ಈಸ್ಟ್ ಲಂಡನ್, ಫೆ.13 : ಕೊನೆಯ ಓವರ್ ನಲ್ಲಿ ಮಾರಕ ದಾಳಿ ನಡೆಸಿದ ಲುಂಗಿ ಗಿಡಿ ಅವರ ಬಿಗುವಿನ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾದ ಒಂದು ರನ್ ರೋಚಕ ಜಯವನ್ನು ಇಂಗ್ಲೆಂಡ್ ವಿರುದ್ಧ ಸಾಧಿಸಿ, ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಕೊನೆಯ ಓವರ್ ನಲ್ಲಿ ಇಂಗ್ಲೆಂಡ್ ಗೆ ಆರು ಎಸೆತಗಳಲ್ಲಿ ಏಳು ರನ್ ಅವಶ್ಯಕತೆ ಇತ್ತು. ಕೈಯಲ್ಲಿ ನಾಲ್ಕು ವಿಕೆಟ್ ಗಳು ಉಳಿದಿದ್ದವು. ಈ ಹಂತದಲ್ಲಿ ಬೌಲಿಂಗ್ ಮಾಡಿದ ಲುಂಗಿ ಗಿಡಿ ಮಿಂಚಿದರು. ಮೊದಲ ಎಸೆತದಲ್ಲಿ ಎರಡು ರನ್ ನೀಡಿದರು. ಎರಡನೇ ಎಸೆತದಲ್ಲಿ ಟಾಮ್ ಕರನ್ ಗೆ ಖೆಡ್ಡಾ ತೋಡಿದರು. ಮೂರನೇ ಎಸೆತದಲ್ಲಿ ರನ್ ನೀಡಲಿಲ್ಲ. ನಾಲ್ಕನೆ ಎಸೆತದಲ್ಲಿ ಮತ್ತೆ ಎರಡು ರನ್ ನೀಡಿದರು. ಈ ಹಂತದಲ್ಲಿ ಇಂಗ್ಲೆಂಡ್ ಜಯ ಸಾಧಿಸಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಐದನೇ ಎಸೆತದಲ್ಲಿ ಮೋಯಿನ್ ಅಲಿ, ಲುಂಗಿ ಗಿಡಿ ಯಾರ್ಕರ್ ಅರಿಯುವಲ್ಲಿ ವಿಫಲರಾದರು. ಕೊನೆಯ ಎಸೆತದಲ್ಲಿ ಎರಡು ರನ್ ಪಡೆಯುವ ಭರಾಟೆಯಲ್ಲಿ ಆದಿಲ್ ರಶೀದ್ ಔಟ್ ಆದರು. ಪರಿಣಾಮ ದಕ್ಷಿಣ ಆಫ್ರಿಕಾ ಒಂದು ರನ್ ಜಯ ದಾಖಲಿಸಿತು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ಪರ ತೆಂಬು ಬವುಮಾ 43, ಕ್ವಿಂಟನ್ ಡಿಕಾಕ್ 31, ರಾಸ್ಸಿ ವ್ಯಾನ್ ಡೆರ್ ಡುಸೆನ್ 31 ರನ್ ಕಲೆ ಹಾಕಿದರು. ಅಂತಿಮವಾಗಿ ಆತಿಥೇಯ ತಂಡ 20 ಓವರ್ ಗಳಲ್ಲಿ ಎಂಟು ವಿಕೆಟ್ ಗೆ 177 ರನ್ ಕಲೆ ಹಾಕಿತು.
ಇಂಗ್ಲೆಂಡ್ ಪರ ಜೇಸನ್ ರಾಯ್ 70, ಜಾನಿ ಬೇರ್ ಸ್ಟೋ 23, ನಾಯಕ ಇಯಾನ್ ಮಾರ್ಗನ್ 52 ರನ್ ಬಾರಿಸಿದರು. ಪ್ರವಾಸಿ ತಂಡ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 176 ರನ್ ಸೇರಿಸಿ ಸೋಲು ಕಂಡಿತು.