ಶ್ರೀನಗರ, ಮೇ11,4ಜಿ ವೇಗದ ಅಂತರ್ಜಾಲ ಮರುಸ್ಥಾಪನೆ ಮಾಡುವಂತೆ ಜಮ್ಮು-ಕಾಶ್ಮೀರ ಆಡಳಿತಕ್ಕೆ ಸೂಚಿಸಲು ಸುಪ್ರೀಂಕೋರ್ಟ್ ನಿರಾಕರಿಸಿರುವುದು ಕೇಂದ್ರಾಡಳಿತ ಪ್ರದೇಶದ ಜನತೆ ಭಾರೀ ನಿರಾಸೆ ಮೂಡಿಸಿದೆ ಎಂದು ಸಿಪಿಎಂ ಹಿರಿಯ ನಾಯಕ ಮೊಹಮದ್ ಯೂಸುಫ್ ತಾರಿಗಾಮಿ ಹೇಳಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ 4-ಜಿ ಇಂಟರ್ ನೆಟ್ ಸೇವೆಗಳನ್ನು ಮರುಸ್ಥಾಪಿಸುವ ಯಾವುದೇ ಆದೇಶಗಳನ್ನು ನೀಡಲು ನಿರಾಕರಿಸಿರುವ ಸುಪ್ರೀಂಕೋರ್ಟ್, ಅರ್ಜಿದಾರರು ಎತ್ತಿರುವ ವಿಷಯವನ್ನು ಪರಿಶೀಲಿಸಲು ವಿಶೇಷ ಸಮಿತಿಯೊಂದನ್ನು ರಚಿಸಲು ಕೇಂದ್ರಕ್ಕೆ ಸೂಚಿಸುವುದಾಗಿ ಸೋಮವಾರ ಹೇಳಿದೆ.
ಇಡೀ ಪ್ರಪಂಚ ಕೊವಿಡ್-19 ಸಾಂಕ್ರಾಮಿಕ ಸೋಂಕಿನಿಂದ ಬಾಧಿತವಾಗಿರುವಾಗ ಜನರು ಅಂತರ್ಜಾಲವನ್ನು ಅವಲಂಭಿಸಿದ್ದಾರೆ. ಇದೇ ವೇಳೆ ಜಮ್ಮು-ಕಾಶ್ಮೀರ ಜನರಿಗೆ ಈ ಸೌಲಭ್ಯವನ್ನು ನಿರಾಕರಿಸಲಾಗಿದೆ. ಕಡಿಮೆ ವೇಗದ ಇಂಟರ್ ನೆಟ್ ನಿಂದ ಕೊವಿಡ್ ಕುರಿತ ಮಾಹಿತಿ ಮತ್ತು ಪರಿಹಾರ ಕ್ರಮಗಳನ್ನು ತಿಳಿಯಲು ಜನರಿಗೆ ಸಾಧ್ಯವಾಗುತ್ತಿಲ್ಲ ಎಂದು ಅವರು ದೂರಿದ್ದಾರೆ.
ಕಡಿಮೆ ವೇಗದ ಅಂತರ್ಜಾಲ ಸೌಲಭ್ಯದಿಂದ ವೈದ್ಯರು ಸೇರಿದಂತೆ ವೃತ್ತಿಪರರು ಮನೆಗಳಿಂದ ಕಾರ್ಯ ನಿರ್ವಹಿಸಲು ಆಗುತ್ತಿಲ್ಲ. ವಿದ್ಯಾರ್ಥಿಗಳು ಆನ್‍ಲೈನ್ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಹೈಸ್ಪೀಡ್ ಇಂಟರ್ ನೆಟ್ ಸೌಲಭ್ಯ ಇಲ್ಲದೆ ಉದ್ಯೋಗದ ಹಕ್ಕಿನಿಂದ ಜನತೆ ವಂಚಿತರಾಗಿದ್ದು, ಸೂಕ್ತ ಜೀವನ ಗುಣಮಟ್ಟವೂ ದೊರೆಯುತ್ತಿಲ್ಲ. ಜನರಿಗೆ ಆರ್ಥಿಕತೆ ಹೊರೆಯೂ ಹೆಚ್ಚಾಗಿದೆ ಎಂದು ತಾರಗಾಮಿ ಗಮನಸೆಳೆದಿದ್ದಾರೆ.