ಬಿಸಿಲಿನ ತಾಪಮಾನ: ಶೇ.30 ರಷ್ಟು ಕೆಲಸದಲ್ಲಿ ರಿಯಾಯಿತಿ

Sunny temperatures: 30 percent discount on work

ಬೆಳಗಾವಿ 17: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಇರುವ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುತ್ತಿರುವ ಕೂಲಿಕಾರರಿಗೆ ಶೇ.30 ರಷ್ಟು ಕೆಲಸದಲ್ಲಿ ರಿಯಾಯಿತಿ ನೀಡಲಾಗಿದ್ದು, ಇದರ ಸದುಪಯೋಗವನ್ನು ಕೂಲಿಕಾರರು ಪಡೆದುಕೊಳ್ಳಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.   

ಬೇಸಿಗೆ ಬಿಸಿಲಿನ ಪ್ರಮಾಣ ತೀವ್ರವಾಗಿರುವ ಹಿನ್ನೆಲೆಯಲ್ಲಿ ಈ ಎರಡು ತಿಂಗಳ ಮನರೇಗಾ ಯೋಜನೆಯ ಕೂಲಿಕಾರರಿಗೆ ಸಮಸ್ಯೆ ಆಗದಂತೆ ನಿಗಾವಹಿಸುವ ನಿಟ್ಟಿನಲ್ಲಿ ಕೆಲಸ ಪ್ರಮಾಣ ಶೇ.30 ರಷ್ಟು ಕಡಿಮೆ ಮಾಡಲಾಗಿದೆ. ಅದೇ ರೀತಿ ವಿಶೇಷ ಚೇತನರಿಗೆ ಹಾಗೂ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಶೇ.50 ರಷ್ಟು ಕೆಲಸದ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ. ಕೆಲಸದ ಸ್ಥಳದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ನೆರಳಿನ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು ಗ್ರಾಮೀಣ ಪ್ರದೇಶದ ಎಲ್ಲ ಕೂಲಿಕಾರರು ಇದರಂತೆ ಕೆಲಸ ಮಾಡಿಕೊಂಡು ಆರೋಗ್ಯದ ಕಡೆಗೂ ಗಮನಹರಿಸಬೇಕು ಎಂದು ತಿಳಿಸಿದ್ದಾರೆ.   

ಬಿಸಿಲಿನಿಂದ ತಪ್ಪಿಸಿಕೊಳ್ಳಲು ಕೂಲಿಕಾರರು ಆದಷ್ಟು ಬೆಳಿಗ್ಗಿನ ಸಮಯದಲ್ಲಿ ಕೆಲಸಕ್ಕೆ ಹೋಗಿ  ನಿಗದಿಪಡಿಸಿದ ಕೆಲಸ ಪೂರ್ಣಗೊಳಿಸಿ ಮನೆಗೆ ತೆರಳಹುದಾಗಿರುವುದರಿಂದ ಕೂಲಿಕಾರರ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ. ಈ ಸೌಲಭ್ಯವನ್ನು ಕೂಲಿಕಾರರು ಪಡೆದುಕೊಳ್ಳಬೇಕು ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.