ಜಮಖಂಡಿ 05: ವಿದ್ಯಾರ್ಥಿಗಳಲ್ಲಿ ಜ್ಞಾನಶಕ್ತಿ, ಇಚ್ಛಾಶಕ್ತಿ ಮತ್ತು ಕರ್ತೃತ್ವಶಕ್ತಿ ಬೇಕು. ವಿಷಯದ ಸರಿಯಾದ ಗ್ರಹಿಕೆ, ಎಷ್ಟು ಬರೆಯಬೇಕು, ಏನು ಬರೆಯಬೇಕು ಎಂಬ ಯೋಜನೆ ಹಾಗೂ ಸತತ ಅಭ್ಯಾಸ ಬೇಕು ಎಂದು ಬಿಇಒ ಅಶೋಕ ಬಸಣ್ಣವರ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಬಸವಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮತ್ತು ಬಸವಜ್ಯೋತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ, ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘದ ತಾಲ್ಲೂಕು ಘಟಕದ ಆಶ್ರಯದಲ್ಲಿ ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ವಿಶೇಷ ಬೋಧನಾ ಶಿಬಿರದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ಜುನ್ನೂರ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಬೋಧನಾ ಶಿಬಿರ ಆಯೋಜನೆಯಿಂದ ವಿದ್ಯಾರ್ಥಿಗಳಿಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಒತ್ತಮ ವೇದಿಕೆ ದೊರೆಯುತ್ತದೆ. ಪರೀಕ್ಷೆ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಭಯ ದೂರವಾಗುತ್ತದೆ ಎಂದರು.
ಜಂಟಿ ನಿರ್ದೇಶಕರು, ಸಿಟಿಇ ಕಾಲೇಜಿನ ಪ್ರಾಂಶುಪಾಲರಾದ ಮಂಗಳಾ ನಾಯಕ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿಗಳ ನಿಜವಾದ ಸಾಮರ್ಥ್ಯ, ಪ್ರೌಢಿಮೆ ಮತ್ತು ಪ್ರಬುದ್ಧತೆಯನ್ನು ಜಿಲ್ಲೆ ಮತ್ತು ರಾಜ್ಯಕ್ಕೆ ತಿಳಿಸಲು ವಿಶೇಷ ಬೋಧನಾ ಶಿಬಿರ ಸಹಾಯಕವಾಗುತ್ತದೆ ಎಂದರು.
ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಮ್ಮೆ ಕಲಿತ ಸೈಕಲ್ ಮತ್ತು ಈಜು ಜ್ಞಾನ ಎಂದೂ ಮರೆಯಲು ಸಾಧ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳ ಕಲಿಕೆ ಈಜು ಮತ್ತು ಸೈಕಲ್ ಕಲಿಕೆಯಂತಿರಬೇಕು ಎಂದರು.
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಪ್ರೇರಣಾದಾಯಕ ಭಾಷಣ ಮಾಡಿದರು. ಇದ್ದಲಗಿಯ ಶರಣಬಸವೇಶ್ವರ ಪ್ರೌಢಶಾಲೆಯ ಪ್ರಶಾಂತ ಪಟ್ಟದಕಲ್ಲ(ಗಣಿತ), ಹೆರಕಲ್‌ನ ಸರ್ಕಾರಿ ಪ್ರೌಢಶಾಲೆಯ ಪ್ರಕಾಶ ಆರ್.ಎಚ್.(ಇಂಗ್ಲಿಷ್) ಹಾಗೂ ನಾಗರಾಳದ ಸರ್ಕಾರಿ ಪ್ರೌಢಶಾಲೆಯ ಮಹೇಶ ಸಿಂದಗಿ(ವಿಜ್ಞಾನ) ವಿಶೇಷ ಬೋಧನಾ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಬೋಧನೆ ಕೈಗೊಂಡರು.
ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಎಸ್.ಜಿ. ವಿಜಾಪುರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಬಿ. ಅಜ್ಜನವರ ಇದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಯಿತು.
ಸಮೀಕ್ಷಾ ಹಕ್ಕೆ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಶಿಕ್ಷಕ ಸಂಗಮೇಶ ಉಟಗಿ ಸ್ವಾಗತಿಸಿದರು. ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೋಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಕಾಡೇಶ ಹಂಚಿನಾಳ ನಿರೂಪಿಸಿದರು. ಶಿಕ್ಷಕ ಇಮ್ತಿಯಾಜ್ ಫಣಿಬಂದ ವಂದಿಸಿದರು.