ಪ್ರೀತಿಸುವ ಎರಡು ಜೀವಗಳ ಮುನಿಸನ್ನು ತಣಿಸುವ ಸುಮಂಗಳಾಮೂರ್ತಿ ಗಜಲ್

ಎಲ್ಲಾ ನೋವುಗಳನು ಗುಡಿಸಿಬಿಡು ಮರಳಿ ನಗಲು 

ಎಲ್ಲಾ ಸಂತಸದ ಕವಲುಗಳನು ತೆರೆದುಬಿಡು ಮರಳಿ ನಗಲು 

ಎದೆಗೆ ತಿದಿಯೊತ್ತುವ ನೋವುಗಳನು ಗುಡಿಸಿಬಿಟ್ಟರೆ ದೊಡ್ಡನಗೆ ಚೆಲ್ಲುವುದು ಬಲು ಸುಲಭ, ಪುಟ್ಟ ಪುಟ್ಟ ಖುಷಿಗಳಿಗೂ ಬದುಕಿನಲಿ ದಾರಿ ಮಾಡಿಕೊಟ್ಟರೆ ನಗುವೆಂಬುದು ಸಲೀಸು ಎಂದು ಸಂತಸ, ಸಂಭ್ರಮದ ಬದುಕಿಗೆ ಕಿವಿಮಾತು ಹೇಳುವ ಸುಮಂಗಳಮೂರ್ತಿ ಮಾಲೂರು ಕೋಲಾರ ಜಿಲ್ಲೆಯ ಮಾಲೂರಿನವರು. ಎಂ. ಎ. ಪದವೀಧರೆ, ಮಾಲೂರಿನಲ್ಲಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಉಚಿತ ಇಂಗ್ಲೀಷ್ ಬೋಧಿಸುತ್ತಿದ್ದಾರೆ. ಕವಿತೆ, ಗಜಲ್, ಆಧುನಿಕ ವಚನಗಳು, ಸಣ್ಣ ಕಥೆಗಳು, ಲಲಿತ ಪ್ರಬಂಧಗಳು ಹೀಗೆ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರವಣಿಗೆ ಮಾಡುತ್ತಿದ್ದಾರೆ. ರಂಗಭೂಮಿಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಪ್ರಜಾವಾಣಿ, ವಿಜಯ ಕರ್ನಾಟಕ, ಬದಲಾವಣೆ, ಕರ್ಮವೀರ, ತುಷಾರ, ಸುಧಾ ಮುಂತಾದ ಪತ್ರಿಕೆಗಳಲ್ಲಿ ಇವರ ಕವಿತೆಗಳು, ಲೇಖನಗಳು ಪ್ರಕಟವಾಗಿವೆ. ನಾಡಿನಾದ್ಯಂತ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಚುಟುಕು ಸಾಹಿತ್ಯ ಸಮ್ಮೇಳನ, ಸಿರಿಗನ್ನಡ ವೇದಿಕೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಗಜಲ್ ಗೋಷ್ಠಿಗಳಲ್ಲಿ ಕವಿತೆ, ಗಜಲ್ ವಾಚನ ಮಾಡಿದ್ದಾರೆ. ‘ಕನ್ನಡ ನಿಘಂಟು’ ವಿದ್ಯಾರ್ಥಿಗಳಿಗೆ ರಚಿಸಿದ ಉಪಯುಕ್ತ ಗ್ರಂಥ, ‘ಖಾಲಿ ಹಾಳೆ’ ಎಂಬ ಮೊದಲ ಕವನ ಸಂಕಲನ ಪ್ರಕಟವಾಗಿವೆ. ಗಜಲ್ ಸಂಕಲನ ಪ್ರಕಟಣೆಯ ಹಂತದಲ್ಲಿದೆ. 2020 ರ ಪ್ರಜಾವಾಣಿ ಯುವ ಸಾಧಕ ಪುರಸ್ಕಾರ ಸೇರಿದಂತೆ  ಹಲವು ಸಂಘ ಸಂಸ್ಥೆಗಳ ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ‘ತುಳಸಿ’ ಎಂಬ ಕಾವ್ಯನಾಮದಲ್ಲಿ ಗಜಲ್ ಬರೆಯುತ್ತಿರುವ ಸುಮಂಗಳಾಮೂರ್ತಿ ರಚಿಸಿದ ಗಜಲ್‌ನ ಓದು ಮತ್ತು ಒಳನೋಟ ನಿಮಗಾಗಿ. 

ಗಜಲ್ 

ಉಳಿಸಿಕೊಂಡ ಮಾತುಗಳನು ಹೇಳಬೇಕಿದೆ ಸಿಗುವೆಯಾ 

ಮುನಿಸಿಕೊಂಡ ಕ್ಷಣಗಳನು ಕೂಡಬೇಕಿದೆ ಸಿಗುವೆಯಾ 

ಹಿಂತಿರುಗದಂತೆ ಸರಿದ ಸಮಯ ಕಾಡಿದೆ ಕಂದೀಲಾಗಿ 

ದೂಡಿಕೊಂಡ ದುಗುಡವನು ದೂರಬೇಕಿದೆ ಸಿಗುವೆಯಾ 

ಬೆರೆತ ಸಲುಗೆಯ ಸಂಜೆಗೆ ಗುಟ್ಟೊಂದು ಹೇಳುವ ತವಕ 

ಒಲವ ಬಿಸುಪಲಿ ಮೌನ ಮುರಿಯಬೇಕಿದೆ ಸಿಗುವೆಯಾ 

ಬಿರಿದ ಮಲ್ಲಿಗೆಯು ಬಿರುಸು ಮಳೆಯಲಿ ನಗುವುದೇನು 

ಬೆರೆತ ಬಂಧ ಬಿರುಕಾಗದಂತೆ ಕಾಯಬೇಕಿದೆ ಸಿಗುವೆಯಾ 

‘ತುಳಸಿ’ ಪ್ರಿಯ ನೀನು ಅರಿತ ಕ್ಷಣವೇ ಸೋತೆ ನಿನಗೆ ನಾನು 

ಹಮ್ಮುಬಿಮ್ಮು ಸೋಕದಂತೆ ಬೆರೆಯಬೇಕಿದೆ ಸಿಗುವೆಯಾ 

                                                                                - ಸುಮಂಗಳಮೂರ್ತಿ ಮಾಲೂರು  


‘ಜೊತೆ ಜೊತೆಗೆ ಸಾಗಿದ್ದೆವು ನೀ ಯಾವಾಗ ಮರೆಯಾದೆ ಗೊತ್ತೇ ಆಗಲಿಲ್ಲ, ಮಾತುಗಳಲ್ಲೇ ಮುಳುಗಿದ್ದೆವು ನೀ ಯಾವಾಗ ಮೌನವಾದೆ ಗೊತ್ತೇ ಆಗಲಿಲ್ಲ’ ಎಂದು ಜೊತೆ ನಡೆದವಳು ಕಣ್ಮರೆಯಾದ ಘಳಿಗೆ ನೆನೆಸಿಕೊಂಡು ಹೀಗೆ ಬರೆಯುತ್ತಾನೆ ಒಬ್ಬ ಕವಿ. ಪ್ರೀತಿ ಎಂಬುದು ವರ್ಣಿಸಲಾಗದ, ವಿವರಿಸಲಾಗದ ಮಧುರಾತಿಮಧುರ ಅನುಭವ. ಅದರ ತೋಳ ತೆಕ್ಕೆಯಿಂದ ಅಷ್ಟು ಸುಲಭಕ್ಕೆ ಬಿಡಿಸಿಕೊಳ್ಳುವುದು ಸಾಧ್ಯವಿಲ್ಲ. ಪ್ರೀತಿ ಎಂದ ಮೇಲೆ ಮಾತು, ಮುನಿಸು, ವಿರಹ, ಚಡಪಡಿಕೆ, ಕೋಪ ಎಲ್ಲವೂ ಸಹಜವೇ ತಾನೆ. ‘ಮನೆಯ ತಲಬಾಗಿಲಲ್ಲಿ ಒಣಗಿದರೆ ತೋರಣ ನಾನಷ್ಟೇ ಅಲ್ಲ ಗೆಳತಿ ನೀನೂ ಕಾರಣ’ ಎಂಬುದು ಪ್ರೀತಿ ಮುರಿದು ಬೀಳಲು, ಅನುಮಾನ-ಶಂಕೆಗಳು ಕಾಡಲು ಇಬ್ಬರದೂ ಸಮಪಾಲಿದೆ ಎನ್ನುವುದನ್ನು ಸಾರುತ್ತದೆ. ಅಹಮಿಕೆಯಲಿ ಮುಳುಗಿದರೆ ಜೀವಂತ ಪ್ರೀತಿಯೊಂದು ಜೀವ ಕಳೆದುಕೊಂಡಂತೆ. ಈ ಗಜಲ್‌ನಲ್ಲಿ ಸುಮಂಗಳಮೂರ್ತಿ ಅವರು ಏನೇ ಮುನಿಸು, ಆರೋಪಗಳಿದ್ದರೂ ಜೊತೆಯಾಗಿ ಬಗೆಹರಿಸಿಕೊಳ್ಳೋಣ ಒಮ್ಮೆ ಸಿಗುತ್ತೀಯಾ ಎನ್ನುತ್ತಲೇ ಎದೆಯ ಎಲ್ಲ ಅಹವಾಲುಗಳಿಗೆ ಮುಖಾಮುಖಿಯಾಗಿ ಪರಿಹಾರ ಕೊಡಲು ಬಯಸುತ್ತಾರೆ. 

ನಿನಗೆ ಹೇಳಲೇಬೇಕೆಂದ ಮಾತುಗಳೆಲ್ಲ ಹಾಗೇ ಉಳಿದುಕೊಂಡಿವೆ, ಎದೆಬಿಡಿಸಿ ಕೆಡಹುವೆನು ಒಮ್ಮೆ ಸಿಗುವೆಯಾ? ಮುನಿಸಿಕೊಂಡು ಮಾತುಬಿಟ್ಟ ಘಳಿಗೆಗಳನು ಮತ್ತೆ ಜೊತೆಯಾಗಿ ಕಳೆಯಬೇಕಿದೆ ದಯವಿಟ್ಟು ಒಮ್ಮೆ ಭೇಟಿಯಾಗು ಎಂಬ ಪ್ರಾಮಾಣಿಕ ಪ್ರೀತಿಯ ಪ್ರಾರ್ಥನೆ ಈ ಗಜಲ್‌ನಲ್ಲಿ ಕೇಳಿ ಬರುತ್ತದೆ. ಒಟ್ಟಿಗೆ ಕಳೆಯಬೇಕಾದ ಸಮಯ ಸರಿದುಹೋಗಿದೆ. ಇನ್ನೆಂದೂ ಅದು ಮರಳಿ ಸಿಗದು. ಅದೇ ನೆನಪಿನಲ್ಲಿ ಜೀವ ವಿಲವಿಲಗುಟ್ಟಿದೆ. ನಾವೇ ಮೈಮೇಲೆ ಎಳೆದುಕೊಂಡ ದುಗುಡದ ಮೇಲೆ ಆರೋಪ ಮಾಡಬೇಕಿದೆ. ನಮ್ಮಿಬ್ಬರ ಹೃದಯಗಳು ಬೆರೆತ ಸಲುಗೆಯ ಸಂಜೆಗೆ, ಬಚ್ಚಿಟ್ಟ ಗುಟ್ಟೊಂದನು ನಿನ್ನೆದುರು ಹೇಳಬೇಕಿದೆ. ಮೊದಲಿನ ಆ ಒಲವಿಗೆ ಮರಳಲಾದರೂ ಬಿಗ್ಗಬಿಗಿಯಾದ ಮೌನ ಮುರಿಯಬೇಕಿದೆ. ಅರಳಿದ ಮಲ್ಲಿಗೆ ಜೋರು ಮಳೆಗೆ ಹೇಗೆ ನಗಬಲ್ಲದು ಹೇಳು? ಬೆರೆತ ಬಾಂಧವ್ಯ ಮತ್ತೆಂದಿಗೂ ಬಿರುಕು ಬಿಡದಂತೆ ಕಾಪಿಟ್ಟುಕೊಳ್ಳಬೇಕಿದೆ. ನನ್ನ ಜೀವದೊಲವಿನ ಗೆಳೆಯ ನೀನು, ನಿನ್ನ ಪ್ರೀತಿ ತಿಳಿದ ಕ್ಷಣವೇ ನನ್ನನ್ನೇ ಸೋತೆ ನಿನಗೆ ನಾನು. ನಮ್ಮೆಲ್ಲ ಅಹಮಿಕೆ, ಬಿಗುಮಾನಗಳನ್ನು ಬದಿಗಿಟ್ಟು ಮತ್ತೆ ಒಲವ ಮಳೆಯಲಿ ಮೀಯೋಣ ಒಮ್ಮೆ ಸಿಗುತ್ತೀಯಾ ಎಂಬ ಪರಿಪರಿಯ ಬೇಡಿಕೆ ವ್ಯಕ್ತಪಡಿಸುವ ಈ ಗಜಲ್, ಪ್ರೀತಿಸುವ ಎರಡು ಜೀವಗಳ ಮುನಿಸನ್ನು ತಣಿಸುವ ಕೆಲಸ ಮಾಡುತ್ತದೆ. 

ಗಜಲ್ ಎಂದರೆ ಹೃದಯಗಳ ವೃತ್ತಾಂತ, ಪ್ರೇಮ-ಮೋಹದ ವಿದ್ಯಮಾನಗಳ ಹೇಳಿಕೆ, ಆತ್ಮಸಖಿಯೊಡನೆ ಸಖ ನಡೆಸುವ ಆಪ್ತ ಸಂವಾದ ಎಂಬುದು ಈ ಗಜಲ್‌ನಲ್ಲಿ ಅಭಿವ್ಯಕ್ತವಾಗಿದೆ. ಕಾಡುವ, ಎಲ್ಲರ ಎದೆಗೆ ಮುಟ್ಟುವ ಗಜಲ್ ಬರೆದ ಸುಮಂಗಳಾಮೂರ್ತಿ ಮಾಲೂರು ಇವರಿಗೆ ಅಭಿನಂದನೆಗಳು. 

- * * * -