ಬೆಂಗಳೂರು, ನ. 18 : ಯಶವಂತಪುರ ವಿಧಾನಸಭಾ ಕ್ಷೇತ್ರದ ಉಪ ಚನಾವಣೆಗೆ ಬಿಜೆಪಿಯಿಂದ ಎಸ್.ಟಿ.ಸೋಮಶೇಖರ್, ಪ್ರತಿಸ್ಪರ್ಧಿಯಾಗಿ ಜೆಡಿಎಸ್ ನಿಂದ ಜವರಾಯಿಗೌಡ ಸೋಮವಾರ ಪಕ್ಷದ ಮುಖಂಡರ ಜೊತೆಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದೆ. ನಾಮಪತ್ರ ಸಲ್ಲಿಕೆ ಬಳಿಕ ಎಸ್.ಟಿ.ಸೋಮಶೇಖರ್ ಮಾತನಾಡಿ, ಇಪ್ಪತ್ತು ವರ್ಷಗಳಿಂದ ನಾನು ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾದರಸದಂತೆ ಕೆಲಸ ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಯಡಿಯೂರಪ್ಪ ಅವರ ಜೊತೆ ಸೇರಿ ಕ್ಷೇತ್ರಕ್ಕಾಗಿ ಶ್ರಮಿಸುತ್ತೇನೆ ಎಂದರು. ಕ್ಷೇತ್ರದ ಜನತೆಗೆ ನಾನು ಯಾರು ಎನ್ನುವುದು ಗೊತ್ತಿದೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರಣಕ್ಕಾಗಿ ಬಿಜೆಪಿ ಸೇರ್ಪಡೆಯಾಗಿದ್ದು, ಉಪಚುನಾವಣೆಯಲ್ಲಿ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರ ಸಚಿವ ಡಿ.ವಿ ಸದಾನಂದ ಮಾತನಾಡಿ, ಎಸ್.ಟಿ.ಸೋಮಶೇಖರ್ ನಾಮಪತ್ರ ಸಲ್ಲಿಸಿದ್ದಾರೆ. ಕ್ಷೇತ್ರದಲ್ಲಿ ಈ ಹಿಂದೆ ಬಿಜೆಪಿ ಕಾಂಗ್ರೆಸ್ ಮಧ್ಯೆ ಹೋರಾಟ ಇತ್ತು. ಆದರೀಗ ಸೋಮಶೇಖರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವುದರಿಂದ ಈ ಬಾರಿ ಕ್ಷೇತ್ರದಲ್ಲಿ ಏಕಮುಖಿ ಚುನಾವಣೆ ನಡೆಯುತ್ತಿದೆ. ಈ ಹಿಂದೆ ಶೋಭಾ ಕರಂದ್ಲಾಜೆ ಶಾಸಕರಾಗಿ ಉತ್ತಮ ಕೆಲಸ ಮಾಡಿದ್ದರು ಎಂದರು. ಸೋಮಶೇಖರ್ ತೆಗೆದುಕೊಂಡ ತೀರ್ಮಾನಕ್ಕೂ ಜನ ಬೆಂಬಲ ಸಿಕ್ಕಿದೆ. ಸೋಮಶೇಖರ್ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದು, ಬಹಳಷ್ಟು ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಯಶವಂತಪುರ ಕ್ಷೇತ್ರದಲ್ಲಿ ಹಿಂದಿನ ಬಿಜೆಪಿ ಸಕರ್ಾರ ಹಾಗೂ ಎಸ್.ಟಿ. ಸೋಮಶೇಖರ್ ಅವರು ಶಾಸಕರಾದ ಬಳಿಕ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಆಗಿದ್ದರೂ ಇನ್ನೂ ಅಭಿವೃದ್ಧಿ ಕೆಲಸ ಬಾಕಿ ಇದೆ. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಅಭಿವೃದ್ಧಿ ಪರ್ವ ಮುಂದುವರಿಯಲಿದೆ. ಅವರ ಹಾಗೂ ಪ್ರಧಾನಿ ಮೋದಿ ಅವರ ಕೈ ಬಲಪಡಿಸಲು ಎಸ್.ಟಿ.ಸೋಮಶೇಖರ್ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಬೇಕಿದೆ. ಒಗ್ಗಟ್ಟಾಗಿ ಗೆಲವಿಗಾಗಿ ಶ್ರಮಿಸುತ್ತೇವೆ ಎಂದರು. ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಪರ ಕ್ಷೇತ್ರದಲ್ಲಿ ಮೆರವಣಿಗೆ ಪ್ರಚಾರದಲ್ಲಿ ಪಕ್ಷದ ಶಾಸಕಸಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯ ಕುತಂತ್ರ ರಾಜಕಾರಣದಿಂದ ಅನಿವಾರ್ಯವಾಗಿ ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ಎದುರಾಗಿದೆ. ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚನೆಗಾಗಿ ಕಾಂಗ್ರೆಸ್ ಅವರೇ ಮನೆ ಬಾಗಿಲಿಗೆ ಬಂದಿದ್ದರು. ಮೈತ್ರಿ ಸರ್ಕಾರದಲ್ಲಿ ಬಹಳಷ್ಟು ನೋವು ಅನುಭವಿಸಿದ್ದು, ಕಾಂಗ್ರೆಸ್ ನಾಯಕರಿಂದ ಅವಮಾನ ಎದುರಿಸಿದ್ದೆ ಎಂದು ಪುನರುಚ್ಚರಿಸಿದರು. ಎಸ್.ಟಿ.ಸೋಮಶೇಖರ್ ಯಶವಂತಪುರ ಕ್ಷೇತ್ರಕ್ಕೆ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅನುದಾನ ಕೊಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಹಾಗಾದರೆ ಈ ಹಿಂದೆ ಅವರಿಗೆ ಅನುದಾನ ಕೊಟ್ಟಿರಲಿಲ್ಲವೇ ? ಎಂದು ಪ್ರಶ್ನಿಸಿದರು. ಸಂಸದೆ ಶೋಭಾ ಕರಂದ್ಲಾಜೆ ಅವರು ಸೋಮಶೇಖರ್ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದಾರೆ ಎಂದಿದ್ದಾರೆ. ಈ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಶಕ್ತಿ ಏನು ಎಂಬುದನ್ನು ತೋರಿಸಬೇಕಿದೆ ಎಂದರು. ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ಮಾತನಾಡಿ, ಎಸ್.ಟಿ.ಸೋಮಶೇಖರ್ ಎರಡು ಬಾರಿ ಶಾಸಕರಾಗಿದ್ದರು. ಆಗ ಏಕೆ ಅಭಿವೃದ್ಧಿ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ರೂ ಅನುದಾನ ತಂದು ತಮ್ಮ ಸಂಬಂಧಿಕರಿಗೆ ಬೇಕು ಬೇಕಾದವರಿಗೆ ಗುತ್ತಿಗೆ ನೀಡಿ ನುಂಗಿ ನೀರು ಕುಡಿದಿರುವುದೇ ಅವರ ಸಾಧನೆ ಎಂದು ವ್ಯಂಗ್ಯವಾಡಿದರು. ಉಪಚುನಾವಣೆಯಲ್ಲಿ ಕ್ಷೇತ್ರದ ಮತದಾರರು ತಮಗೆ ಅನರ್ಹರು ಬೇಕೋ ಅರ್ಹರು ಬೇಕೋ ಎಂಬುದನ್ನು ನಿರ್ಧರಿಸುತ್ತಾರೆ. ಎರಡು ಬಾರಿ ಸೋತಿರುವ ನನ್ನನ್ನು ಈ ಬಾರಿ ಯಶವಂತಪುರದ ಜನತೆ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.