ಸಿಎಎ ವಿರೋಧಿಸಿ ಪಾರ್ಲಿಮೆಂಟ್ ಚಲೋ ನಡೆಸಿದ ವಿದ್ಯಾರ್ಥಿಗಳ ಮೇಲೆ ಲಾಠಿಪ್ರಹಾರ; ಹಲವರಿಗೆ ಗಾಯ

ನವದೆಹಲಿ, ಫೆ.10 :    ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪಾರ್ಲಿಮೆಂಟ್‌ ಕಡೆಗೆ ಜಾಥಾ ನಡೆಸಿದ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ ಪರಿಣಾಮ 12ಕ್ಕೂ ಅಧಿಕ ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ನಡೆದಿದೆ.

ಸಿಎಎ ವಿರೋಧಿಸಿ ಪಾರ್ಲಿಮೆಂಟ್ ಹೌಸ್‌ಗೆ ಜಾಥಾ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ಮಾರ್ಗ ಮಧ್ಯೆಯೇ ಪೊಲೀಸರು ತಡೆದರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿದ್ಯಾರ್ಥಿಗಳು ಮೆರವಣಿಗೆ ಆರಂಭಿಸಿದರು. ಮೆರವಣಿಗೆ ಹೋಲಿ ಫ್ಯಾಮಿಲಿ ಆಸ್ಪತ್ರೆ ಬಳಿ ಬಂದಾಗ ಪೊಲೀಸರು ಬ್ಯಾರಿಕೇಡ್‌ಗಳನ್ನು ಅಡ್ಡವಿಟ್ಟು ಜಾಥಾವನ್ನು ತಡೆದರು ಎಂದು ಪ್ರತಿಭಟನಕಾರರೊಬ್ಬರು ಯುಎನ್ಐಗೆ ತಿಳಿಸಿದ್ದಾರೆ.

ಇದೇ ವೇಳೆ ಪೊಲೀಸರೊಂದಿಗೆ ಘರ್ಷಣೆ ನಡೆಯಿತು. ಬಳಿಕ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದು, ಮಹಿಳೆಯರು ಸೇರಿದಂತೆ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಪ್ರತಿಭಟನಕಾರರೊಬ್ಬರು ಮಾಹಿತಿ ನೀಡಿದರು,.

ವಿದ್ಯಾರ್ಥಿಗಳು ಮತ್ತು ಪೊಲೀಸರು ಪರಿಸ್ಥಿತಿಯನ್ನು ಸಹಜಸ್ಥಿತಿಗೆ ತರಬೇಕು. ವಿದ್ಯಾರ್ಥಿಗಳು ಹಿಂದೆ ಸರಿಯಬೇಕು ಎಂದು ವಿಶ್ವವಿದ್ಯಾಲಯದ ಮುಖ್ಯ ಶಿಸ್ತುಪಾಲನಾಧಿಕಾರಿ ವಸೀಮ್ ಅಹ್ಮದ್ ಮನವಿ ಮಾಡಿದ್ದಾರೆ.

ಗಾಯಾಳು ವಿದ್ಯಾರ್ಥಿಗಳನ್ನು ಸಮೀಪದ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಥಾದಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ ಕೆಲವು ಸ್ಥಳೀಯರು ಕೂಡ ಪಾಲ್ಗೊಂಡಿದ್ದರು.

ವಿಪರ್ಯಾಸವೆಂದರೆ, ಸಿಎಎ ವಿರೋಧಿ ಪ್ರತಿಭಟನೆಗಳು 55 ದಿನಗಳಿಂದ ನಡೆಯುತ್ತಿರುವ ಶಾಹೀನ್ ಬಾಗ್-ಕಾಳಿಂದಿ ಕುಂಜ್ ರಸ್ತೆಯನ್ನು ತೆರವುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳ ಮೇಲೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದ ದಿನವೇ ಈ ಘಟನೆ ನಡೆದಿದೆ.

"ಪ್ರತಿಭಟನೆಗಳು ಮುಂದುವರಿಯಬಹುದು, ಆದರೆ ಪ್ರತಿಭಟನೆಗಾಗಿ ಗೊತ್ತುಪಡಿಸಿದ ಪ್ರದೇಶದಲ್ಲಿ ಪ್ರತಿಭಟನೆ ಮಾಡಬೇಕು. ನೀವು ಜನರಿಗೆ ಅನಾನುಕೂಲ ಉಂಟು ಮಾಡಬಾರದು" ಎಂದು ಸುಪ್ರೀಂಕೋರ್ಟ್  ಹೇಳಿದೆ.