ಡಿ.ಕೆ.ಶಿವಕುಮಾರ್ ಪದಗ್ರಹಣ ಸಮಾರಂಭದ ಮೇಲೆ ಭಾನುವಾರದ ಲಾಕ್ ಡೌನ್ ಅಡ್ಡಿ

ಬೆಂಗಳೂರು, ಮೇ 19,ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಸಮಾರಂಭದ ಮೇಲೆ ಭಾನುವಾರದ ಸಂಪೂರ್ಣ ಲಾಕ್ ಡೌನ್ ಕರಿನೆರಳಾಗಿ ಪರಿಣಮಿಸಿದೆ.ಹೀಗಾಗಿ ಮೇ.31ರಂದು ನಿಗದಿಯಾಗಿದ್ದ ಪದಗ್ರಹಣ ಸಮಾರಂಭ ಮುಂದೂಡಿಕೆಯಾಗಿದೆ.ಕೊರೊನಾ  ಹಿನ್ನಲೆಯಲ್ಲಿ ರಾಜ್ಯದಲ್ಲಿ ರವಿವಾರ ಸಂಪೂರ್ಣ ಲಾಕ್ ಡೌನ್  ಮಾಡುವಂತೆ ಆದೇಶಿಸಿದ ಪರಿಣಾಮ ಪದಗ್ರಹಣ ಸಮಾರಂಭ ಮುಂದೂಡಿಕೆಯಾಗಿದೆ.ಮೇ.31ಭಾನುವಾರವಾದ ಕಾರಣ ಕಾರ್ಯಕ್ರಮ ಮುಂದೂಡಿಕೆಯಾಗಿದ್ದು, ಶೀಘ್ರ ಮತ್ತೊಂದು ಮುಹೂರ್ತ ನಿಗಧಿಪಡಿಸುವುದಾಗಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್, ಸರ್ಕಾರದ ಆದೇಶವನ್ನು ಗೌರವಿಸಿ ಸಮಾರಂಭ ಮುಂದೂಡಲಾಗುತ್ತಿದೆ. ಹೈಕಮಾಂಡ್ ತಮ್ಮನ್ನು ಅಧ್ಯಕ್ಷರನ್ನಾಗಿ ಘೋಷಿಸಿದ ದಿನದಿಂದಲೂ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ. ಪದಗ್ರಹಣ ಕಾರ್ಯಕ್ರಮಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಯಾರೂ ಬರುವುದು ಬೇಡ. ಮಾಧ್ಯಮಗಳ ಮೂಲಕವೇ ನಾವು ಪದಗ್ರಹಣ ಕಾರ್ಯಕ್ರಮ ಪ್ರದರ್ಶನಕ್ಕೆ ವ್ಯವಸ್ಥೆ ಮಾಡುತ್ತೇವೆ. ರಾಜ್ಯದ ಉದ್ದಗಲಕ್ಕೂ 7200 ಕಡೆ ಈ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಿದ್ದು,
ಗ್ರಾಮ ಪಂಚಾಯತಿಯಿಂದ ನಗರದ ಎಲ್ಲಾ ಕಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎಲ್ಲಾ ಕಡೆ ಎರಡು ಟಿವಿ ವ್ಯವಸ್ಥೆ ಮಾಡಲಾಗುತ್ತದೆ. ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ವಾಚಿಸುವ ಮೂಲಕ ಅಧಿಕೃತ ಕಾರ್ಯಾರಂಭಕ್ಕೆ ಚಾಲನೆ ನೀಡುವ ತಮ್ಮ ಆಶಯವನ್ನು ಶಿವಕುಮಾರ್ ಹೇಳಿಕೊಂಡರು. ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿಲ್ಲ ಎಂದು ತಾವು ಮನೆಯಲ್ಲಿ ಸುಮ್ಮನೆ ಕೂರಲಿಲ್ಲ. ರಸ್ತೆಗಿಳಿದು ಪ್ರತಿಪಕ್ಷವಾಗಿ ಕೆಲಸ ಮಾಡಿದ್ದೇನೆ. ಜನರ ಮಧ್ಯೆ ಇದ್ದು ಪ್ರಾಮಾಣಿಕ ಸೇವೆ ಮಾಡಿದ್ದೇನೆ. ಪಕ್ಷದ ನಾಯಕರ ಜೊತೆ ಸೇರಿ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಲಾಗುತ್ತಿದೆ. ಸಂಘ ಸಂಸ್ಥೆಗಳೊಂದಿಗೆ ಜನರಿಗೆ ಕೋವಿಡ್ ಲಾಕ್ ಡೌನ್ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಕೆಪಿಸಿಸಿ ಅಧ್ಯಕ್ಷರಾಗಿ ಅಕಾರ ಸ್ವೀಕಾರ ಮಾಡದಿದ್ದರೂ ಪಕ್ಷ ಜವಾಬ್ದಾರಿ ಕೊಟ್ಟ ಬಳಿಕ ಕೆಲಸ ಆರಂಭಿಸಿದ್ದೇನೆ. ಕೊರೋನಾ ಸಮಯದಲ್ಲಿ ಕಾರ್ಯಕರ್ತರ ಜೊತೆ ಕೆಲಸ ಮಾಡುತ್ತಿದ್ದು, ಹಲವಾರು ತಾಲೂಕುಗಳಿಗೆ ಭೇಟಿ ರೈತರ ಸಮಸ್ಯೆ ಅಲಿಸಲಾಗಿದೆ. ಬಡವರಿಗೆ ಉಚಿತ ದಿನಸಿ ಆಹಾರ ವಿತರಿಸಿದ್ದೇವೆ. ರೈತರಿಂದ ತರಕಾರಿ ಹೂವು ಖರೀದಿ ಮಾಡಿ ಜನರಿಗೆ ಹಂಚಲಾಗಿದೆ ಎಂದು ವಿವರಿಸಿದರು.ಸರ್ಕಾರದ ವಿರುದ್ಧ ಹರಿಹಾಯ್ದ ಡಿ.ಕೆ.ಶಿವಕುಮಾರ್, ಸರ್ಕಾರ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ. ಯಾವುದೇ ಜನಪರ ಕಾರ್ಯಕ್ರಮ ಮಾಡಲಿಲ್ಲ. ಕೇಂದ್ರ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿದೆಯಾದರೂ ಭೌತಿಕವಾಗಿ ಎಲ್ಲಿಯೂ ನೆರವು ದೊರೆಯುತ್ತಿಲ್ಲ. ಬ್ಯಾಂಕುಗಳಿಂದ ಸಾಲ ಪಡೆದು ಬಡ್ಡಿಕಟ್ಟುವಂತೆ ಮಾಡುವ ಮೂಲಕ ಪ್ರಧಾನಿ ಮೋದಿ ಎಲ್ಲರನ್ನು ಸಾಲಗಾರರನ್ನಾಗಿ ಮಾಡುತ್ತಿದ್ದಾರೆ. ಸಬ್ಸಿಡಿ, ಗ್ರಾಂಟ್ ಮೂಲಕ ನೆರವು ಕೊಟ್ಟಿದ್ದರೆ ಒಪ್ಪಬಹುದಿತ್ತು. ಯಡಿಯೂರಪ್ಪ ಘೋಷಿಸಿರುವ 1600 ಕೋಟಿ ಪ್ಯಾಕೇಜ್ ನಲ್ಲಿ ಇದುವರೆಗೂ ಯಾರಿಗೂ ಒಂದು ರೂಪಾಯಿ ಯಾರಿಗೂ ಸಿಕ್ಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪೀಣ್ಯದಲ್ಲಿ ನಾಲ್ಕೂವರೆ ಲಕ್ಷ ಉದ್ಯಮಗಳು, ಲಕ್ಷಾಂತರ ಮಂದಿ ಕಾರ್ಮಿಕರಿದ್ದಾರೆ. ಆದರೆ ಅಲ್ಲಿ ಮೂರುವರೆ ಸಾವಿರ ಮಾತ್ರ ಕಿಟ್ ಹಂಚಲಾಗಿದೆ. ಇದು ಯಡಿಯೂರಪ್ಪ ಸರ್ಕಾರದ ಜನಪರ ಕಾಳಜಿ ಎಷ್ಟಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ. ಸರ್ಕಾರ ಸರಿಯಾಗಿ ಸ್ಪಂದಿಸಿ ನೆರವು ಘೋಷಿಸಿದಿದ್ದರೆ ದೇಶ ಕಟ್ಟುವ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗುತ್ತಿರಲಿಲ್ಲ. ಅವರೆಲ್ಲ ತಮ್ಮತಮ್ಮ ಊರಿಗೆ ಹೋಗುವಂತೆ ಮಾಡುವ ಮೂಲಕ ದೇಶಕ್ಕಾಗಿ ದುಡಿದವರಿಗೆ ಅಪಮಾನಿಸಿದ್ದಾರೆ ಎಂದು ಕುಟುಕಿದರು.ಲಾಕ್ ಡೌನ್ ಸಡಿಲಿಕೆಯಿಂದ ಸೋಂಕು ಹೆಚ್ಚಳವಾಗಿದೆ. ಕೇಂದ್ರದ ವಿರುದ್ಧವಾಗಿ ರಾಜ್ಯದಲ್ಲಿ ಮಾರ್ಗಸೂಚಿ ಅಳವಡಿಸಲಾಗಿದೆ. ಬೆಳಿಗ್ಗೆ ಮಂತ್ರಿ ಒಂದು ರೀತಿ ಹೇಳಿದರೆ ಅಧಿಕಾರಿ ಮತ್ತೊಂದು  ರೀತಿ ಹೇಳುತ್ತಿದ್ದಾರೆ. ಈ ಸರ್ಕಾರಕ್ಕೆ ಸರಿಯಾಗಿ ಜವಾಬ್ದಾರಿ ನಿಭಾಯಿಸಲು ಬರುತ್ತಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ,ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಡಿ.ಕೆ.ಶಿವಕುಮಾರ್  ಆರೋಪಿಸಿದರು.