ಹೆಣ್ಣು ಮಗುವಿನ ಭವಿಷ್ಯಕ್ಕೆ ಭದ್ರತೆಯಾಗಲಿದೆ ಸುಕನ್ಯಾ ಸಮೃದ್ಧಿ ಯೋಜನೆ

ಹೈದರಾಬಾದ್: ಹೆಣ್ಣು ಮಕ್ಕಳ ಕ್ಷೇಮಾಭಿವೃದ್ಧಿಗಾಗಿ ರೂಪಿಸಲ್ಪಟ್ಟ ಒಂದು ವಿಶಿಷ್ಟ ಯೋಜನೆ. ಉನ್ನತ ವಿದ್ಯಾಭ್ಯಾಸ ಮತ್ತು ಮದುವೆಯ ಸಂದರ್ಭಗಳಲ್ಲಿ ಆರ್ಥಿಕವಾಗಿ ನೆರವಾಗುತ್ತದೆ ಸುಕನ್ಯಾ ಸಮೃದ್ಧಿ ಯೋಜನೆ. ಅವಧಿಯ ದೃಷ್ಟಿಯಿಂದಲೂ ದೀರ್ಘ‌ಕಾಲಕ್ಕೆ ಧನ ಸಂಚಯ ಮಾಡುವಂತಹ ಯೋಜನೆ ಇದಾಗಿದೆ.

ದೇಶಾದ್ಯಂತ ಹೆಣ್ಣು ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಪ್ರಧಾನಿ ಮೋದಿ ಅವರು ಆರಂಭಿಸಿದ 'ಸುಕನ್ಯಾ ಸಮೃದ್ಧಿ ಯೋಜನೆ'ಯನ್ನು ಮತ್ತಷ್ಟು ಜನರಿಗೆ, ಅದರಲ್ಲೂ ಬಡಜನತೆಗೆ ಕೈಗೆಟುಕುವಂತೆ ಮಾಡಲು ಸರಕಾರ ಮಹತ್ವದ ಕ್ರಮ ಕೈಗೊಂಡಿದೆ. ಈ ಯೋಜನೆಯಡಿ ವಾರ್ಷಿಕ ಕಡ್ಡಾಯವಾಗಿ ಕಟ್ಟಬೇಕಾಗಿದ್ದ ಕನಿಷ್ಠ ಠೇವಣಿ ಮೊತ್ತವನ್ನು ಈವರೆಗೂ ಇದ್ದ 1,000 ರೂ.ನಿಂದ 250 ರೂ.ಗೆ ಇಳಿಸಲಾಗಿದೆ.

ಸುಕನ್ಯಾ ಸಮೃದ್ಧಿ  ಉಳಿತಾಯ ಖಾತೆ ಸರ್ಕಾರಿ ಪ್ರಾಯೋಜಿತ ಯೋಜನೆಯಾಗಿದ್ದು. ಭಾರತದ ಯಾವುದೇ ಅಂಚೆ ಕಛೇರಿ ಹಾಗು ಕೆಲವು ಅಂಗೀಕೃತ ಬ್ಯಾಂಕ್ ಗಳಲ್ಲಿ ಖಾತೆ ತೆರೆಯಲು ಅವಕಾಶವಿದೆ.

ಹೆಣ್ಣು ಮಗು ಹುಟ್ಟಿದಂದಿನಿಂದ ಅದಕ್ಕೆ ಹತ್ತು ವರ್ಷ ತುಂಬುವ ವರೆಗೆ ಯಾವಾಗ ಬೇಕಾದರೂ ಸುಕನ್ಯ ಸಮೃದ್ಧಿ ಯೋಜನೆಯ ಖಾತೆ ತೆರೆಯಬಹುದು. ಒಂದು ಮಗುವಿಗೆ ಕೇವಲ ಒಂದೇ ಖಾತೆ ತೆರೆಯಲು ಅವಕಾಶವಿದೆ. ಅವಳಿ ಜವಳಿ ಹೆಣ್ಣು ಮಕ್ಕಳಾದ ಸಂಧರ್ಭಗಳಲ್ಲೂ ಒಂದೊಂದು ಮಗುವಿಗೂ ಒಂದು ಖಾತೆ ಹೊಂದಲು ಅವಕಾಶವಿದೆ. ಖಾತೆ ತೆರೆದ ನಂತರ ಪೋಷಕರು ಕನಿಷ್ಠ ಪ್ರತೀ ವರ್ಷ 250 ರೂಪಾಯಿಗಳನ್ನು ಖಾತೆಗೆ ತುಂಬಬೇಕು. ಗರಿಷ್ಠ 1,50,000.ರೂ.ಗಳನ್ನು ಖಾತೆಗೆ ತುಂಬಬಹುದು . .

ಹೆಣ್ಣು ಮಗು ಹತ್ತು ವರ್ಷ ಪೂರೈಸಿದ ನಂತರ ಆಕೆಯೇ ಆ ಖಾತೆಯನ್ನು ನಿಭಾಯಿಸಬಹುದು. ಹೆಣ್ಣು ಮಗುವಿಗೆ ಹದಿನೆಂಟು ವರ್ಷಗಳು ತುಂಬಿದ ಬಳಿಕ ಖಾತೆಯಲ್ಲಿ ಇರುವ ಹಣದ ಶೇ.50ಹಣವನ್ನು ಶೈಕ್ಷಣಿಕ ಖರ್ಚುಗಳಿಗೆ ಪಡೆಯಲು ಅವಕಾಶವಿದೆ. ಈ ಖಾತೆಯು ಹೆಣ್ಣು ಮಗುವಿಗೆ ಇಪ್ಪತ್ತೊಂದು ವರ್ಷಗಳು ತುಂಬಿದಾಗ ಪರಿಪೂರ್ಣವಾಗುತ್ತದೆ. ಆಗ ಆ ಖಾತೆಯನ್ನು ಮುಕ್ತಾಯ ಮಾಡಬೇಕು. ಮುಕ್ತಾಯ ಮಾಡದಿದ್ದ ಪಕ್ಷದಲ್ಲಿ ಆ ಖಾತೆಯಲ್ಲಿರುವ ಹಣಕ್ಕೆ ಮುಂದೆ ಯಾವುದೇ ಬಡ್ಡಿಯನ್ನು ನೀಡಲಾಗುವುದಿಲ್ಲ. ಹೆಣ್ಣು ಮಗುವಿಗೆ ಹದಿನೆಂಟು ವರ್ಷ ತುಂಬಿದ್ದು ಮದುವೆಯಾಗಿಹೋದರೆ ಆ ಮಗುವಿನ ಖಾತೆಯನ್ನು ಮುಕ್ತಾಯ ಮಾಡಬಹುದು.ಖಾತೆ ತೆರೆದು 21 ವರ್ಷದ ಬಳಿಕ ಮೆಚ್ಯೂರಿಟಿಯಾಗುತ್ತದೆ.

ಉತ್ತಮ ಬಡ್ಡಿ ಸಿಗುವುದರ ಜೊತೆಗೆ ಯಾವುದೇ ಪೋಸ್ಟ್ ಆಫೀಸ್, ಅಥವ ಪ್ರತಿಷ್ಟಿತ ಬ್ಯಾಂಕ್ ನ ಶಾಖೆಗಳಲ್ಲೂ ಈ ಯೋಜನೆಯ ಸೌಲಭ್ಯ ಪಡೆಯಬಹುದು ಎಂದು ಅರ್ಥಿಕ ಸಲಹೆಗಾರ ಸುಬ್ಬಾರಾವ್ ತಿಳಿಸಿದ್ದಾರೆ, ತೀರಾ ಕಡಿಮೆ ಆದಾಯದ ಜನರು ಸಹ ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ.