ನವದೆಹಲಿ, ನ 5: ರಾಷ್ಟ್ರರಾಜಧಾನಿಯಲ್ಲಿ ಜನರ ಪ್ರಾಣ ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದ್ದು ಪರಿಸರಕ್ಕೆ ಹಾನಿ, ಧಕ್ಕೆ ಉಂಟು ಮಾಡುವವರ ವಿರುದ್ಧ ಯಾವುದೇ ಮುಲಾಜು ನೋಡದೇ ಕಠಿಣ ಕ್ರಮ ಜರುಗಿಸಬೇಕೆಂದು ಸುಪ್ರೀಂಕೋರ್ಟ್ ದೆಹಲಿ ಮತ್ತು ಕೇಂದ್ರ ಸರ್ಕಾರಕ್ಕೆ ಖಡಕ್ ಸೂಚನೆ ಕೊಟ್ಟಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ವಲಯದಲ್ಲಿ ಕಟ್ಟಡ ಕಟ್ಟುವುದು, ಕಟ್ಟಡಗಳನ್ನು ಧ್ವಂಸ ಮಾಡುವುದು ಮತ್ತು ರಸ್ತೆಯಲ್ಲಿ ಕಸ ಸುಡುವುದು ಮತ್ತು ರೈತರು ಕೃಷಿ ತ್ಯಾಜ್ಯವನ್ನು ಸುಟ್ಟು ಹಾಕುವುದನ್ನು ನಿಷೇಧ ಮಾಡಲಾಗಿದೆ. ಯಾರಾದರೂ ಈ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ಅವರಿಗೆ ದುಬಾರಿ ಮೊತ್ತದ ದಂಡ ವಿಧಿಸಬೇಕು ಎಂದು ನ್ಯಾಯಾಲಯ ಸೂಚನೆ ಕೊಟ್ಟಿದೆ. ದಾರಿಯಲ್ಲಿ ಯಾರಾದರೂ ಕಸವನ್ನು ಸುಟ್ಟರೆ ಮತ್ತು ಅದಕ್ಕೆ ಕಾರಣವಾದರೆ ಅವರಿಗೆ ಐದು ಸಾವಿರ ರೂ ಗಳ ದಂಡ ವಿಧಿಸಬೇಕು. ಕಟ್ಟಡ ಕಟ್ಟುವುದು ಮತ್ತು ಕಟ್ಟಡ ಧ್ವಂಸ ಮಾಡುವ ಕೆಲಸ ಮಾಡಿದರೆ ಅಂತಹವರಿಗೆ ಒಂದು ಲಕ್ಷ ರೂ ಗಳ ದಂಡ ವಿಧಿಸಬೇಕು ಎಂದು ನ್ಯಾಯಾಲಯ ಕೇಂದ್ರ ಮತ್ತು ರಾಜ್ಯ ಎರಡೂ ಸರ್ಕಾರಗಳಿಗೆ ನಿರ್ದೇಶನ ನೀಡಿದೆ. ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತವಾಗುತ್ತಿದ್ದು ಜನರ ಉಸಿರಾಟಕ್ಕೂ ಕಷ್ಟವಾಗುತ್ತಿದೆ. ಇದನ್ನು ನೋಡಿಕೊಂಡು ಸರ್ಕಾರಗಳು ತೆಪ್ಪಗೆ ಕುಳಿತುಕೊಳ್ಳಬಾರದು, ಕಠಿಣ ಕ್ರಮ ಜರುಗಿಸಲೇಬೇಕು. ಪರಿಸರಕ್ಕೆ ಧಕ್ಕೆ ಮಾಡುವವರಿಗೆ ದುಬಾರಿ ದಂಡ ಹಾಕಲೇಬೇಕು. ಇದರಲ್ಲಿ ದಯ, ದಾಕ್ಷಿಣ್ಯ ನೋಡಕೂಡದು. ಈ ನಡುವೆ ಪರಿಸರ ಮಾಲಿನ್ಯ ತಡೆಯಲು ದೆಹಲಿ ಸರ್ಕಾರ ಸೋಮವಾರದಿಂದ ಸಮ - ಬೆಸ ಪದ್ಧತಿಯನ್ನು ಮತ್ತೆ ಜಾರಿಗೆ ತಂದಿದೆ. ಇದರ ಜೊತೆಗೆ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳ ಸಮಯವನ್ನು ಕೆಲ ದಿನಗಳ ಮಟ್ಟಿಗೆ ಬದಲಾವಣೆ ಮಾಡಿದೆ.