ಬನ್ನಿ ವೃಕ್ಷದ ಪೂಜೆಯ ಮಹತ್ವ

ವರದಿ: ಸಚೀನ ಇಂಡಿ   

ಇಂಡಿ 12:  ನವರಾತ್ರಿಯ ಹತ್ತನೇ ದಿನ ದಸರಾ ಅಥವಾ ವಿಜಯದಶಮಿ ಆಚರಿಸುತ್ತಾರೆ. ನವರಾತ್ರಿಯಲ್ಲಿ ದಸರಾ ಪ್ರಮುಖವಾದ ಆಚರಣೆ. ಈ ದಿನದಂದು ಬನ್ನಿ ಮರವನ್ನು ಪೂಜಿಸುವುದು ವಾಡಿಕೆ. ಕಿರಿಯರು ಹಿರಿಯರಿಗೆ ಬನ್ನಿ ಎಲೆಗಳನ್ನು ನೀಡುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಈ ದಿನ ಬನ್ನಿ ಎಲೆಗಳನ್ನು ಚಿನ್ನದಂತೆ ಹಂಚಲಾಗುತ್ತದೆ. ಈ ಬನ್ನಿ ಪೂಜೆಯ ಹಿಂದಿನ ಧಾರ್ಮಿಕ ಕಥೆಯೇನು? ವಿವರ ಇಲ್ಲಿದೆ.ದಸರಾ ಹಬ್ಬದಂದು ಬನ್ನಿ ಪೂಜೆಯನ್ನು ಮಾಡುವುದು ವಿಶೇಷ. ಬಹಳ ಹಿಂದಿನಿಂದಲೂ ಈ ಆಚರಣೆ ರೂಢಿಯಲ್ಲಿದೆ. ಬನ್ನಿ ಪೂಜೆಯ ನಂತರ ಬನ್ನಿ ಎಲೆಗಳನ್ನು ಹಂಚಲಾಗುತ್ತದೆ. 

 ಈ ರೀತಿ ಬನ್ನಿ ಎಲೆಯನ್ನು ಹಂಚುವುದರ ಹಿಂದೆ ಧಾರ್ಮಿಕ ದಂತಕಥೆಗಳಿವೆ.ಹಿಂದೂ ಧರ್ಮದಲ್ಲಿ ಬನ್ನಿ ಪೂಜೆಗೆ ಸಾಕಷ್ಟು ಮಹತ್ವವಿದೆ. ದೇಶದ ಹಲವೆಡೆ ನವರಾತ್ರಿಯ 10ನೇ ದಿನ ಅಂದರೆ ವಿಜಯದಶಮಿಯ ದಿನ ಬನ್ನಿ ಪೂಜೆಯನ್ನು ಆಚರಿಸುತ್ತಾರೆ.  ಅತ್ಯಂತ ಪವಿತ್ರ ಮರಗಳಲ್ಲಿ ಒಂದಾಗಿರುವ ಬನ್ನಿ ಮರದ ಪೂಜೆಯ ಹಿಂದೆ ಹಲವು ಕಾರಣಗಳಿವೆ.ಋಗ್ವೇದ ಕಾಲದಿಂದಲೂ ಬನ್ನಿ ಮರದ ಉಲ್ಲೇಖವಿದೆ. ಬನ್ನಿ ಮರವನ್ನು ಶಮೀವೃಕ್ಷ ಎಂದೂ ಕರೆಯುತ್ತಾರೆ. ದೇವತೆಗಳು ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಮಂಥನ ಮಾಡಿದಾಗ, ದೇವತಾವೃಕ್ಷಗಳೂ ಪ್ರತ್ಯಕ್ಷವಾದವು. ಅವುಗಳಲ್ಲಿ ಶಮಿವೃಕ್ಷವೂ ಒಂದು ಎಂದು ಹೇಳಲಾಗುತ್ತದೆ. ಆ ಸಮಯದಲ್ಲಿ ಇದನ್ನು ಬೆಂಕಿಯನ್ನು ಉತ್ಪಾದಿಸುವ ಸಾಧನವಾಗಿ ಬಳಸಲಾಗುತ್ತಿತ್ತು, ಆದ್ದರಿಂದ ಇದನ್ನು ಅರಣಿ ಎಂದೂ ಕರೆಯುತ್ತಾರೆ ಎಂದು ವಿದ್ವಾಂಸರು ಹೇಳುತ್ತಾರೆ.ತ್ರೇತಾಯುಗದಲ್ಲಿ ರಾಮನು ಲಂಕೆಗೆ ಹೋಗುವಾಗ ಶಮೀಪೂಜೆ ಮಾಡಿದನೆಂಬ ಕಥೆ ಇದೆ. ಆದ್ದರಿಂದಲೇ ರಾವಣನನ್ನು ಗೆದ್ದು ಬಂದನೆಂದು ರಾಮಾಯಣದಲ್ಲಿ ಹೇಳಲಾಗುತ್ತದೆ.  

ಮಹಾಭಾರತದಲ್ಲಿಯೂ ಬನ್ನಿ ವೃಕ್ಷದ ಉಲ್ಲೇಖವಿದೆ. ಪಾಂಡವರು ವನವಾಸಕ್ಕೆ ಹೋಗುವ ಮೊದಲು ತಮ್ಮ ಆಯುಧಗಳನ್ನು ಒಂದು ಮೂಟೆಯಲ್ಲಿ ಕಟ್ಟಿ, ಅದನ್ನು ಶಮಿವೃಕ್ಷದ ಮೇಲೆ ಇರಿಸಿದ್ದರು. ವನವಾಸ ಮುಗಿಯುವವರೆಗೂ ಆಯುಧಗಳನ್ನು ರಕ್ಷಿಸಲು ಶಮಿವೃಕ್ಷವನ್ನು ಪೂಜಿಸಲಾಯಿತು. ವನವಾಸದ ನಂತರ ಬಂದು ಈ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಆಯುಧಗಳನ್ನು ತೆಗೆದುಕೊಂಡು ಆ ಆಯುದ್ಧಗಳ ಸಹಾಯದಿಂದ ಕೌರವರ ವಿರುದ್ಧ ಹೋರಾಡಿ ಗೆದ್ದರು ಎಂದು ಹೇಳಲಾಗುತ್ತದೆ. ಹೀಗೆ ಅಂದಿನಿಂದ ಶಮಿವೃಕ್ಷವನ್ನು ಪೂಜಿಸಿದರೆ ಎಂದಿಗೂ ಸೋಲಿಲ್ಲ ಎಂಬುದು ಜನರ ನಂಬಿಕೆ.ದಸರಾ ಹಬ್ಬದ ದಿನ ಅಂದರೆ ವಿಜಯದಶಮಿಯಂದು ಬನ್ನಿ ಮರಕ್ಕೆ ಪೂಜೆ ಪೂಜೆ ಸಲ್ಲಿಸಬೇಕು. ಬನ್ನಿ ಪೂಜೆಯಲ್ಲಿ ’ಶಮೀ ಶಮಯತೇ ಪಾಪಂ ಶಮೀ ಶತ್ರು ವಿನಾಶೀನೀಽ ಅರ್ಜುನಸ್ಯ ಧನುರ್ಧಾರೀ ರಾಮಸ್ಯ ಪ್ರಿಯದರ್ಶಿನೀಽ’ ಈ ಶ್ಲೋಕವನ್ನು ಪಠಿಸಬೇಕು.ಬನ್ನಿ ಮರದ ಸುತ್ತಲೂ ಪ್ರದಕ್ಷಿಣೆ ಹಾಕಬೇಕು. ಪ್ರದಕ್ಷಿಣೆಯ ನಂತರ ಎಲೆಗಳನ್ನು ಕಿತ್ತು ಮನೆಗೆ ಚಿನ್ನದಂತೆ ತೆಗೆದುಕೊಂಡು ಹೋಗುವುದು ವಾಡಿಕೆ. ನಂತರ ಅದನ್ನು ಪರಸ್ಪರ ಹಂಚಿಕೊಳ್ಳುತ್ತಾರೆ. ಹಿರಿಯರಿಗೆ ನೀಡಿ ಅವರ ಆಶೀರ್ವಾದ ಪಡೆಯುವುದು ಪದ್ಧತಿ.ಇದು ಆದಿಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿಯಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರು.