ಬೇಸಿಗೆ ಶೇಂಗಾ ಬೆಳೆಯ ಸುರುಳಿ ಪೂಚಿ ಕೀಟ ಭಾದೆಯ ಹತೋಟಿ ಕ್ರಮ: ಡಾ.ಅಶೋಕ

ಹಾವೇರಿ: ಫೆ.27 :ಬೇಸಿಗೆ ಸೇಂಗಾ  ಬೆಳೆ ಬೆಳೆದ ರಾಣೇಬೆನ್ರ್ನರ ತಾಲೂಕಿನ ಜಮೀನುಗಳಿಗೆ ಬುಧವಾರ ಭೇಟಿ ನೀಡಿದ ಹಿರಿಯ ವಿಜ್ಞಾನಿ ಹಾಗೂ ಹನುಮನಮಟ್ಟಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ ಅಶೋಕ ಪಿ, ಕೀಟ ತಜ್ಞರಾದ ಡಾ. ಆರ್. ವೀರಣ್ಣ ಹಾಗೂ ಡಾ. ಕೃಷ್ಣಾನಾಯಕ ಎಲ್ ಅವರು ಬೇಸಿಗೆ ಶೇಂಗಾ ಬೆಳೆಯಲ್ಲಿ ಸುರುಳಿ ಪೂಚಿ ಕೀಟ ಭಾದೆಯ ಹತೋಟಿ ಕ್ರಮಗಳ ಕುರಿತು  ರೈತರಿಗೆ  ಮಾಹಿತಿ ತಿಳಿಸಿದರು.

ಬೇಸಿಗೆ ಶೇಂಗಾ ಬೆಳೆದ ಹೊಲಗಳಲ್ಲಿ ಶೇಂಗಾ ಬೆಳೆಯನ್ನು ಭಾದಿಸುವ ಸುರುಳಿ ಪೂಚಿ ಕೀಟದ ಸಮೀಕ್ಷೆ ನಡೆಸಿದರು. 

      ಕೀಟತಜ್ಞರು ರೈತರಿಗೆ ಸ್ಮರುಳಿ ಪೂಚಿ ಕೀಟದ ಭಾದೆಯ ಲಕ್ಷಣ, ಭಾದೆಯ ಹಂತ ಮತ್ತು ಸೂಕ್ತ ನಿರ್ವಹಣಾ ಕ್ರಮಗಳ ಬಗ್ಗೆ ಸಮಗ್ರವಾಗಿ ತಾಂತ್ರಿಕ ಮಾಹಿತಿ ನೀಡಿದರು.

ಸುರುಳಿ ಪೂಚಿ ಕೀಟದ ಭಾದೆಯ ಲಕ್ಷಣಗಳು:- ಸುರುಳಿ ಪೂಚಿ ಕೀಟವು ಶೇಂಗಾ ಬಿತ್ತಿದ 25 ದಿನಗಳ ನಂತರ ಕಂಡು ಬಂದು ಪ್ರಾರಂಭಿಕವಾಗಿ ಎಲೆಯ ಒಳಗೆ ಬಿಳಿ ಆಕಾರದ ಸುರಂಗ ಮಾರ್ಗ ಮಾಡಿ ಪತ್ರಹರಿತನ್ನು ತಿಂದು ನಾಶಮಾಡುತ್ತದೆ. ನಂತರ 2 ಮತ್ತು 3ನೇ ಮರಿ ಹಂತವು ಎಲೆಗಳನ್ನು ಮಡಿಚಿಕೊಂಡು ಒಳಗಡೆ ಅಡಗಿಕೊಂಡು ಎಲೆಯನ್ನು ತಿಂದು ನಾಶಪಡಿಸಿದ ನಂತರ ಎಲೆಗಳು ಸುಟ್ಟಂತೆ ಕಾಣುತ್ತದೆ. ಮುಂದುವರೆದು ಕೋಶ ಹಂತವು ಮಡಿಚಿದ ಎಲೆ ಒಳಗೆ ಇದ್ದು, ಕೋಶ ಹಂತವನ್ನು ಮುಂದುವರೆಸಿ ನಂತರ ಪ್ರೌಢ ಕೀಟವಾಗಿ ತನ್ನ ಸಂತಾನೋತ್ಪತಿ ಕ್ರೀಯಯನ್ನು ಮುಂದುವರೆಸುತ್ತದೆ.

         ಸುರುಳಿ ಪೂಚಿ ಕೀಟ ಭಾದೆಯ ಹತೋಟಿ ಕ್ರಮಗಳು:- ಬೇಸಿಗೆಯ ಶೇಂಗಾವನ್ನು ಬಿತ್ತುವ ಪೂರ್ವದಲ್ಲಿ ರೈಜೋಬಿಯಂದಿಂದ (ಪ್ರತಿ ಕೆ.ಜಿಗೆ 4 ಗ್ರಾಂ) ಬೀಜೊಪಚಾರ ಮಾಡುವುದು, ಬದು ಬೆಳೆಯಾಗಿ ಎತ್ತರವಾದ ಬೆಳೆಗಳಾದ ಸಜ್ಜೆ, ಗೋವಿನಜೋಳ, ಸೂರ್ಯಕಾಂತಿ ಬೆಳೆಯನ್ನು ಬೆಳೆಯುವುದು ಹಾಗೂ ಅಂತರ ಬೆಳೆಯಾಗಿ ಸಜ್ಜೆಯನ್ನು ಬೆಳೆಯುವುದು. ಈ ಕೀಟದ ಹತೋಟಿಗಾಗಿ ಪ್ರಾರಂಭಿಕವಾಗಿ ತತ್ತಿನಾಶಕವಾದ ಪ್ರ್ರೆಪೇನೋಫಾಸ್ ಪ್ರತಿ ಲೀಟರ್ ನೀರಿಗೆ 2 ಮೀ.ಲಿ. ನಂತೆ ಸಿಂಪರಣೆ ಮಾಡುವುದರಿಂದ ಮರಿ ಹಂತಗಳನ್ನು ಮತ್ತು ಮೊಟ್ಟೆ ಹಂತವನ್ನು ಹತೋಟಿ ಮಾಡುವ್ಯದು ಎಂದು ತಾಂತ್ರಿಕವಾಗಿ ಮಾಹಿತಿ ನೀಡಿದರು.