ಆಲೀವ್ ರಿಡ್ಲೆ ಆಮೆಗಳ ಚಿಕಿತ್ಸೆ, ಪುನರ್ವಸತಿ ಕೇಂದ್ರ ಸ್ಥಾಪನೆಗೆ ಸಿದ್ಧತೆ

ಕಾರವಾರ 10: ಆಲೀವ್ ರಿಡ್ಲೆ ಆಮೆಗಳ ಚಿಕಿತ್ಸೆ ಹಾಗೂ ಪುನರ್ವಸತಿ ಕೇಂದ್ರ ಸ್ಥಾಪನೆಗೆ ಕಡಲಜೀವಿ ರಕ್ಷಣೆ ಅರಣ್ಯ ವಿಭಾಗ ನೀಲನಕಾಶೆ ತಯಾರಿಸುತ್ತಿದೆ.ಕೆ -ಶೋರ್ ಯೋಜನೆ ಅಡಿ ವಿಶ್ವಬ್ಯಾಂಕ್ ನೆರವಿನಲ್ಲಿ ಕಡಲ ಜೀವಿ ಅಮೆಗಳ ರಕ್ಷಣೆ ಹಾಗೂ ಪುನರ್ವಸತಿ ಕೇಂದ್ರ ಸ್ಥಾಪನೆಗೆ 4 ಕೋಟಿ ರೂ.ಅನುದಾನ ಬರಲಿದೆ. ಈ ಅನುದಾನದಲ್ಲಿ ಕಡಲ ಆಮೆಗಳ ಅಧ್ಯಯನ, ಸಂಶೋಧನಾ ಕೇಂದ್ರ ಹಾಗೂ ಚಿಕಿತ್ಸಾ ಕೇಂದ್ರ ರೂಪಗೊಳ್ಳಲಿದೆ. ಸಿಆರ್ ಝೆಡ್ ವಲಯ ಬಿಟ್ಟು ಕಾರವಾರದ ಅರಣ್ಯ ಇಲಾಖೆಗೆ ಸೇರಿದ ಟ್ರೀ ಪಾರ್ಕ್‌ ಬಳಿ ಅಮೆಗಳ ರಕ್ಷಣಾ ಘಟಕ ಪ್ರಾರಂಭವಾಗಲಿದೆ. ಈಗಾಗಲೇ ಆಲೀವ್ ರಿಡ್ಲೆ ಆಮೆಗಳನ್ನು ಉಡುಪಿಯ ವನ್ಯಜೀವಿಗಳ ವೈದ್ಯರು ನೋಡಿಕೊಳ್ಳುತ್ತಿದ್ದಾರೆ.  ಕಾರವಾರದಲ್ಲಿ ಸ್ಥಾಪನೆಯಾಗುವ ಅಲೀವ್ ರಿಡ್ಲೆ ಆಮೆಗಳ ಪುನರ್ವಸತಿ ಕೇಂದ್ರಕ್ಕೆ ಕಡಲ ಜೀವಿಗಳ ಚಿಕಿತ್ಸಾ ವೈದ್ಯರನ್ನು ಸಹ ನೇಮಿಸಲಾಗುತ್ತದೆ ಎಂದು ಕಾರವಾರ ಅರಣ್ಯ ವಿಭಾಗದ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.  

ಆಮೆ ರಕ್ಷಣಾ ಘಟಕ ಸ್ಥಾಪನೆಯಿಂದ ಟೂರಿಜಂಗೆ ಸಹ ಪ್ರೋತ್ಸಾಹ ದೊರೆಯಲಿದೆ ಎಂದು ಅಂದಜಿಸಲಾಗಿದೆ. ಅರಣ್ಯ ಇಲಾಖೆಯ ಕಡಲ ಜೀವಿ ರಕ್ಷಣಾ ಘಟಕ ಕೆ-ಶೋರ್ ಯೋಜನೆಯನ್ನು ನಾಲ್ಕು ಕೋಟಿ ವೆಚ್ಚದಲ್ಲಿ ನಿರ್ಮಿಸಲು ಡಿಪಿಆರ್‌ ಪ್ಲಾನ್ ಸಿದ್ಧಮಾಡಿಕೊಳ್ಳತೊಡಗಿದೆ.ಕಳೆದ ವರ್ಷ ಆಲೀವ್ ರಿಡ್ಲೆ ಮೊಟ್ಟೆ ರಕ್ಷಿಸಿ ಐದು ನೂರಕ್ಕೂ ಹೆಚ್ಚು ಆಮೆಮರಿಗಳನ್ನು ಕಡಲಿಗೆ ಬಿಡಲಾಗಿತ್ತು. ಇದನ್ನು ಗಮನಿಸಿದ ವಿಶ್ವ ಬ್ಯಾಂಕ್ ಅಳಿವಿನಂಚಿನಲ್ಲಿರುವ ಕಡಲ ಅಮೆ ರಕ್ಷಣೆಗೆ ಅನುದಾನ ನೀಡಲು ಮುಂದಾಗಿದೆ.