ಬೆಂಗಳೂರು, ಜ.17 : ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಹೈಕಮಾಂಡ್ ಒಂದು ನಿರ್ಣಯಕ್ಕೆ ಬಂದಿದೆ ಎಂದು ಸ್ಪಷ್ಟವಾಗುತ್ತಿರುವ ಬೆನ್ನಲ್ಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆ ಮುನ್ನಲೆಗೆ ಬಂದಿದೆ.ಈ ಹುದ್ದೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್ ಅವರನ್ನು ನೇಮಿಸುವಂತೆ ಒತ್ತಡ ಕೇಳಿಬಂದಿದೆ. ಆದರೆ ಇದಕ್ಕೆ ಮೂಲ ಕಾಂಗ್ರೆಸಿಗರ ಬಣದ ಮುಸ್ಲಿಂ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಬೆಂಗಳೂರು ವಿಭಾಗದಲ್ಲಿ ಮೂವರು ಮುಸ್ಲಿಂ ಶಾಸಕರು, ಇಬ್ಬರು ಮೇಲ್ಮನೆ ಸದಸ್ಯರು ಹಾಗೂ ಕೆಪಿಸಿಸಿ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ಅಖೈರುಗೊಂಡಲ್ಲಿ ಅವರ ವರ್ಚಸನ್ನು ಕಡಿಮೆ ಮಾಡಲೆಂದು ಪಕ್ಷ ಸಂಘಟನೆಯ ನೆಪದಲ್ಲಿ ವಿಭಾಗವಾರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್‌ಗೆ ಸಲಹೆ ನೀಡಿದ್ದಾರೆ. ವಿಭಾಗವಾರು ಕಾರ್ಯಾಧ್ಯಕ್ಷರ ಸ್ಥಾನದಲ್ಲಿ ತಮ್ಮ ಆಪ್ತರನ್ನು ನೇಮಿಸಿಕೊಳ್ಳುವ ಯೋಜನೆಯೂ ಸಿದ್ದರಾಮಯ್ಯದ್ದಾಗಿದೆ. ಆದರೆ ವಿಭಾಗವಾರು ನೇಮಕಕ್ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಬೆಳಗಾವಿ ಅಥವಾ ಮೈಸೂರು ವಿಭಾಗದಿಂದ ಅಲ್ಪ ಸಂಖ್ಯಾತರಿಗೆ ಕಾರ್ಯಾಧ್ಯಕ್ಷ ಹುದ್ದೆ ನೀಡಬೇಕೆಂಬ ಒತ್ತಡ ಕೇಳಿ ಬರುತ್ತಿದ್ದು ಈ ಸ್ಥಾನದಲ್ಲಿ ಜಮೀರ್ ಅವರನ್ನು ಕೂರಿಸುವ ತಂತ್ರ ಸಿದ್ದರಾಮಯ್ಯ ಬಣದ್ದಾಗಿದೆ. ಆ ಮೂಲಕ ಕೆಪಿಸಿಸಿಯಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಈ ಕುರಿತು ಮಾಜಿ ಸಚಿವ ಕೆ.ಜೆ.ಜಾರ್ಜ್ ಪ್ರತಿಕ್ರಿಯಿಸಿ, ಮೊದಲು ಕೆಪಿಸಿಸಿ ಅಧ್ಯಕ್ಷರು ನೇಮಕ ಆಗಬೇಕು. ಆನಂತರ ಕಾರ್ಯಾಧ್ಯಕ್ಷ ರ ವಿಚಾರ. ಆದಷ್ಟು ಬೇಗ ಹೈಕಮಾಂಡ್ ಕೆಪಿಸಿಸಿಗೆ ಸಾರಥಿಯನ್ನು ಅಂತಿಮಗೊಳಿಸಬೇಕು ಎಂದರು.ವಿಪಕ್ಷ ಹಾಗೂ ಶಾಸಕಾಂಗ ನಾಯಕ ಹುದ್ದೆ ಬೇರೆ ಬೇರೆ ಆಗಬೇಕು ಎಂದು ಎಲ್ಲಿಯೂ ಚರ್ಚೆ ಆಗಿಲ್ಲ. ಸಿಎಲ್‌ಪಿ, ಎಲ್ಓಪಿ ವಿಚಾರದಲ್ಲಿ ಹೈಕಮಾಂಡ್ ಈಗಾಗಲೇ ತೀರ್ಮಾನ ತೆಗೆದುಕೊಂಡಿದೆ ಎಂದು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟರು.ವಿದೇಶದಲ್ಲಿ ಕುಟುಂಬದ ಸದಸ್ಯರ ಆಸ್ತಿ ವಿವರ ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ ಎಂದು ಜಾರಿ ನಿರ್ದೇಶನಾಲಯದಿಂದ ಸಮನ್ಸ್ ಜಾರಿ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಕೆ.ಜೆ.ಜಾರ್ಜ್, ಡಿ.ಕೆ ರವಿ ಪ್ರಕರಣದಲ್ಲಿ ಏನು ತೀರ್ಪು ಬಂದಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಸಿಬಿಐ ಬಿ ರಿಪೋರ್ಟ್ ಹಾಕಿದ ಮೇಲೆ ಬಿಜೆಪಿಯವರು ಬಾಯಿ ಬಿಚ್ಚಲೇ ಇಲ್ಲ. ಡಿವೈಎಸ್‌ಪಿ ಗಣಪತಿ ಪ್ರಕರಣದಲ್ಲಿಯೂ ಹಾಗೇ ಆಗಿದೆ. ಉಕ್ಕಿನ ಸೇತುವೆ ನಿರ್ಮಾಣ, ವೈಟ್ ಟ್ಯಾಪಿಂಗ್ ಆರೋಪ ಮಾಡಿದ್ದರು. ಇದೆಲ್ಲ ನೋಡಿದರೆ ತಮ್ಮನ್ನು ಗುರಿಯಾಗಿಸಿಕೊಂಡೇ ಎಲ್ಲವನ್ನು ಮಾಡಲಾಗುತ್ತಿದೆ ಎಂಬುದು ಸ್ಪಷ್ಟ ಎಂದರು.