ಲೋಕದರ್ಶನ ವರದಿ
ಬ್ಯಾಡಗಿ24: ಗ್ರಾಮೀಣ ಪ್ರದೇಶಗಳಲ್ಲಿ ಪಾಲಕರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ನಿರ್ಲಕ್ಷ್ಯ ತೋರದೆ ಮುಂಜಾಗ್ರತೆ ವಹಿಸುವುದು ಒಳ್ಳೆಯದು ಎಂದು ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ಡಾ. ರಂಜಿತಕುಮಾರ ಹೇಳಿದರು.
ತಾಲೂಕಿನ ಅತ್ತಿಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಯ ವತಿಯಿಂದ ಹಮ್ಮಿಕೊಂಡಿದ್ದ ಬಡತನ ರೇಖೆಗಿಂತ ಕೆಳಗಿರುವ ಶಾಲಾ ಮಕ್ಕಳಿಗೆ ಉಚಿತ ದೃಷ್ಟಿದೋಷ ತಪಾಸಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬಡ ಕುಟುಂಬಗಳು ಮಕ್ಕಳ ಆರೋಗ್ಯದಲ್ಲಾಗುವ ಬದಲಾವಣೆಗಳಿಗೆ ತಕ್ಷಣ ಸ್ಪಂದಿಸದೇ ಇರುವುದರಿಂದ ಅವರ ಅನಾರೋಗ್ಯಕ್ಕೆ ತಾವೇ ಹೊಣೆಗಾರರಾಗುತ್ತಾರೆ. ಅದರಲ್ಲೂ ಕಣ್ಣು ದೇಹದ ಸೂಕ್ಷ್ಮ ಅಂಗ. ಇದರಲ್ಲಾಗುವ ಬದಲಾವಣೆಯನ್ನು ಕಾಲ ಕಾಲಕ್ಕೆ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರಲ್ಲದೆ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಮಕ್ಕಳನ್ನು ದೃಷ್ಟಿಯಲ್ಲಿಟ್ಟುಕೊಂಡು ನಮ್ಮ ಸಂಸ್ಥೆ ವರ್ಷಕ್ಕೊಮ್ಮೆ ಆಯ್ದ ಸರಕಾರಿ ಶಾಲೆಗಳಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸೆಯನ್ನು ಹಮ್ಮಿಕೊಳ್ಳುವ ಮೂಲಕ ಅವರಿಗೆ ಇತರೆ ಎಲ್ಲ ಸೌಲಭ್ಯವನ್ನು ಒದಗಿಸುತ್ತದೆ ಎಂದು ತಿಳಿಸಿದರು.
ಆಸ್ಪತ್ರೆಯ ವತಿಯಿಂದ ಆಗಮಿಸಿದ್ದ ಡಾ.ಪ್ರಕೃತಿ, ಸಹಾಯಕರಾದ ಧನಂಜಯ ಹಾಗೂ ರಂಜಿತಾ ಅವರು ಶಾಲೆಯ 113 ಮಕ್ಕಳ ನೇತ್ರ ತಪಾಸಣೆ ಮಾಡಿ, ಅದರಲ್ಲಿ 6 ಮಕ್ಕಳಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಆಯ್ಕೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಉಜ್ಜಯ್ಯ ಕರಿನಾಗಣ್ಣನವರ, ಉಪಾಧ್ಯಕ್ಷ ಜ್ಯೋತಿ ಬಿಳಕಿ, ಸದಸ್ಯರಾದ ಪರಮೇಶ ಕರಿನಾಗಣ್ಣನವರ, ರವಿ ಹಾದೀಮನಿ, ಭೀಮಪ್ಪ ದೊಡ್ಡಪ್ಪೇರ, ಧರ್ಮರಾಜ ಪುಟ್ಟಣ್ಣನವರ, ಸಂಜೀವ ಮಾಳಾಪೂರ, ಕರಿಬಸಯ್ಯ ಹಿರೇಮಠ, ಆಂಜನೇಯ ಗಿರೇಗೊಂಡ್ರ, ಮಂಜುಳಾ ವಾಸನದ, ಮನೋಹರ ಕರಿನಾಗಣ್ಣನವರ, ಶಾಲಾ ಶಿಕ್ಷಕರುಗಳಾದ ಸುಧಾ ಎಚ್, ಬಿ ಆರ್ ಕೊಟ್ರಳ್ಳಿ, ಈಶಪ್ಪ ಎಂ, ಮಹೇಶಪ್ಪ ಎಚ್, ಜಮೀರ ರಿತ್ತಿ ಉಪಸ್ಥಿತರಿದ್ದರು.