ನೈಜ ಸಂತ್ರಸ್ತರನ್ನು ಕೈಬಿಟ್ಟರೆ ತಹಶೀಲ್ದಾರರೇ ಹೊಣೆ: ಕಾರಜೋಳ

ಬಾಗಲಕೋಟೆ: ಕೆಲ ನೈಜ ಸಂತ್ರಸ್ತರು ನೆರೆ ಪರಿಹಾರದಡಿ ಇನ್ನು ಸೇರದೇ ಉಳಿದಿದ್ದು, ಅಂಥವರ ಪಟ್ಟಿ ಮಾಡಿ ಮೂರು ದಿನದೊಳಗಾಗಿ ಆಯಾ ತಹಶೀಲ್ದಾರ ಕ್ರಮಕೈಗೊಳ್ಳುವಂತೆ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಸೂಚಿಸಿದರು.

      ಜಿ.ಪಂ ಸಭಾಭವನದಲ್ಲಿಂದು ಜರುಗಿದ ಪ್ರವಾಹ ಪರಿಹಾರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಅನರ್ಹರನ್ನು ಪರಿಗಣಿಸಿದ ಬಗ್ಗೆ ತಮಗೆ ದೂರುಗಳು ಬಂದಿರುವ ಕಾರಣ ಹಾಗೂ ನೈಜ ಅರ್ಹ ಸಂತ್ರಸ್ತರು ಇನ್ನು ಕೆಲವಡೆ ಪರಿಹಾರದಿಂದ ಕೈಬಿಟ್ಟು ಹೋಗಿರುವ ಕಾರಣ ಆಯಾ ತಹಶೀಲ್ದಾರರು ನಿಷ್ಪಕ್ಷಪಾತವಾಗಿ ನಿದರ್ಾಕ್ಷಿಣ್ಯವಾಗಿ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವಂತೆ ಉಪ ಮುಖ್ಯಮಂತ್ರಿಗಳು ಎಚ್ಚರಿಕೆ ನೀಡಿದರು.

      ಅಧಿಕಾರಿಗಳು ಸರಕಾರಕ್ಕೆ ಮುಜುಗರವಾಗದ ರೀತಿಯಲ್ಲಿ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸತಕ್ಕದ್ದು. ಯಾರದೋ ಬಿಡೆಗೆ ಬಿದ್ದು, ಅನರ್ಹರನ್ನು ಸೇರಿಸಬೇಡಿ. ಅರ್ಹ ಸಂತ್ರಸ್ತರನ್ನು ಪರಿಗಣಿಸಿ ಪ್ರಾಮಾಣಿಕತೆಯಿಂದ, ದಕ್ಷತೆಯಿಂದ ಹಾಗೂ ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಒಂದು ವೇಳೆ ಅರ್ಹ ಸಂತ್ರಸ್ತರಿಗೆ ಪರಿಹಾರ ಸಿಗದೇ ಹೋದಲ್ಲಿ ನೇರವಾಗಿ ತಹಶೀಲ್ದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ತಿಳಿಸಿದರು. 

      ಜಿಲ್ಲೆಯಲ್ಲಿ ಒಟ್ಟು 46997 ಕುಟುಂಬಗಳಿಗೆ ತಲಾ 10 ಸಾವಿರದಂತೆ 46.99 ಕೋಟಿ ರೂ. ಪರಿಹಾರ ನೀಡಲಾಗಿದೆ. ಒಟ್ಟು 5149 ಅಧಿಕೃತ ಹಾಗೂ 2268 ಅನಧಿಕೃತ ಮನೆಗಳು ಹಾನಿಯಾಗಿವೆ. ಈ ಪೈಕಿ ಎ ಕೆಟಗರಿಯಲ್ಲಿ ಅಧಿಕೃತ 395, ಅನಧಿಕೃತ 76, ಬಿ ಕೆಟಗರಿಯಲ್ಲಿ ಅಧಿಕೃತ 1359, ಅನಧಿಕೃತ 420, ಸಿ ಕೆಟಗರಿಯಲ್ಲಿ ಅಧಿಕೃತ 3395, ಅನಧಿಕೃತ 1772 ಮನೆಗಳು ಇವೆ. ಜೀವ ಹಾನಿ 3, ಜಾನುವಾರು 301 ಹಾಗೂ ಕೋಳಿ 200 ಮೃತಪಟ್ಟಿದ್ದು, ಒಟ್ಟು 66 ಲಕ್ಷ ರೂ.ಗಳ ಪರಿಹಾರ ನೀಡಿಲಾಗಿದೆ ಎಂದರು.

       ಪ್ರವಾಹ ಪರಿಹಾರಕ್ಕೆ ಅಗಸ್ಟ 8 ರಿಂದ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡುತ್ತಲೆ ಇದೆ. ಈ ವರೆಗೆ ಜಿಲ್ಲೆಗೆ ಒಟ್ಟು 230 ಕೋಟಿ ರೂ.ಬಂದಿದೆ. ಈ ಪೈಕಿ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಇನ್ನು 138 ಕೋಟಿ ರೂ.ಲಭ್ಯವಿದೆ ಎಂದರು. ಜಿಲ್ಲೆಯಲ್ಲಿ ಮನೆ, ಬೆಳೆ, ಮೂಲಭೂತ ಆಸ್ತಿ-ಪಾಸ್ತಿ, ರಸ್ತೆ ಸೇರಿದಂತೆ ಒಟ್ಟು 2542.99 ಕೋಟಿ ರೂ.ಗಳಷ್ಟು ಅಂದಾಜು ಹಾನಿಯಾಗಿದ್ದು, ಎನ್.ಡಿ.ಆರ್.ಎಫ್ ಪ್ರಕಾರ 420.36 ಕೋಟಿ ರೂ. ಪರಿಹಾರ ಆಗಲಿದೆ. ಈ ಪೈಕಿ 1313 ಕೋಟಿ ರೂ. ಕೃಷಿ ಹಾಗೂ 361 ಕೋಟಿ ತೋಟಗಾರಿಕೆ ಹಾಗೂ ರೇಷ್ಮೆ 63 ಹೆಕ್ಟೆರ ಪ್ರದೇಶ ಹಾನಿ ಅಂದಾಜಿಸಲಾಗಿದ್ದು, ಇನ್ನು ಸಮೀಕ್ಷೆ ನಡೆಯುತ್ತಿದೆ. ಯಾವುದೇ ರೀತಿಯಲ್ಲಿ ಲೋಪವಾಗದಂತೆ ಸರಿಯಾಗಿ ಸಮೀಕ್ಷೆ ಕೈಗೊಳ್ಳುವಂತೆ ತಿಳಿಸಿದರು.  

       ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 93.34 ಕೋಟಿ ಹಾನಿ ಅಂದಾಜಿಸಲಾಗಿದ್ದು, ಪ್ರವಾಹದಿಂದ ಸ್ಥಗಿತಗೊಂಡ ಸಂಪರ್ಕ ರಸ್ತೆಗಳನ್ನು ಸರಿಪಡಿಸಲು ತುತರ್ು ಕಾರ್ಯ ಕೈಗೊಳ್ಳಬೇಕು. ಹೆಸ್ಕಾಂಗೆ ಸಂಬಂಧಿಸಿದಂತೆ ಟ್ರಾನ್ಸಪಾರ್ಮರ್, ಕಂಡಕ್ಟರ, ವಿದ್ಯುತ್ ಕಂಬ ಸೇರಿ ಒಟ್ಟು 33.84 ಕೋಟಿ ರೂ. ಹಾನಿ ಅಂದಾಜಿಸಲಾಗಿದೆ. 

      ಈಗಾಗಲೇ ಶೇ.75 ರಷ್ಟು ಸರಿಪಡಿಸುವ ಕಾರ್ಯವಾಗಿದ್ದು, ಉಳಿದ ಶೇ.25 ರಷ್ಟು ಕೆಲಸವನ್ನು ಒಂದು ವಾರದಲ್ಲಿ ಪೂರ್ಣಗೊಳಿಸುವದಾಗಿ ಹೆಸ್ಕಾಂ ಅಧಿಕಾರಿಗಳು ಸಭೆಗೆ ತಿಳಿಸಿದರು.  

      ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಮಾತನಾಡಿ ಎನ್ಡಿಆರ್ಎಫ್ ಹಾಗೂ ರಾಜ್ಯ ಸರಕಾರದಿಂದ ಒಟ್ಟು 10 ಸಾವಿರ ರೂ.ಗಳ ಪರಿಹಾರವನ್ನು ಹಾಗೂ ವಿಶೇಷ ಆಹಾರ ಕಿಟ್ಗಳನ್ನು ಇಲ್ಲಿಯವರೆಗೆ ಒಟ್ಟು 45997 ಸಂತ್ರಸ್ತರ ಕುಟುಂಬಗಳಿಗೆ ನೀಡಲಾಗಿದೆ. 

     ಪ್ರವಾಹ ಸಂದರ್ಭದಲ್ಲಿ 242 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಸದ್ಯ 4 ಕೇಂದ್ರಗಳಲ್ಲಿ ಮಾತ್ರ 570 ಕುಟುಂಬಗಳು ಆಶ್ರಯ ಪಡೆಯುತ್ತಿದ್ದಾರೆ. 117 ಗೋಶಾಲೆಗಳ ಪೈಕಿ 11 ಗೋಶಾಲೆಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಪ್ರವಾಹ ಪೀಡಿತ ಗ್ರಾಮಗಳಲ್ಲಿ 134 ಶಾಲಾ ಕಟ್ಟಡಗಳ ಪೈಕಿ 44 ಕಟ್ಟಡಗಳ ಕಾಮಗಾರಿ ಪ್ರಾರಂಭಿಸಲಾಗಿದೆ. 43 ಅಂಗವಾಡಿ ಕಟ್ಟಡಗಳ ಪೈಕಿ 8 ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

       ಪಂಚಾಯತ್ರಾಜ್ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ ಒಟ್ಟು 678 ಕಿ.ಮೀ ರಸ್ತೆ ಹಾನಿಗೊಳಗಾಗಿದೆ. 669 ಪ್ರಾಥಮಿಕ ಶಾಲೆಗಳ ಕೊಠಡಿಗಳು, 47 ಸಮುದಾಯ ಭವನಗಳು, 14 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 158 ಅಂಗನವಾಡಿ ಕಟ್ಟಡಗಳು ಹೊನಿಗೊಳಗಾಗಿವೆ. 73.32 ಕೋಟಿ ರೂ. ಹಾನಿ ಅಂದಾಜಿಸಲಾಗಿದ್ದು, ಈ ಪೈಕಿ ಎನ್ಡಿಆರ್ಎಫ್ ಪ್ರಕಾರ 24.52 ಕೋಟಿ ರೂ. ಬರಲಿದೆ ಎಂದು ಜಿ.ಪಂ ಸಿಇಓ ಗಂಗೂಬಾಯಿ ಮಾನಕರ ತಿಳಿಸಿದರು. 

       ಸಭೆಯಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ, ಆನಂದ ನ್ಯಾಮಗೌಡರ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಅಪರ ಜಿಲ್ಲಾಧಿಕಾರಿ ದುಗರ್ೇಶ ರುದ್ರಾಕ್ಷಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಆಯಾ ತಾಲೂಕಾ ತಹಶೀಲ್ದಾರರು ಉಪಸ್ಥಿತರಿದ್ದರು.