ವಿಜಯಪುರ 19: ಜಿಲ್ಲೆಯ ಜನರಿಗೆ ಹೆದ್ದಾರಿಗಳಲ್ಲಿ ಅಳವಡಿಸಿರುವ ಟೋಲ್ ಶುಲ್ಕ ಸಂಗ್ರಹ ಕೇಂದ್ರಗಳಿಂದ ಸಾರ್ವಜನಿಕರಿಗೆ ಅನಗತ್ಯವಾಗಿ ಸಮಸ್ಯೆ ಆಗುತ್ತಿದ್ದು, ನನ್ನ ನೇತೃತ್ವದಲ್ಲಿ ರೈತ ಭಾರತ ಪಕ್ಷದಿಂದ ಹೋರಾಟ ಮಾಡುವುದಾಗಿ ತಿಳಿಸಿತ್ತು. ತಮ್ಮ ಮನವಿಗೆ ಸ್ಪಂದಿಸಿ ಹುಬ್ಬಳ್ಳಿ ಹೆದ್ದಾರಿ ಮಾರ್ಗದ ಸಮಸ್ಯೆ ಬಗೆ ಹರಿಸಿರುವ ಜಿಲ್ಲಾಡಳಿತಕ್ಕೆ ರೈತ ಭಾರತ ಪಕ್ಷದಿಂದ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಭಾರತ ಪಕ್ಷ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಕೆಂಗನಾಳ ಮಾತನಾಡಿ, ನಿಯಮ ಬಾಹೀರವಾಗಿ ನಗರದಲ್ಲಿ ನಿರ್ಮಾಣಗೊಂಡಿರುವ ಬೆಂಗಳೂರು ಹೆದ್ದಾರಿ ಟೋಲ್ ಕೇಂದ್ರ ಸ್ಥಳಾಂತರಕ್ಕೆ ಆಗ್ರಹಿಸಿ ಡಿ.23 ರಂದು ಹೋರಾಟ ಮಾಡಲಾಗುತ್ತದೆ ಎಂದರು. ಸದರಿ ಹೋರಾಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ವಿಜಯಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಕಾಮಗಾರಿ ಪೂರ್ಣಗೊಳಿಸದೇ ಟೋಲ್ ಸಂಗ್ರಹಿಸಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ರೈತ ಭಾರತ ಪಕ್ಷದಿಂದ ಹೋರಾಟ ಹಮ್ಮಿಕೊಳ್ಳುವುದಾಗಿ ಹೇಳಿತ್ತು. ಸದರಿ ಹೋರಾಟ ಮಾಡುವ ನಮ್ಮ ಮನವಿಗೆ ಸ್ಪಂದಿಸಿರುವ ಸನ್ಮಾನ್ಯ ಜಿಲ್ಲಾಧಿಕಾರಿ ಶ್ರೀ ಭೂಬಾಲನ್ ಅವರು, ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಟೋಲ್ ಶುಲ್ಕ ಸಂಗ್ರಹ ಮಾಡದಂತೆ ಸೂಚಿಸಿದ್ದಾರೆ. ಅಲ್ಲದೇ 2025 ಜನೇವರಿ ಅಂತ್ಯದೊಳಗೆ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಬೇಕು, ಬಳಿಕವೇ ಶುಲ್ಕ ಸಂಗ್ರಹಕ್ಕೆ ಮುಂದಾಗಬೇಕು.
ಇದಲ್ಲದೇ ಸದರಿ ಹೆದ್ದಾರಿ ವ್ಯಾಪ್ತಿಗೆ ಬರುವ ವಿಜಯಪುರ, ಕೊಲ್ಹಾರ, ಬಬಲೇಶ್ವರ ತಾಲೂಕಗಳ ಗ್ರಾಮಗಳಿಗೆ ಶುಲ್ಕ ರಹಿತ ಸಂಚಾರ ಮುಕ್ತಗೊಳಿಸುವಂತೆ ಹೆದ್ದಾರಿ ಟೋಲ್ ಶುಲ್ಕ ಸಂಗ್ರಹ ಸಂಸ್ಥೆಗೆ ಸೂಚಿಸಿದ್ದಾಗಿ ಮಾಹಿತಿ ಇದೆ. ಹೀಗಾಗಿ ರೈತರು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿರುವ ಜಿಲ್ಲಾಡಳಿತಕ್ಕೆ ನಮ್ಮ ಪಕ್ಷದಿಂದ ರೈತರು ಹಾಗೂ ಸಾರ್ವಜನಿಕರಪರವಾಗಿ ಧನ್ಯವಾದಗಳನ್ನು ತಿಳಿಸಿ, ಅಭಿನಂದಿಸುತ್ತೇವೆ ಎಂದಿದ್ದಾರೆ. ಇದಲ್ಲದೇ ವಿಜಯಪುರ-ಬೆಂಗಳೂರು ಹೆದ್ದಾರಿಯಲ್ಲಿ ವಿಜಯಪುರ ನಗರಕ್ಕೆ ಹೊಂದಿಕೊಂಡಿರುವ ಹೆದ್ದಾರಿ ಟೋಲ್ ಶುಲ್ಕ ಸಂಗ್ರಹ ನಿಯಮ ಬಾಹಿರವಾಗಿದ್ದು, ನಗರದ ಸಾರ್ವಜನಿಕರಿಂದ ಕಾನೂನು ಬಾಹೀರವಾಗಿ ಹಣ ಕೀಳಲಾಗುತ್ತಿದೆ.
ವಿಜಯಪುರ-ಬೆಂಗಳೂರು ಹೆದ್ದಾರಿಯಲ್ಲಿ ನಗರಕ್ಕೆ ಹೊಂದಿಕೊಂಡಂತಿರುವ ಟೋಲ್ ಸಂಸ್ಥೆ ನಿತ್ಯವೂ ನಗರದಿಂದ ಸಂಚರಿಸುವ ಸಾವಿರಾರು ವಾಹನಗಳಿಂದ ನಿಯಮ ಬಾಹಿರವಾಗಿ ಲಕ್ಷಾಂತರ ರೂ. ಸಂಗ್ರಹಿಸಿ, ಸಾರ್ವಜನಿಕವಾಗಿ ಹಗಲು ವಂಚನೆಗೆ ಇಳಿದಿದೆ. ನಿಯಮದ ಪ್ರಕಾರ ಟೋಲ್ ಕೇಂದ್ರದ ಸುತ್ತಲಿನ ನಗರ-ಗ್ರಾಮಗಳ ನಿವಾಸಿಗಳ ವಾಹನ ಸಂಚಾರಕ್ಕೆ ಶುಲ್ಕ ರಹಿತ ಅವಕಾಶ ನೀಡಬೇಕು. ಇಲ್ಲವೇ ಸೇವಾ ರಸ್ತೆ ವ್ಯವಸ್ಥೆ ಕಲ್ಪಿಸಬೇಕು. ಆದರೆ ಸೇವಾ ರಸ್ತೆ ಸೇವೆ ನೀಡದೇ ನಿಯಮ ಬಹಿರವಾಗಿ ಶುಲ್ಕ ಸಂಗ್ರಹಕ್ಕೆ ಮುಂದಾಗಿದೆ. ಇದಲ್ಲದೇ ಅಕ್ರಮವಾಗಿ ಕರ್ನಾಟಕ ಗೃಹ ಮಂಡಳಿ ಮಾರ್ಗದಲ್ಲಿ ರಸ್ತೆಯನ್ನು ಅಗೆದು ಹಾಕಿ ಸಾರ್ವಜನಿಕ ಸಂಪರ್ಕ ಕಡಿತ ಮಾಡಲಾಗಿದೆ. ಸ್ಥಳೀಯರು ಮನವಿ ಮಾಡಿದರೂ ಅಧಿಕಾರಿಗಳು ಇವರ ವಿರುದ್ಧಕ್ರಮ ಕೈಗೊಂಡಿಲ್ಲ. ಇದರಿಂದ ನಗರಕ್ಕೆ ಹೊಂದಿಕೊಂಡಿರುವ ಕೃಷಿ ಕಾಲೇಜಿಗೆ ವಾಹನಗಳಲ್ಲಿ ಹೋಗಿ ಬರಲೂ ಸ್ಥಳೀಯರು, ರೈತರು, ನಗರದ ಜನರು ಶುಲ್ಕ ಭರಿಸಬೇಕಿದೆ ಎಂದು ಮಲ್ಲಿಕಾರ್ಜುನ ಕೆಂಗನಾಳ ದೂರಿದ್ದಾರೆ. ಹೆದ್ದಾರಿ ನಿಯಮದ ಪ್ರಕಾರ ನಗರದ ಹೊರಗೆ ಇರಬೇಕಿದ್ದು, ಕೂಡಲೇ ಸದರಿ ಟೋಲ್ ಶುಲ್ಕ ಸಂಗ್ರಹ ಕೇಂದ್ರವನ್ನು ತುರ್ತಾಗಿ ಮನಗೂಳಿ ಗ್ರಾಮದ ಆಚೆಗೆ ಸ್ಥಳಾಂತರಿಸಬೇಕು. ಸ್ಥಳಾಂತರ ಆಗುವ ವರೆಗೆ ಕೆಎಚ್‌ಬಿ ವಸತಿ ಪ್ರದೇಶದಲ್ಲಿರುವ ರಸ್ತೆ ಮರು ನಿರ್ಮಿಸಿ, ನಗರದಿಂದ ಟೋಲ್ ಮುಂಭಾಗದಲ್ಲಿ ಗೃಹ ಮಂಡಳಿ ವಸತಿ ಪ್ರದೇಶದ ರಸ್ತೆಗೆ ಸಂಪರ್ಕ ಕಲ್ಪಿಸಬೇಕು. ಈ ಕುರಿತು ಕೂಡಲೇ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಬೇಕು. ಇಲ್ಲವಾದಲ್ಲಿ ಡಿ.23 ರಂದು ಹೆದ್ದಾರಿ ಸಂಪರ್ಕಿಸುವ ಕರ್ನಾಟಕ ಗೃಹ ಮಂಡಳಿ ವಸತಿ ಪ್ರದೇಶದ ರಸ್ತೆಯಲ್ಲಿ ರೈತ ಭಾರತ ಪಕ್ಷದಿಂದ ಸಾರ್ವಜನಿಕರೊಂದಿಗೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ದೀಪಕ ಕುಲಕರ್ಣಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.