ಸೂರತ್, ನ.28-- ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕರ್ನಾಟಕ ಸೆಮಿಫೈನಲ್ಸ್ ನಲ್ಲಿ ಹರಿಯಾಣ ತಂಡವನ್ನು ಎದುರಿಸಲಿದ್ದು, ಮತ್ತೊಮ್ಮೆ ಫೈನಲ್ ಗೆ ಏರುವ ಕನಸಿನಲ್ಲಿದೆ.
ಇದಕ್ಕೂ ಮೊದಲು ಈ ವರ್ಷದ ಆರಂಭದಲ್ಲಿ ಕರ್ನಾಟಕ ಹಾಗೂ ಹರಿಯಾಣ ತಂಡಗಳು ಕಾದಾಟ ನಡೆಸಿದ್ದು, ರಾಜ್ಯ ತಂಡ ಗೆಲುವಿನ ನಗಾರಿ ಊದಿತ್ತು. ಕರ್ನಾಟಕ ತಂಡ ಹಾಲಿ ಚಾಂಪಿಯನ್ ಪಟ್ಟ ಅಲಂಕರಿಸಿರುವ ರಾಜ್ಯ ತಂಡ, ಪ್ರಶಸ್ತಿ ಉಳಿಸಿಕೊಳ್ಳುವ ಕನಸಿನಲ್ಲಿದೆ. ಹೀಗಾಗಿ ಸೆಮಿಫೈನಲ್ಸ್ ಪಂದ್ಯದಲ್ಲಿ ಗೆಲುವು ದಾಖಲಿಸಿ, ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆಯುವ ಹಂಬಲದಲ್ಲಿದೆ.
ಕರ್ನಾಟಕ ತಂಡದ ಯುವ ಆಟಗಾರರು ತಂಡಕ್ಕೆ ನೆರವಾಗಬಲ್ಲರು. ಆರಂಭಿಕ ದೇವದತ್ ಪಡಿಕ್ಕಲ್ ಆಡಿರುವ 10 ಪಂದ್ಯಗಳಲ್ಲಿ 1 ಶತಕ ಹಾಗೂ 4 ಅರ್ಧಶತಕದ ನೆರವಿನಿಂದ 461 ರನ್ ಕಲೆ ಹಾಕಿದ್ದು, ಗರಿಷ್ಠ ರನ್ ಗಳಿಕೆಯ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ನಾಯಕ ಮನೀಷ್ ಪಾಂಡೆ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬ ಬಲ್ಲ ಆಟಗಾರ. ಇವರು 7 ಪಂದ್ಯಗಳಲ್ಲಿ 251 ರನ್ ಸೇರಿಸಿದ್ದಾರೆ. ಕೆ.ಎಲ್ ರಾಹುಲ್ (225), ರೋಹನ್ ಕದಂ (223), ಕರುಣ್ ನಾಯರ್ (186) ರನ್ ಕಲೆ ಹಾಕುತ್ತಿದ್ದು ತಂಡದ ಚಿಂತೆಯನ್ನು ದೂರ ಮಾಡಿದೆ.
ಬೌಲಿಂಗ್ ನಲ್ಲಿ ವೇಗಿ ರೋನಿತ್ ಮೋರೆ ಹಾಗೂ ವಿ.ಕೌಶಿಕ್ ವಿಕೆಟ್ ಬೇಟೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಇಬ್ಬರೂ ತಲಾ 11 ವಿಕೆಟ್ ಕಬಳಿಸಿದ್ದು, ಭರವಸೆ ಮೂಡಿಸಿದ್ದಾರೆ. ಅನುಭವಿ ಲೆಗ್ ಸ್ಪಿನ್ ಬೌಲರ್ ಶ್ರೇಯಸ್ ಗೋಪಾಲ್ ಟೂರ್ನಿಯಲ್ಲಿ 16 ವಿಕೆಟ್ ಪಡೆದಿದ್ದು, ಎದುರಾಳಿಗಳನ್ನು ಕಾಡುತ್ತಿದ್ದಾರೆ. ಆಲ್ ರೌಂಡರ್ ಗಳು ತಂಡದ ಪರ ಬಿಗುವಿನ ದಾಳಿ ನಡೆಸಿ ವಿಕೆಟ್ ಬೇಟೆ ನಡೆಸುವ ಅನಿವಾರ್ಯತೆ ಇದೆ.
ಹರಿಯಾಣ ಪರ ಹರ್ಷಲ್ ಪಟೇಲ್ (340), ಚೈತನ್ಯ ಬಿಶ್ನೋಯಿ (225) ರನ್ ಬೇಟೆಯಲ್ಲಿ ಮುಂದಿದ್ದಾರೆ. ಉಳಿದಂತೆ ಸುಮಿತ್ ಕುಮಾರ್ (166), ಶಿವಮ್ ಚೌಹಾಣ್ (221), ರೋಹಿತ್ ಶರ್ಮಾ (104) ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗಬಲ್ಲ ಆಟಗಾರ. ಇನ್ನುಳಿದಂತೆ ಬೌಲಿಂಗ್ ವಿಭಾಗದಲ್ಲೂ ಹರ್ಷಲ್ ಪಟೇಲ್ 18 ವಿಕೆಟ್ ಪಡೆದಿದ್ದಾರೆ. ಸುಮಿತ್ ಕುಮಾರ್ 11, ಆಶೀಶ್ ಹೂಡಾ ಸಹ ವಿಕೆಟ್ ಬೇಟೆಯಲ್ಲಿ ಮುಂದಿದ್ದಾರೆ. ಉಭಯ ತಂಡಗಳು ಸೆಮಿಫೈನಲ್ಸ್ ನಲ್ಲಿ ಜಯ ಸಾಧಿಸಿ ಪ್ರಶಸ್ತಿ ಸುತ್ತು ಪ್ರವೇಶಿಸುವ ಕನಸು ಹೊಂದಿವೆ.