ಸೂರತ್, ನ.30 -ದೇಶಿಯ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡ, ಪ್ರಸಕ್ತ ಋತುವಿನಲ್ಲಿ ಮತ್ತೊಂದು ಪ್ರಶಸ್ತಿ ಎತ್ತುವ ಕನಸಿನೊಂದಿಗೆ ಭಾನುವಾರ ಅಖಾಡಕ್ಕೆ ಇಳಿಯಲಿದೆ. ಸೈಯದ್ ಮುಷ್ತಾಕ್ ಅಲಿ ಟಿ-20 ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಕರ್ನಾಟಕ, ತಮಿಳುನಾಡು ತಂಡದ ವಿರುದ್ಧ ಹೋರಾಟ ನಡೆಸಲಿದೆ.
ವಿಜಯ್ ಹಜಾರೆ ಏಕದಿನ ಸರಣಿ ಗೆದ್ದು ಕೊಂಡಿರುವ ಕರ್ನಾಟಕ ಮತ್ತೊಂದು ಪ್ರಶಸ್ತಿಗೆ ಮುತ್ತಿಡುವ ಹಂಬದಲ್ಲಿದೆ. ಮನೀಷ್ ಪಾಂಡೆ ಪಡೆ ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿದ್ದು, ಎಲ್ಲರ ಗಮನ ಸೆಳೆದಿದೆ. ಇದೇ ತಿಂಗಳು ನಡೆದಿದ್ದ ಸೂಪರ್ ಲೀಗ್ ಹಂತದ ಪಂದ್ಯದಲ್ಲಿ ಕರ್ನಾಟಕ ಭರ್ಜರಿ ಪ್ರದರ್ಶನ ನೀಡಿ ತಮಿಳು ನಾಡು ತಂಡವನ್ನು ಸದೆ ಬಡೆದಿತ್ತು. ಮತ್ತೊಮ್ಮೆ ಈ ಸಾಧನೆ ಪುನರಾವರ್ತಿಸುವ ಹಂಬಲದಲ್ಲಿದೆ.
ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಸರಣಿಯ ಫೈನಲ್ ನಲ್ಲಿ ಕಾದಾಟ ನಡೆಸಿದ್ದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಮತ್ತೊಮ್ಮೆ ಟಿ-20 ಪಟ್ಟಕ್ಕಾಗಿ ಫೈಟ್ ನಡೆಸಲಿವೆ. ರಾಜ್ಯ ತಂಡದಲ್ಲಿ ಅನುಭವಿ ಹಾಗೂ ಯುವ ಆಟಗಾರರ ದಂಡೇ ಇದೆ. ಬ್ಯಾಟಿಂಗ್ ನಲ್ಲಿ ಯುವ ಆಟಗಾರ ದೇವದತ್ ಪಡಿಕ್ಕಲ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಯುವ ಆಟಗಾರ ದೇವದತ್ ರನ್ ಕಲೆ ಹಾಕುವಲ್ಲಿ ಸರಣಿಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇವರು 11 ಪಂದ್ಯಗಳಲ್ಲಿ 68.50 ಸರಾಸರಿಯಲ್ಲಿ 548 ರನ್ ಕಲೆ ಹಾಕಿದ್ದಾರೆ.
ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿರುವ ಕೆ.ಎಲ್ ರಾಹುಲ್ (291), ಮನೀಷ್ ಪಾಂಡೆ (254), ಕರುಣ್ ನಾಯರ್ (186), ರೋಹನ್ ಕದಂ (223) ರನ್ ಕಲೆ ಹಾಕುತ್ತಿದ್ದು ಭರವಸೆ ಮೂಡಿಸಿದ್ದಾರೆ. ಮಧ್ಯಮ ಕ್ರಮಾಂಲದಲ್ಲಿ ಪವನ್ ದೇಶಪಾಂಡೆ, ಕೆ.ಗೌತಮ್ ಸ್ಥಿರ ಪ್ರದರ್ಶನ ನೀಡಬೇಕಿದೆ.
ಕರ್ನಾಟಕದ ಸ್ಟಾರ್ ಸ್ಪಿನ್ನರ್ ಶ್ರೇಯಸ್ ಗೋಪಾಲ್ ಸರಣಿಯಲ್ಲಿ 18 ವಿಕೆಟ್ ಕಿತ್ತು ಆರ್ಭಟಿಸಿದ್ದಾರೆ. ಇವರ ನಂತರ ವಿ.ಕೌಶಿಕ್, ರೋನಿತ್ ಮೋರೆ ತಲಾ 11 ವಿಕೆಟ್ ಪಡೆದಿದ್ದಾರೆ. ಸುಚಿತ್, ಪ್ರವೀಣ್ ದುಬೆ ಹಾಗೂ ಸೆಮಿಫೈನಲ್ಸ್ ನಲ್ಲಿ ಬಿಗುವಿನ ದಾಳಿ ನಡೆಸಿ ಹ್ಯಾಟ್ರಿಕ್ ಸಾಧನೆ ಮಾಡಿರುವ ಅಭಿಮನ್ಯು ಮಿಥನ್ ವಿಕೆಟ್ ಬೇಟೆ ನಡೆಸಬಲ್ಲರು.
ತಮಿಳುನಾಡು ತಂಡಕ್ಕೆ ಬ್ಯಾಟಿಂಗ್ ನಲ್ಲಿ ದಿನೇಶ್ ಕಾರ್ತಿಕ್ (281), ವಾಷಿಂಗ್ಟನ್ ಸುಂದರ್ (247), ಬಾಬಾ ಅಪರಜೀತ್ (120), ಹರಿ ನಿಶಾಂತ್ (111), ವಿಜಯ್ ಶಂಕರ್ (127) ರನ್ ಕಲೆ ಹಾಕಿ ಭರವಸೆ ಮೂಡಿಸಿದ್ದಾರೆ. ವಿಕೆಟ್ ಬೇಟೆಯಲ್ಲಿ ಸಾಯ್ ಕಿಶೋರ್ 20, ಟಿ.ನಟರಾಜನ್, ಎಂ.ಸಿದ್ಧಾರ್ಥ್ ಸಹ ವಿಕೆಟ್ ಗಳನ್ನು ಕಬಳಿಸ ಬಲ್ಲರು.
ಟಿ-20 ಸರಣಿಯ ಚಾಂಪಿಯನ್ ಪಟ್ಟ ಯಾರಿಗೆ ಲಭಿಸಲಿದೆ ಎಂಬುದಕ್ಕೆ ಉತ್ತರ ಭಾನುವಾರ ಸಿಗಲಿದೆ.