ನಾಲ್ಕು ನಗರಗಳಲ್ಲಿ ಸುಪ್ರೀಂಕೋರ್ಟ್ ನ್ಯಾಯಪೀಠ; ವೆಂಕಯ್ಯ ನಾಯ್ಡು ಬೆಂಬಲ

ಚೆನ್ನೈ, ಆ 11     ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ದೇಶದ ಪ್ರಮುಖ ನಗರಗಳಲ್ಲಿ ಸುಪ್ರೀಂಕೋರ್ಟ್ ಪೀಠಗಳನ್ನು ಸ್ಥಾಪಿಸಬೇಕು ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ.  

ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಸಂವಿಧಾನದ 10ನೇ ವಿಧಿಯನ್ನು ಬದಲಿಸಲು ಇದು ಸುಸಮಯ. ಈಗಾಗಲೇ ಸ್ಥಾಯಿ ಸಮಿತಿ ದಕ್ಷಿಣ, ಪಶ್ಚಿಮ ಹಾಗೂ ಪೂರ್ವ ಪ್ರದೇಶಗಳಲ್ಲಿ ಸುಪ್ರೀಂಕೋರ್ಟ್ ಪೀಠ ರಚಿಸಬೇಕು ಎಂಬ ಶಿಫಾರಸು ನೀಡಿದೆ. ಇದರಿಂದ ಜನರು ವ್ಯಾಜ್ಯಗಳಿಗೆ ದೂರ ಪ್ರಯಾಣಿಸುವ ಸಮಸ್ಯೆ ನಿವಾರಣೆಯಾಗುತ್ತದೆ ಎಂದರು.  

ದೇಶದ ಪ್ರಮುಖ ನಾಲ್ಕು ನಗರಗಳಲ್ಲಿ ಸುಪ್ರೀಂಕೋರ್ಟ್ ಪೀಠಗಳಿರಬೇಕು. ಆರಂಭದಲ್ಲಿ ಚೆನ್ನೈ ನಗರದಲ್ಲಿ ಸ್ಥಾಪನೆಯಾಗಬೇಕು. ಜೊತೆಗೆ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ನ್ಯಾಯಮೂರ್ತಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸುಪ್ರೀಂಕೋರ್ಟ್ ಎರಡು ಭಾಗಗಳಾಗಿ ವಿಂಗಡಿಸಬೇಕು. ಒಂದು ಸಾಂವಿಧಾನಿಕ ವ್ಯಾಜ್ಯಗಳನ್ನು ಇತ್ಯರ್ಥಗೊಳಿಸಿದರೆ, ಇನ್ನೊಂದು ಮೇಲ್ಮನವಿಗಳ ವಿಚಾರಣೆ ನಡೆಸಬೇಕು ಎಂದರು.  

ನ್ಯಾಯಮೂರ್ತಿಗಳ ನೇಮಕಾತಿ ಪ್ರಕ್ರಿಯೆಯನ್ನು ಮರುಪರಿಶೀಲಿಸಬೇಕಿದೆ ಎಂದ ನಾಯ್ಡು, ನ್ಯಾಯಾಂಗ ಪ್ರಕ್ರಿಯೆಗಳು ಜನಸ್ನೇಹಿಯಾಗಿದ್ದು, ನಿರ್ದಿಷ್ಟ ವರ್ಗದ ಪ್ರಕರಣಗಳು ಶೀಘ್ರ ವಿಲೇವಾರಿಯಾಗಬೇಕು. ಚುನಾವಣೆಗೆ ಸಂಬಂಧಿಸಿದ ಅರ್ಜಿಗಳನ್ನು ನ್ಯಾಯದಾನ ವಿಳಂಬವನ್ನು ತಪ್ಪಿಸಬೇಕು. 2003, 2014 ಹಾಗೂ 2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಅರ್ಜಿಗಳು ಇನ್ನೂ ವಿಚಾರಣಾ ಹಂತದಲ್ಲಿವೆ. ಇಂತಹ ಪ್ರಕರಣಗಳ ವಿಚಾರಣೆಗೆ ಆರು ತಿಂಗಳ ಕಾಲಾವಧಿ ನಿಗದಿಪಡಿಸಬೇಕು ಎಂದರು. 

ರಾಜಕೀಯದಿಂದ ನಿವೃತ್ತಿ?  

ತಾವು ತಮ್ಮ ಸುದೀರ್ಘ ಅವಧಿಯ ರಾಜಕೀಯದಿಂದ ನಿವೃತ್ತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಯೋಚಿಸುತ್ತಿರುವುದಾಗಿ ನಾಯ್ಡು ತಿಳಿಸಿದ್ದಾರೆ. ಈ ಸಂಬಂಧ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದೇನೆ. ಜೊತೆಗೆ, ತಮ್ಮ ಪತ್ನಿಗೆ ಕೂಡ ದೆಹಲಿ ತೊರೆದು ಹಳ್ಳಿಗೆ ಮರಳಲು ಸಿದ್ಧವಾಗಿರುವಂತೆ ಸೂಚಿಸಿದ್ದೇನೆ ಎಂದರು.