ ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತದೆ.

2020ರ ಫೆಬ್ರವರಿ 14ರ ಪ್ರಸ್ತಾವನೆಯನ್ನು ಸುಪ್ರೀಂಕೋರ್ಟ್ ಹಿಂತೆಗೆದುಕೊಳ್ಳುವಂತೆ ಮತ್ತು ದೆಹಲಿ ಹೈಕೋರ್ಟ್‍ನಲ್ಲಿ ನ್ಯಾಯಾಧೀಶರಾಗಿ ಮುಂದುವರಿಯಲು ನ್ಯಾಯಮೂರ್ತಿ ಎಸ್. ಮುರಳೀಧರ್ ಅವರಿಗೆ ಅನುಮತಿ ನೀಡುವಂತೆ ಎಸ್‍ಡಿಪಿಐ ಮನವಿ ಮಾಡುತ್ತದೆ. ಹಿಂಸಾ ಕೃತ್ಯಗಳನ್ನು ಚಿತ್ರೀಕರಣ ಮಾಡುವುದರಿಂದ ಮಾಧ್ಯಮ ವ್ಯಕ್ತಿಗಳನ್ನು ಕೂಡ ತಡೆಯಲಾಗಿದೆ, ಮತ್ತು ಅವರಲ್ಲಿ ಕೆಲವರನ್ನು ತಾವು ಹಿಂದೂಗಳು ಎಂಬುದನ್ನು ದೃಢೀಕರಿಸಲು ಅವರ ಪ್ಯಾಂಟ್ಗಳನ್ನು ಕೂಡ ಬಿಚ್ಚುವಂತೆ ಮಾಡಲಾಯಿತು. ಇದು ಈ ಪ್ರದೇಶದಲ್ಲಿ ನಡೆದ ಒಟ್ಟು ಅರಾಜಕತೆಯ ದೃಶ್ಯಗಳಾಗಿವೆ. ಎಸ್‍ಡಿಪಿಐ ರಾಷ್ಠ್ರೀಯ ಸಮಿತಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಪ್ರತಿಭಟನಕಾರರ ಹಿಂಸಾಚಾರ ಮತ್ತು ಹತ್ಯೆಗಳು ಸಿಎಎ ವಿರುದ್ಧ ರಾಷ್ಟ್ರವ್ಯಾಪ್ತಿ ಆಂದೋಲನಗಳನ್ನು ದುರ್ಬಲಗೊಳಿಸುವುದಿಲ್ಲ ಮತ್ತು ನ್ಯಾಯ ದೊರಕುವವರೆಗೂ ಮುಂದುವರಿಯುತ್ತದೆ ಎಂದು ಹೇಳಿದೆ. ಆದರೆ ಬಿಜೆಪಿ ನಾಯಕರ ದ್ವೇಷ ಭಾಷಣಗಳ ಮೇಲೆ ಎಫ್‍ಐಆರ್ ದಾಖಲಿಸುವಂತೆ ಸೂಚಿಸಿದ ದೆಹಲಿ ಹೈಕೋರ್ಟ್‍ನ ಆದೇಶವನ್ನು ಪಕ್ಷ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.

ತಕ್ಷಣ ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಜೀವ ಮತ್ತು ಆಸ್ತಿಪಾಸ್ತಿ ಹಾನಿಗಳಿಗೆ ಅನುಗುಣವಾಗಿ ಸಮರ್ಪಕ ಪರಿಹಾರ ನೀಡಬೇಕು, ಪ್ರತಿ ಜೀವ ಹಾನಿಗೆ 1 ಕೋಟಿ ರೂಪಾಯಿ ಪರಿಹಾರ ಮತ್ತು ತೀವ್ರವಾಗಿ ಗಾಯಗೊಂಡವರಿಗೆ 50 ಲಕ್ಷ ರೂಪಾಯಿಗಳನ್ನು ತಕ್ಷಣವೇ ದೆಹಲಿ ಸರ್ಕಾರವು ಮಂಜೂರು ಮಾಡಿ ಪಾವತಿಸಬೇಕು.  ದ್ವೇಷ ಮತ್ತು ಹಿಂಸಾಚಾರ ಹರಡಿದವರು ಮತ್ತು ಪ್ರಚೋದಕರಾದ ಅನುರಾಗ್ ಠಾಕೂರ್, ಕಪಿಲ್ ಮಿಶ್ರಾ, ಪರ್ವೇಶ್ ವರ್ಮಾ ಅವರ ವಿರುದ್ಧ ಹಾಗೂ ಗಲಭೆಕೋರರು, ಹಿಂಸಾ ಪ್ರಚೋದಕರು ಮತ್ತು ತಪ್ಪಿತಸ್ಥ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ವಿಚಾರಣೆಯನ್ನು ತಕ್ಷಣ ಸಮರ್ಪಕ ಸಮಾಲೋಚನೆಯ ನಂತರ ಸರಿಯಾದ ನಿಬಂಧನೆಗಳೊಂದಿಗೆ ಸ್ಥಾಪಿಸಬೇಕು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ