ವಿಶೇಷ ಚೇತನರಿಗೆ ನರೇಗಾ ಜಾಬ್ ಕಾರ್ಡ ವಿತರಣೆ;
ಕಾಗವಾಡ 12: ಸರ್ಕಾರ ವಿಶೇಷ ಚೇತನರಿಗಾಗಿ ಉದ್ಯೋಗ ಖಾತ್ರಿ ಯೋಜನೆಯಡಿ 100 ದಿನಗಳ ಉದ್ಯೋಗವನ್ನು ಖಾತ್ರಿಪಡಿಸಿದ್ದು, ಗ್ರಾಮದ ವಿಶೇಷ ಚೇತನರು ಇದರ ಲಾಭ ಪಡೆದುಕೊಳ್ಳಬೇಕೆಂದು ತಾಲೂಕ ಪಂಚಾಯತಿ ಇಓ ವೀರಣ್ಣ ವಾಲಿ ತಿಳಿಸಿದ್ದಾರೆ.
ಅವರು ಶುಕ್ರವಾರ ದಿ. 11 ತಾಲೂಕಿನ ಮಂಗಸೂಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗ್ರಾಮದ 73 ವಿಶೇಷ ಚೇತನರಿಗೆ ಜಾಬ್ ಕಾರ್ಡ್ ವಿತರಿಸಿ, ಮಾತನಾಡುತ್ತಿದ್ದರು. ಸರ್ಕಾರ ಈಗಾಗಲೇ ನರೇಗಾ ಯೋಜನೆ ಅಡಿ ಗ್ರಾಮದ ಪ್ರತಿ ಕುಟುಂಬಗಳಿಗೆ 100 ದಿನಗಳ ಉದ್ಯೋಗ ಖಾತ್ರಿಯನ್ನು ನೀಡಿದೆ. ಇದರ ಜೊತೆಗೆ ಈಗ ಕುಟುಂಬದ ಸದಸ್ಯರಲ್ಲಿ ವಿಶೇಷ ಚೇತನರಿದ್ದರೇ ಅವರಿಗಾಗಿಯೇ ನೂರು ದಿನಗಳ ಉದ್ಯೋಗ ಖಾತ್ರಿ ನೀಡಿದ್ದು, ಅವರ ಕೂಲಿ ಕೆಲಸದ ಅವಧಿಯಲ್ಲಿ ಶೇ. 50 ರಷ್ಟು ರಿಯಾಯತಿ ಕೂಡಾ ನೀಡಿದ್ದಾರೆ. ಇದರಿಂದ ವಿಶೇಷ ಚೇತನರು ಸ್ವಾವಲಂಬಿ ಜೀವನ ಸಾಗಿಸಲು ಅನುಕೂಲವಾಗಲಿದೆ ಎಂದರು.
ಈ ಸಮಯದಲ್ಲಿ ತಹಶೀಲ್ದಾರ ರಾಜೇಶ ಬುರ್ಲಿ, ಮುಖಂಡರಾದ ರವೀಂದ್ರ ಪೂಜಾರಿ, ಗ್ರಾ.ಪಂ. ಅಧ್ಯಕ್ಷ ಬಾಳು ಭಜಂತ್ರಿ, ಉಪಾಧ್ಯಕ್ಷೆ ಸವೀತಾ ಪಾಟೀಲ, ಪಿಡಿಓ ಸಂಜಯ ಸೂರ್ಯವಂಶಿ ಸೇರಿದಂತೆ ಗ್ರಾ.ಪಂ. ಸದಸ್ಯರು, ವಿಕಲಚೇತನ ಫಲಾನುಭವಿಗಳು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.