ಸಕ್ಕರೆ ಕಾರ್ಖಾನೆಗಳಿಗೂ ಸಂಕಷ್ಟದ ಸ್ಥಿತಿ ಸೂಕ್ತ ಬೆಲೆ ನೀರೀಕ್ಷೆಯಲ್ಲಿ ಅನ್ನದಾತ

ಬರ, ನೆರೆ-ಅತಿವೃಷ್ಟಿಯಿಂದ ಶೇ.35ರಷ್ಟು ಕಬ್ಬು ನಾಶ ಹಂಗಾಮು ಆರಂಭಿಸಲು ಸಿದ್ಧತೆ ಆರಂಭ  

ಸಂತೋಷಕುಮಾರ್ ಕಾಮತ್   

ಮಾಂಜರಿ 12:  ಪ್ರಸಕ್ತ ಸಾಲಿನಲ್ಲಿ ಭೀಕರ ಬರಗಾಲ, ಪ್ರವಾಹ ಮತ್ತು ಅತಿವೃಷ್ಟಿಯಿಂದಾಗಿ ಗಡಿಭಾಗದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ ಶೇ.35ರಷ್ಟು ಕಬ್ಬು ಬೆಳೆ ನಾಶಗೊಂಡಿದ್ದು ಪ್ರಸಕ್ತ ಸಾಲಿನ ಕಬ್ಬು ನುರಿಸಲು ಗಡಿ ಭಾಗದ ಸಕ್ಕರೆ ಕಾರ್ಖಾನೆಗಳು ಸಜ್ಜಾಗುತ್ತಿವೆ. ಪ್ರತಿ ಟನ್ನಿಗೆ ಬೆಲೆ ಎಷ್ಟು ಎಂಬುದು ರೈತರಲ್ಲಿ ಎದುರಾಗಿರುವ ಪ್ರಶ್ನೆ.  

ಈ ವರ್ಷ ಕೃಷ್ಣಾ, ದೂಧಗಂಗಾ ಸೇರಿದಂತೆ ಉಪನದಿಗಳಿಗೆ ನೆರೆ ಎದುರಾಗಿ ಸಹಸ್ರಾರು ಎಕರೆಯಲ್ಲಿ ಬೆಳೆದಿದ್ದ ಕಬ್ಬು ಶೇ.35ರಷ್ಟು ನಾಶವಾಗಿದ್ದರಿಂದ ಕಬ್ಬು ಬೆಳೆಗಾರರ ಜೊತೆಗೆ ಸಕ್ಕರೆ ಕಾರ್ಖಾನೆಗಳೂ ಸಹ ಸಂಕಷ್ಟ ಅನುಭವಿಸುವ ಪ್ರಸಂಗ ಬಂದೊದಗಿದೆ.  

ವಿಶೇಷ  

ಚಿಕ್ಕೋಡಿ ತಾಲೂಕಿನಲ್ಲಿ ಪಂಚನದಿಗಳಾದ ಕೃಷ್ಣಾ, ದೂಧಗಂಗಾ, ಪಂಚಗಂಗಾ, ವೇದಗಂಗಾ ಮತ್ತು ಚಿಕೋತ್ರಾ ನದಿಗಳ ಕೃಾಕಟಾಕ್ಷವಿದ್ದರೂ ಪ್ರಸಕ್ತ ಸಾಲಿನ ಭೀಕರ ಭರಗಾಲದಿಂದ  ಶೇ.22ರಷ್ಟು ಬೆಳೆ ನೀರಿನ ಅಭಾವದಿಂದ ಒಣಗಿ ಹೋಗಿದೆ. ಇದರ ಬೆನ್ನಲ್ಲಿ ಪ್ರವಾಹ ಬಂದು ಶೇ.13ರಷ್ಟು ಕಬ್ಬು ನಾಶವಾಗಿದೆ. ಚಿಕ್ಕೋಡಿ ತಾಲೂಕಿನಲ್ಲಿ 45,700 ಹೆಕ್ಟೇರ್ ಕಬ್ಬು ಬೆಳೆಯಲಾಗಿತ್ತು. ಇದರಲ್ಲಿ ಬರಗಾಲದಿಂದ 9,500 ಮತ್ತು ಪ್ರವಾಹದಿಂದಾಗಿ 7,500 ಹೆಕ್ಟೇರ್ ಕಬ್ಬು ನಾಶವಾಗಿದೆ. ಇದರಿಂದ ಕಬ್ಬು ಉತ್ಪಾದಕರಿಗೆ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ವರ್ಷ ತಲೆನೋವುಉಂಟುಮಾಡಿದೆ.  

ಪ್ರಸಕ್ತ ಸಾಲಿನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನಲ್ಲಿ 45,700 ಹೆಕ್ಟೇರ್ ಪ್ರದೇಶದಲ್ಲಿ ರೈತರು ಕಬ್ಬು ಬೆಳೆದಿದ್ದಾರೆ. ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಸಂಪೂರ್ಣ ಒಣಗಿ ಹೋಗಿರುವುದರಿಂದ ರೈತರು ಕಟಾವು ಮಾಡಿ ಜಾನುವಾರುಗಳಿಗೆ ಮೇವು ಮಾಡಿ ಹಾಕಿದ್ದಾರೆ. ಸುಮಾರು 5000 ಹೆಕ್ಟೇರ್ ಕಬ್ಬು ನಾಶವಾಗುವ ಹಂತ ತಲುಪಿದೆ. ಇದರ ಪರಿಣಾಮ ಬರುವ ಹಂಗಾಮಿನಲ್ಲಿ ಸಕ್ಕರೆ ಕಾರ್ಖಾನೆಗಳು ತೊಂದರೆ ಅನುಭವಿಸುವ ಪ್ರಸಂಗ ಬಂದೊದಗಲಿದೆ.ಕಳೆದ ಹಂಗಾಮಿನಲ್ಲಿ ಕರ್ನಾಟಕ-ಮಹಾರಾಷ್ಟ್ರದ ಗಡಿಭಾಗದ ಸಕ್ಕರೆ ಕಾರ್ಖಾನೆಗಳು ಪ್ರತಿಟನ್ಗೆ 3000 ನೀಡಿವೆ. ಇಂದು ರಸಗೊಬ್ಬರ ಬೆಲೆ ಏರಿಕೆ, ಕೃಷಿ ಕೂಲಿಕಾರರ ಸಂಬಳ ಹೆಚ್ಚಳ ಮತ್ತು ನಿರ್ವಹಣೆ ವೆಚ್ಚ ಹೆಚ್ಚಾಗಿದೆ. ಹೀಗಾಗಿ ಈ ವರ್ಷ ಸರಾಸರಿ ಪ್ರತಿ ಟನ್ನಿಗೆ 4000 ರೂ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.  

ಚಿಕ್ಕೋಡಿ ತಾಲೂಕಿನಲ್ಲಿ ಉತ್ಪಾದಿಸಿದ ಕಬ್ಬು ತಾಲೂಕಿನ ಚಿಕ್ಕೋಡಿ, ಬೇಡಕಿಹಾಳ, ನಿಪ್ಪಾಣಿ ಮತ್ತು ಜೈನಾಪೂರ, ರಾಯಬಾಗ ತಾಲೂಕಿನ ಯಡ್ರಾಂವ, ಅಥಣಿ ತಾಲೂಕಿನ ಶಿರಗುಪ್ಪಿ, ಹುಕ್ಕೇರಿ ತಾಲೂಕಿನಬೆಲ್ಲದ ಬಾಗೇವಾಡಿ ಮತ್ತು ಸಂಕೇಶ್ವರ ಹಾಗೂ ಮಹಾರಾಷ್ಟ್ರದ ಗಡಿಭಾಗದ ಕಾರ್ಖಾನೆಗಳಾದ ಟಾಕಳಿ, ಹುಪರಿ, ಇಚಲಕರಂಜಿ, ಶಿರೋಳ, ಕಾಗಲ ಮತ್ತು ಹಮಿದವಾಡ ಹೀಗೆ 14 ಕಾರ್ಖಾನೆಗಳಿಗೆ ಕಬ್ಬು ಸಾಗನೆಯಾಗುತ್ತಿದೆ. ರಾಜ್ಯದ ಗಡಿಭಾಗದ ರೈತರು ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳ ಸದಸ್ಯತ್ವ ಹೊಂದಿದ್ದರಿಂದ ಕಬ್ಬು ಮಹಾರಾಷ್ಟ್ರದ ಗಡಿ ಕಾರ್ಖಾನೆಗಳಿಗೆ  

ಶೇ.40ರಷ್ಟು ಕಬ್ಬು ಸಾಗನೆಯಾಗುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ ಸರಾಸರಿ ಶೇ.35ರಷ್ಟು ಉತ್ಪಾದನೆ ಕುಸಿದಿದ್ದರಿಂದ ಕಬ್ಬು ಸಾಗಿಸಲು ಕಾರ್ಖಾನೆಗಳಲ್ಲಿ ಪೈಪೋಟಿ ನಡೆಸಲಿವೆ.  

ಸಕ್ಕರೆ ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ನುರಿಯುವ ಹಂಗಾಮು ಪ್ರಾರಂಭಿಸಲು ಸಜ್ಜಾಗಿದ್ದು ಪ್ರಸಕ್ತ ಹಂಗಾಮಿನ ಪ್ರತಿ ಟನ್ ಕಬ್ಬಿಗೆ 4000 ರೂ. ನೀಡಬೇಕು. ರೈತರು ಅತಿಯಾದ ಮಳೆ ಮತ್ತಿತರ ಕಾರಣಗಳಿಂದ ಬೆಳೆ ಕಳೆದುಕೊಂಡಿದ್ದು ಸಂಕಷ್ಟದಲ್ಲಿದ್ದಾರೆ. ಅಳಿದುಳಿದ ಬೆಳೆಗಾದರೂ ಸರ್ಕಾರ ಸೂಕ್ತ ಬೆಂಬಲ ಬೆಲೆ ನೀಡಲಿ.  

ಮಂಜುನಾಥ ಪರಗೌಡರ  

 ರೈತ ಸಂಘದ ಜಿಲ್ಲಾಧ್ಯಕ್ಷ