ಮೂರು ರಾಜಧಾನಿಗಳ ಸ್ಥಾಪನೆಗೆ ಟಿಡಿಪಿ ಸದಸ್ಯರ ವಿರೋಧ: ಆಂಧ್ರ ವಿಧಾನಸಭೆಯಲ್ಲಿ ಕೋಲಾಹಲ

ಅಮರಾವತಿ, ಜ22 :     ಆಂಧ್ರ ವಿಧಾನಸಭೆಯಲ್ಲಿ ಬುಧವಾರ ಪ್ರತಿಪಕ್ಷ ತೆಲುಗುದೇಶಂ ಪಕ್ಷ(ಟಿಡಿಪಿ)ದ ಸದಸ್ಯರು ಪೋಡಿಯಂಗೆ ನುಗ್ಗಿ ‘ಜೈ ಅಮರಾವತಿ’ ಎಂಬ ಘೋಷಣೆಗಳನ್ನು ಕೂಗಿದ್ದರಿಂದ ಕೋಲಾಹಲ ಸೃಷ್ಟಿಯಾಗಿತ್ತು. 

ಇಂದು ಸದನ ಸಮಾವೇಶಗೊಳ್ಳುತ್ತಿದ್ದಂತೆ ಟಿಡಿಪಿ ಸದಸ್ಯರು ಪೋಡಿಯಂಗೆ ನುಗ್ಗಿ ರಾಜ್ಯದಲ್ಲಿ ಮೂರು ರಾಜಧಾನಿಗಳ ಸ್ಥಾಪನೆಯನ್ನು ವಿರೋಧಿಸಿದರು.

ಅಲ್ಲದೆ, ಟಿಡಿಪಿ ಸದಸ್ಯರು ಸ್ಪೀಕರ್ ಪೋಡಿಯಂಗೆ ಹತ್ತಿ, ಘೋಷಣೆಗಳನ್ನು ಕೂಗುತ್ತಾ ಕಲಾಪಕ್ಕೆ ಅಡ್ಡಿ ಪಡಿಸಿದರು. 

ಇದಕ್ಕೆ ಸ್ಪೀಕರ್ ತಮ್ಮಿನೇನಿ ಸೀತಾರಾಮ್ ಆಕ್ರೋಶ ವ್ಯಕ್ತಪಡಿಸಿ, ತಮ್ಮ ತಮ್ಮ ಕುರ್ಚಿಗಳಲ್ಲಿ ಆಸೀನರಾಗುವಂತೆ ಸದಸ್ಯರಿಗೆ ಪದೇ ಪದೇ ಮನವಿ ಮಾಡಿದರು. 

ಸೋಮವಾರ ಅಧಿವೇಶನ ಆರಂಭವಾದಾಗಿನಿಂದ ಟಿಡಿಪಿ ಸದಸ್ಯರು ಕಲಾಪಗಳನ್ನು ಅಡ್ಡಿಪಡಿಸುತ್ತಲೇ ಇದ್ದಾರೆ ಎಂದು ಸ್ಪೀಕರ್ ಅಸಮಧಾನ ವ್ಯಕ್ತಪಡಿಸಿದರು. 

‘ಇದೇನು? ನಿಮ್ಮ ಮನೆ ಅಂತ ತಿಳಿದಿದ್ದೀರಾ?’ ಎಂದು ಸ್ಪೀಕರ್ ಸಿಟ್ಟಿನಿಂದ ಹೇಳಿದರು. 

ಈ ವೇಳೆ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಮಧ್ಯಪ್ರವೇಶಿಸಿ, ಮಾರ್ಷಲ್ ಗಳನ್ನು ಕರೆಯುವಂತೆ ಸ್ಪೀಕರ್ ಗೆ ಹೇಳಿದರು.

ಆಗ ಸ್ಪೀಕರ್ ಅವರು ಮಾರ್ಷಲ್ ಗಳನ್ನು ಕರೆದು, ಪ್ರತಿಭಟನಾ ನಿರತ ಸದಸ್ಯರನ್ನು ತಮ್ಮ ಕುರ್ಚಿಗಳಲ್ಲಿ ಕೂರಿಸುವಂತೆ ಸೂಚಿಸಿದರು. 

ಆ ನಂತರ ಮಾರ್ಷಲ್ ಗಳು ಟಿಡಿಪಿ ಸದಸ್ಯರನ್ನು ತಮ್ಮ ತಮ್ಮ ಕುರ್ಚಿಗಳಲ್ಲಿ ಕೂರಿಸಿದರು. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಮರಳಿದ ನಂತರ ಕಲಾಪಗಳು ಮತ್ತೆ ಆರಂಭವಾದವು. 

ಸ್ಪೀಕರ್ ಅವರ ಪೋಡಿಯಂಗೆ ನುಗ್ಗಿ ಘೋಷಣೆಗಳನ್ನು ಕೂಗಿರುವುದು ಸದನಕ್ಕೆ ಮಾಡಿರುವ ಅಪಮಾನ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ರೆಡ್ಡಿ ಹೇಳಿದರು.

‘ಆಡಳಿತಾರೂಢ ಪಕ್ಷ 151 ಸದಸ್ಯರನ್ನು ಹೊಂದಿದ್ದರೂ, ಎಲ್ಲರೂ ಶಾಂತವಾಗಿದ್ದಾರೆ. ಆದರೂ ಟಿಡಿಪಿ ಸದಸ್ಯರು ಆಡಳಿತಾರೂಢ ಪಕ್ಷದ ಸದಸ್ಯರನ್ನು ಪ್ರಚೋದಿಸುತ್ತಿದ್ದಾರೆ. ನಮ್ಮ ಪಕ್ಷದ ಸದಸ್ಯರೂ ತಾಳ್ಮೆ ಕಳೆದುಕೊಂಡರೆ ಏನಾಗಬಹುದು.’ ಎಂದು ಜಗನ್ ಮೋಹನ್ ರೆಡ್ಡಿ ಹೇಳಿದರು.