ತಾಳಿಕೋಟೆ 09: ಎಸ್.ಎಸ್.ಎಲ್.ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಮೊದಲ ಮೆಟ್ಟಿಲು. ಕಠಿಣ ಪರಿಶ್ರಮ ಹಾಗೂ ಆಸಕ್ತಿಯಿಂದ ಪ್ರಯತ್ನಿಸುವವನಿಗೆ ಯಶಸ್ಸು ಲಭಿಸುತ್ತದೆ ಎಂದು ಮುದ್ದೇಬಿಹಾಳ ಬಿಇಓ ಕಾರ್ಯಾಲಯದ ಶಿಕ್ಷಣ ಸಂಯೋಜಕ ಮಹಮ್ಮದ್ ಇಲಿಯಾಸ್ ಬಾಗವಾನ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಎಸ್ ಎಸ್ ಎಲ್ ಸಿ ಮಕ್ಕಳ ಬೀಳ್ಕೊಡುವ ಹಾಗೂ ಇತ್ತೀಚೆಗೆ ವರ್ಗಾವಣೆಗೊಂಡ ಶಿಕ್ಷಕರಿಗೆ ಶುಭ ಕೋರುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯು ತುಂಬ ಕಟ್ಟುನಿಟ್ಟಾಗಿ ನಡೆಯಲಿದ್ದು ಅಕ್ರಮಗಳು ಜರುಗದಂತೆ ಸಿ.ಸಿ.ವೆಬ್ ಕ್ಯಾಮೆರಾ ಅಳವಡಿಸಲಾಗಿದೆ ಆದರೆ ಪರೀಕ್ಷೆಯನ್ನು ಬರೆಯುವಾಗ ಭಯ, ಆತಂಕ ಪಡದೇ ಶಾಂತವಾಗಿ ಉತ್ತರ ಬರೆಯುವಂತೆ ಸಲಹೆ ನೀಡಿದರು.ಶಾಲೆಯ ಮುಖ್ಯಶಿಕ್ಷಕಿ ಅನಿತಾ ಬಿ ಸಜ್ಜನ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಈ ಹಿಂದೆ ಇದೇ ಶಾಲೆಯಲ್ಲಿ ಸೇವೆ ಸಲ್ಲಿಸಿ ಈಗ ಬೇರೆಡೆ ವರ್ಗಾವಣೆಗೊಂಡ ಆನಂದ್ ತಳವಾರ, ಪ್ರೇಮನಗೌಡ ಮಾಲಿಪಾಟೀಲ, ನಿಂಗಮ್ಮ ಅಮಲ್ಯಾಳ ಹಾಗೂ ಮಹಮ್ಮದ್ ಇಲಿಯಾಸ್ ಬಾಗವಾನ್ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.ಶಿಕ್ಷಕಿ ಸುಜಾತ ಮಲಕಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಲೆಯ ಶಿಕ್ಷಕರಾದ ಗುಂಡೂರಾವ್ ಧನಪಾಲ ಹಾಗೂ ಅನಂತ ಅಂಗಡಿ ಅವರು ವರ್ಗಾವಣೆಗೊಂಡ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಸಿ ಆರ್ ಪಿ ರಾಜು ಸಿಂಗ್ ವಿಜಾಪುರ, ಎಸ್ ಬಿ ಸಜ್ಜನ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಣ ಶಿಕ್ಷಕಿ ಸುವರ್ಣ ಗದುಗಿನಮಠ ನಿರ್ವಹಿಸಿದರು. ಶಿಕ್ಷಕಿ ಎಂ ಜಿ ಕೊಲ್ಹಾರ ಸ್ವಾಗತಿಸಿದರು. ಶಿಕ್ಷಕ ಎಸ್.ಐ ಮುರಡಿ ವಂದಿಸಿದರು.