ಗುಳೇದಗುಡ್ಡ13: ಭಾರತದ ಅದ್ಘುತ ಶಕ್ತಿಯಾಗಿ, ಯುವಕರ ಕಣ್ಮಣಿಯಾಗಿ, ಯುಗಯುಗಕ್ಕೂ ಮರೆಯದ ಇತಿಹಾಸ ಬರೆದ ಸ್ವಾಮಿ ವಿವೇಕಾನಂದರು ಈ ದೇಶದ ಸ್ವಾಭಿಮಾನದ ಶಿಖರ ಎಂದು ಪ್ರಖರವಾಗ್ಮಿ ಚೈತ್ರಾ ಕುಂದಾಪೂರ ಹೇಳಿದರು.
ಅವರು ರವಿವಾರ ಸಮೀಪದ ಲಾಯದಗುಂದಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 157 ನೇ ಜನ್ಮದಿನದ ನಿಮಿತ್ಯ ನೂತನ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿವೇಕಾನಂದರು ಯುವಕರನ್ನು ಸದೃಢರನ್ನಾಗಿ ಮಾಡಲು ಯತ್ನಿಸಿದರು. ಮದ್ಯನಿಷೇಧ ಅವರ ಕನಸಾಗಿತ್ತು. ಅದೇರೀತಿ ಈ ಸಂಘವೂ ಸಹ ಗ್ರಾಮದಲ್ಲಿ ಮದ್ಯನಿಷೇಧ ಮಾಡುವ ಪಣ ತೊಟ್ಟಾಗ ಸ್ವಾಮಿ ವಿವೇಕಾನಂದ ಹೆಸರಿನ ಸಂಘಕ್ಕೆ ಮಹತ್ವ ಬರುತ್ತದೆ ಎಂದರು.
ಬಾದಾಮಿಯ ಪಿಕಾರ್ಡ ಬ್ಯಾಂಕಿನ ಚೇರಮನ್ ಮಹಾಂತೇಶ ಮಮದಪೂರ ಮಾತನಾಡಿ, ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರು. ಅವರ ದಿನಾಚರಣೆಯನ್ನು ರಾಷ್ಟ್ರೀಯ ಯುವದಿನವನ್ನಾಗಿ ಆಚರಿಸಲು ಅವರ ವ್ಯಕ್ತಿತ್ವವೇ ಕಾರಣ. ಕಡಿಮೆ ವಯಸ್ಸಿನಲ್ಲಿ ಸನ್ಯಾಸಿಯಾಗಿ ಜಗತ್ತಿಗೆ ದೇಶದ ಸಂಸ್ಕೃತಿಯನ್ನು ತಿಳಿಸಿದ ವೀರಸನ್ಯಾಸಿ ಅವರು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಹಣಮಂತ ಮಾವಿನಮರದ ಮಾತನಾಡಿ, ಸಂಘಟನೆಯಿಂದ ಯುವಕರು ಬೆಳೆಯಲು ಸಾಧ್ಯ. ಚುನಾವಣಾ ಪ್ರಚಾರ ಸಂದರ್ಭದಲ್ಲಿ ಸೇರಿದ ಜನರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ಸಂದರ್ಭದಲ್ಲಿ ಯುವಕರು ಸೇರಿದ್ದನ್ನು ನೋಡಿದರೆ ಸಂಘಟನೆಗೆ ಎಷ್ಟೊಂದು ಅಧ್ಬುತ ಶಕ್ತಿ ಇದೆ ಎಂದು ಅರ್ಥವಾಗುತ್ತದೆ. ಯುವಕರು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಿ ಎಂದರು.
ಮಾಜಿಶಾಸಕ ರಾಜಶೇಖರ ಶೀಲವಂತ ಮಾತನಾಡಿ, ಸ್ವಾಮಿ ವಿವೇಕಾನಂದರ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಅವರು ತಮ್ಮ ಇಡೀ ಜೀವಮಾನವನ್ನು ಯುವಕರಿಗಾಗಿ ವಿನಿಯೋಗಿಸಿದರು. ದೇಶಕಂಡ ಅದ್ಭುತ ದೇಶಭಕ್ತ ಇವರಾಗಿದ್ದಾರೆ ಎಂದರು.
ಕಮತಗಿ-ಕೋಟೆಕಲ್ ಹೊಳೆ ಹುಚ್ಚೇಶ್ವರ ಮಠದ ಹುಚ್ಚೇಶ್ವರ ಶ್ರೀಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ, ಸ್ವಾಮಿ ವಿವೇಕಾನಂದರ 157 ನೇ ಜನ್ಮದಿನದ ಸಂದರ್ಭದಲ್ಲಿ ಯುವಕರು ಅವರ ಹೆಸರಿನ ಸಂಘ ಕಟ್ಟಿಕೊಂಡು ಸಮಾಜ ಸೇವೆಗೆ ಮುಂದಾಗಿದ್ದು ಉತ್ತಮ ಕಾರ್ಯ. ಗ್ರಾಮದ ಅನೇಕ ಸಮಸ್ಯೆಗಳಿಗೆ ಸಂಘ ಸ್ಪಂದಿಸಲಿ. ಮದ್ಯಪಾನದಂತಹ ಚಟ ಇಂದು ಯುವಕರಲ್ಲಿ ಚಾರಿತ್ರ್ಯ ಹಾಳು ಮಾಡುತ್ತಿದೆ. ಗ್ರಾಮದಲ್ಲಿ ಮದ್ಯನಿಷೇಧ ಮಾಡಲು ಸಂಘದ ಸದಸ್ಯರು ಪ್ರಥಮ ಆಧ್ಯತೆ ನೀಡಲಿ. ಅದರ ಮೂಲಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದರು.
ಸಂಘದ ಸದಸ್ಯ ಮಂಜುನಾಥ ಚಿಲ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ, ಕೆಲ ತಿಂಗಳುಗಳ ಹಿಂದೆ ನಮ್ಮ ಗ್ರಾಮಕ್ಕೆ ಮಲ್ಲಪ್ರಭಾ ನದಿ ಪ್ರವಾಹ ಬಂದಾಗ ಗ್ರಾಮಸ್ಥರು ಮನೆ, ಆಸ್ತಿ, ಬೆಳೆ, ಬೆಲೆಬಾಳುವ ವಸ್ತುಗಳನ್ನು ಕಳೆದುಕೊಂಡು ಸಾಕಷ್ಟು ಸಂಕಷ್ಟ ಅನುಭವಿಸಬೇಕಾಯ್ತು. ಆ ಸಂದರ್ಭದಲ್ಲಿ ನಮಗೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳ ಸಹಾಯ, ಸಹಕಾರವೂ ಸಮರ್ಪಕವಾಗಿ ಸಿಗಲಿಲ್ಲ. ಸಂಘಟನೆ ಇಲ್ಲದಿದ್ದರೆ ಯಾರೂ ನಮಗೆ ಸ್ಪಂದಿಸಲಾರರೆಂದು ಮನಗಂಡು ಈ ಸಂಘಟನೆಗೆ ಮುಂದಾಗಿದ್ದೇವೆ ಎಂದರು.
ಗ್ರಾಪಂ ಅಧ್ಯಕ್ಷ ಶರಣಪ್ಪ ಸಜ್ಜನ, ಜಿಪಂ ಸದಸ್ಯ ಆಸಂಗೆಪ್ಪ ನಕ್ಕರಗುಂದಿ, ಜಯಕುಮಾರ ಕೆ.ಎಸ್. ಪಿಎಸೈ ನೂರಜಹಾನ್ ವೇದಿಕೆ ಮೇಲೆ ಹಾಜರಿದ್ದರು.
ಇದೇ ಸಂದರ್ಭದಲ್ಲಿ ಚೈತ್ರಾ ಕುಂದಪೂರ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಬಸವರಾಜ ಕುಪ್ಪಸ್ತ, ಉಪಾಧ್ಯಕ್ಷ ಸಂಗಪ್ಪ ಗೌಡ್ರ,ಯಲಗೊಂಡ ಜೋಗುಳದ, ಗಂಗಪ್ಪ ಸಜ್ಜನರ, ಯಲ್ಲಪ್ಪ ಬಂಡಿವಡ್ಡರ್, ಶ್ರೀಕಾಂತ ಜಂಗ್ಮರ್, ವಿನಾಯಕ ರಂಜನಗಿ, ಬಸವರಾಜ ಸಜ್ಜನರ, ಶಿವಾನಂದ ಗೋರವರ್ ಸೇರಿದಂತೆ ಗ್ರಾಮದ ಪ್ರಮುಖರು, ಯುವಕರು ಪಾಲ್ಗೊಂಡಿದ್ದರು.