ಮುಂಡಗೋಡನಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ

ಮುಂಡಗೋಡನಲ್ಲಿ ಸ್ವಚ್ಛತಾ ಹೀ ಸೇವಾ ಅಭಿಯಾನಕ್ಕೆ ಚಾಲನೆ Swachhta He Seva campaign launched in Mundagoda

ಕಾರವಾರ, ಸೆ.17 ;- ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಆಶಯದಂತೆ ಸ್ವಚ್ಛ, ಸುಂದರ ಹಾಗೂ ಆರೋಗ್ಯ ಪೂರ್ಣ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಕೈಜೋಡಿಸೋಣ ಎಂದು ಮುಂಡಗೋಡ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ವಾಯ್‌. ದಾಸನಕೊಪ್ಪ ಹೇಳಿದರು. 

ಅವರು ಬುಧವಾರ ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಲಾದ "ಸ್ವಚ್ಛತೆಯೇ ಸೇವೆ 2025" ಅಭಿಯಾನದಡಿ ಸ್ವಚ್ಛೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಗ್ರಾಮೀಣ ಪ್ರದೇಶಗಳಲ್ಲಿನ ಜನರಲ್ಲಿ ನೈರ್ಮಲ್ಯ ಮತ್ತು ಶುಚಿತ್ವ ಕುರಿತು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸೆ.17 ರಿಂದ ಅ.2 ರವರೆಗೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಸ್ವಯಂ ಪ್ರೇರಣೆಯಿಂದ ಸಾಮೂಹಿಕ ಶ್ರಮದಾನ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಗ್ರಾಮ ಪಂಚಾಯತ್ ಕಾರ್ಯಾಲಯದಿಂದ ಆರಂಭಿಸಿ, ಪಂಚಾಯತ್ ಆದ್ಯಂತ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು. ಸ್ವಚ್ಛ, ಸುಂದರ ಗ್ರಾಮ ಪಂಚಾಯತ್‌ಯನ್ನಾಗಿ ಪರಿವರ್ತಿಸುವ ಮೂಲಕ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದರು.  

ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ (ಗ್ರಾಉ ಮತ್ತು ಪಂ.ರಾಜ್) ಹಾಗೂ ಅಭಿಯಾನದ ನೋಡಲ್ ಅಧಿಕಾರಿ ಸೋಮಲಿಂಗಪ್ಪ ಛಬ್ಬಿ ಸ್ವಚ್ಛತಾ ಹೀ ಸೇವಾ - 2025ರ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬಳಿಕ ಗ್ರಾಮ ಪಂಚಾಯತ್ ಆವರಣದಲ್ಲಿ ಕಸ ಸಂಗ್ರಹಿಸಿ, ಕಸ ವಿಲೇವಾರಿ ವಾಹನಕ್ಕೆ ತುಂಬಿಸುವ ಮೂಲಕ ಆವರಣವನ್ನು ಶುಚಿಗೊಳಿಸಲಾಯಿತು. 

ಈ ಸಂದರ್ಭದಲ್ಲಿ ಮೈನಳ್ಳಿ ಗ್ರಾಮ ಪಂಚಾಯತಿಯ ಅಧ್ಯಕ್ಷೆ ಸಗ್ಗುಬಾಯಿ ವಾಗು ಪಟಕಾರೆ, ಅಭಿವೃದ್ಧಿ ಅಧಿಕಾರಿಗಳಾದ ಮಂಜುನಾಥ, ಶಿವಾಜಿ ವಾಸಂಬಿ, ತಾಲೂಕು ಪಂಚಾಯತ್ ವಿಷಯ ನಿರ್ವಾಹಕರು, ಗ್ರಾಮ ಪಂಚಾಯತ್ ಸಿಬ್ಬಂದಿ, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.