ಫೆ. 22 ರಂದು ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ

ಫೆ. 22 ರಂದು ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ Stray dog ​​adoption program:

ಲೋಕದರ್ಶನ ವರದಿ 

ಬೀದಿ ನಾಯಿ ಮರಿಗಳ ದತ್ತು ಪಡೆಯುವ ಕಾರ್ಯಕ್ರಮ: ಜಿ.ಪಂ. ಸಿಇಓ ಭುವನೇಶ ಪಾಟೀಲ 

ಧಾರವಾಡ ಫೆ.16: ಹುಬ್ಬಳ್ಳಿ-ಧಾರವಾಡ ಮಹಾನಗರ ಹಾಗೂ ಜಿಲ್ಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣ ಹಾಗೂ ನಿರ್ವಹಣೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಫೆಬ್ರವರಿ 22 ರಂದು ಕರ್ನಾಟಕ ಕಾಲೇಜು (ಕೆ.ಸಿ.ಡಿ) ಆವರಣದಲ್ಲಿ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ, ಪೆಟ್ ಫ್ಯಾಶನ್ ಶೋ ಹಾಗೂ ಬೀದಿ ಶ್ವಾನ (ನಾಯಿ) ಮರಿಗಳನ್ನು ದತ್ತು ಪಡೆಯುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಅವರು ಹೇಳಿದರು. 

 ಅವರು ಇಂದು (ಫೆ. 16) ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ, ಪೆಟ್ ಫ್ಯಾಶನ್ ಶೋ ಹಾಗೂ ಬೀದಿ ಶ್ವಾನ (ನಾಯಿ) ಮರಿಗಳನ್ನು ದತ್ತು ಪಡೆಯುವ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿಸಿ, ಬಿತ್ತಿಪತ್ರ (ಪೋಸ್ಟರ್) ಬಿಡುಗಡೆ ಮಾಡಿ, ಮಾತನಾಡಿದರು. 

ಫೆಬ್ರವರಿ 22 ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಪಶುವೈದ್ಯಕೀಯ ಸಂಘ ಜಿಲ್ಲಾ ಘಟಕ ಹಾಗೂ ಇತರೆ ಪ್ರಾಣಿ ದಯಾ ಸಂಘ, ಹೆಚ್‌.ಎಸ್‌.ಎ. ಹಾಗೂ ಇತರೆ ಎನ್‌.ಜಿ.ಓ.ಗಳ ಸಹಯೋಗದಲ್ಲಿ ಜಿಲ್ಲಾ ಮಟ್ಟದ ಶ್ವಾನಗಳ ಪ್ರದರ್ಶನ, ಪೆಟ್ ಫ್ಯಾಶನ್ ಶೋ ಹಾಗೂ ಬೀದಿ ಶ್ವಾನ ಮರಿಗಳನ್ನು ದತ್ತು ಪಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಕಾಲೇಜು (ಕೆ.ಸಿ.ಡಿ) ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಶ್ವಾನಗಳ ಮಾಲೀಕರು ಹಾಗೂ ಶ್ವಾನ ಪಾಲನೆ ಆಸಕ್ತಿ ಇರುವ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ಥಾನಿಕವಾಗಿ ಪಶುಪಾಲನೆ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ಪ್ರಚಾರ ಕೈಗೊಳ್ಳಬೇಕೆಂದು ಅವರು ತಿಳಿಸಿದರು.  

ಜಿಲ್ಲಾಮಟ್ಟದ ಶ್ವಾನ ಪ್ರದರ್ಶನದಲ್ಲಿ ವಿವಿಧ ಆಕರ್ಷಕ ಶ್ವಾನ ತಳಿಗಳು ಭಾಗವಹಿಸಲಿದ್ದು, ತಳಿ ಹಾಗೂ ಲಿಂಗವಾರು ವರ್ಗೀಕರಿಸಿ ಉತ್ತಮ ಶ್ವಾನಗಳಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಿದರು  

ಈ ಕಾರ್ಯಕ್ರಮದಲ್ಲಿ ಶ್ವಾನಗಳೊಂದಿಗೆ ಭಾಗವಹಿಸಲು ಇಚ್ಛಿಸುವ ಶ್ವಾನ ಮಾಲಿಕರು ಫೆಬ್ರವರಿ 20 ಸಂಜೆ 5 ಗಂಟೆಯೊಳಗೆ ತಮ್ಮ ಹೆಸರು ಮತ್ತು ಶ್ವಾನದ ವಿವರಗಳನ್ನು ನೊಂದಾಯಿಸಿಕೊಳ್ಳಬೇಕು ಹಾಗೂ ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕರು ಹಾಗೂ ಮೊ. ಸಂ: 9845459130, 9900470554, 9449930268 ಸಂಪರ್ಕಿಸಬೇಕೆಂದು ಅವರು ತಿಳಿಸಿದರು.   

ಬೀದಿ ಶ್ವಾನ ಮರಿಗಳನ್ನು ದತ್ತು ಪಡೆಯಲು ಇಚ್ಚಿಸುವವರು ಲಿಂಕ ಣಣಠಿ:/ಛಿಚಿಟಿ.ಠಿಚಿರಜ/75ಖಜಉಋ ಬಳಸಿ ನೊಂದಾಯಿಸಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೊ. ಸಂ: 7022298763 ಗೆ ಸಂಪರ್ಕಿಸಬಹುದು. ದತ್ತು ಪಡೆಯಲ್ಪಡುವ ಎಲ್ಲಾ ನಾಯಿಮರಿಗಳಿಗೆ ಹುಚ್ಚು ನಾಯಿ ರೋಗದ ಮತ್ತು ಇತರೆ ಶ್ವಾನಗಳ ರೋಗಳ ವಿರುದ್ಧ ಲಸಿಕೆ ಹಾಕಿ ಕೊಡಲಾಗವುದು, ಅದರ ಜೊತೆಗೆ ಜಂತುನಾಶಕ ಓಷಧ ಹಾಗೂ ಇತರೆ ಪರಿಕರಗಳನ್ನು ನೀಡುವುದರೊಂದಿಗೆ ನಾಯಿ ಸಾಕಾಣಿಕೆಗೆ ಸಂಬಂಧಿಸಿದ ಉಪಯುಕ್ತ ಮಾಹಿತಿಯನ್ನು ಎಲ್ಲರೂಂದಿಗೆ ಹಂಚಿಕೊಳ್ಳಲಾಗುವುದು ಎಂದು ಅವರು ಹೇಳಿದರು.  

ದತ್ತು ಪಡೆಯುವ ಶ್ವಾನಗಳಿಗೆ, ಒಂದು ವರ್ಷದ ಒಳಗೆ ಎಚ್‌ಡಿಎಮ್‌ಸಿ, ಎಚ್‌ಡಬ್ಲ್ಯೂಸಿ ಅಥವಾ ಪಶು ಪಾಲನ ಇಲಾಖೆಯ ಸಹಕಾರದೊಂದಿಗೆ ಅತೀ ಕಡಿಮೆ ವೆಚ್ಚದಲ್ಲಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಅಧಿಕಾರಿಗಳು ಮತ್ತು ಪ್ರಾಣಿ ದಯಾ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿ, ಸಾರ್ವಜನಿಕರಿಗೆ ಪ್ರೋತ್ಸಾಹಿಸಬೇಕೆಂದು ಜಿಲ್ಲಾ ಪಂಚಾಯತ ಸಿಇಓ ಭುವನೇಶ ಪಾಟೀಲ ಅವರು ಸೂಚಿಸಿದರು.  

ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪನಿರ್ದೇಶಕ ಡಾ. ಎಸ್‌.ವಿ. ಸಂತಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.  

ಸಭೆಯಲ್ಲಿ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ. ರಮೇಶ ಹೆಬ್ಬಳ್ಳಿ, ಡಾ. ಬಿ.ಪಿ.ಹಿರೇಮಠ, ಡಾ. ಲಿಂಗರಾಜ ಪಿ.ಎಸ್‌., ಹ್ಯೂಮೇನ್ ವರ್ಡ್‌ ಫಾರ್ ಎನಿಮಲ್ಸ್‌ ಸಂಸ್ಥೆಯ ರಮೇಶ ಹಾಗೂ ಇತರರು ಭಾಗವಹಿಸಿದ್ದರು.