ಸಿಎಸ್‌ಆರ್ ಅನುದಾನ ಬಳಸಿ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮ: ಸಚಿವ ಎಂ.ಬಿ.ಪಾಟೀಲ

Steps to bring about radical change in the education sector using CSR grants: Minister M.B. Patil

ವಿಜಯಪುರ ಏ. 19: ಸಿಎಸ್‌ಆರ್ ಅನುದಾನವನ್ನು ಬಳಕೆ ಮಾಡಿಕೊಂಡು ವಿವಿಧ ಸಾಮಾಜಿಕ, ಅಭಿವೃದ್ದಿ ಕಾರ್ಯಗಳೊಂದಿಗೆ ಶಿಕ್ಷಣ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆಗೆ ಕ್ರಮ ವಹಿಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಖಾತೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರು ಹೇಳಿದರು.  

ಶನಿವಾರ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಸಿಎಸ್‌ಆರ್ ಅನುದಾನದಡಿ ಬಬಲೇಶ್ವರ ಮತಕ್ಷೇತ್ರದ ಕೊಟ್ಯಾಳ ಗ್ರಾಮದಲ್ಲಿ ಸರಕಾರಿ ಶಾಲೆಯ 10 ಸುಸಜ್ಜಿತ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿದ ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.  

ಸಮಾಜ ಪ್ರಗತಿಯತ್ತ ಸಾಗಲು ಶಿಕ್ಷಣ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ, ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ಸುಸಜ್ಜಿತ ಶಾಲಾ ಕಟ್ಟಡ, ಮಕ್ಕಳಿಗಾಗಿ ಪ್ರತ್ಯೇಕ ಶೌಚಾಲಯ, ಗುಣಮಟ್ಟ ಶಿಕ್ಷಣ, ಸ್ಮಾರ್ಟ್‌ ಕ್ಲಾಸ್ ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಿ ಶೈಕ್ಷಣಿಕ ಕ್ಷೇತ್ರಕ್ಕೆ ಪೂರಕವಾದ ವಾತಾವರಣ ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.   

ನಗರ ಪ್ರದೇಶದ ಮಕ್ಕಳಂತೆಯೇ ಗ್ರಾಮೀಣ ಭಾಗದ ಮಕ್ಕಳು ಸಹ ಉತ್ತಮ, ಗುಣಮಟ್ಟದ ಶಿಕ್ಷಣ ಪಡೆದು, ಸಮಾಜದಲ್ಲಿ ಅತ್ಯುನ್ನತ ಸ್ಥಾನ ಪಡೆಯಬೇಕೆಂಬ ಈ ಸದುದ್ದೇಶಕ್ಕೆ ಅಂತರರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣ ಪ್ರತಿಷ್ಠಾನ ಕೈ ಜೋಡಿಸಿದೆ. ಕೇವಲ ಶಾಲಾ ಕೊಠಡಿಗಳ ನಿರ್ಮಾಣ ಮಾತ್ರವಲ್ಲದೇ ಭವಿಷ್ಯದಲ್ಲಿ ಶಿಕ್ಷಕರ ಕೊರತೆ ಎದುರಾದಲ್ಲಿ ಶಿಕ್ಷಕರನ್ನು ನಿಯೋಜಿಸಿ ಸಂಸ್ಥೆಯಿಂದಲೇ ಶಿಕ್ಷಕರ ವೇತನ ಪಾವತಿ ಮಾಡುವ ಕಾರ್ಯಕ್ಕೆ ಮುಂದಾಗಿದ್ದು, ಇದು ಸಂಸ್ಥೆಯ ಸಾಮಾಜಿಕ ಕಳಕಳಿಯನ್ನು ಪ್ರದರ್ಶಿಸಿದೆ ಎಂದು ಅವರು ಹೇಳಿದರು.  

ವಿಶ್ವದಲ್ಲೇ ಅತ್ಯುನ್ನತ ವಿಮಾನ ನಿಲ್ದಾಣದ ಹೆಗ್ಗಳಿಕೆ ಪಾತ್ರವಾಗಿರುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಶ್ರೇಷ್ಠ ವಿಮಾನ ನಿಲ್ದಾಣವೆಂದು ಪ್ರಶಸ್ತಿ ಪಡೆದುಕೊಂಡಿದೆ. ಈ ಪ್ರತಿಷ್ಠಾನದ ಸಿಎಸ್‌ಆರ್ ಅನುದಾನದಲ್ಲಿ ಬಬಲೇಶ್ವರ ಮತಕ್ಷೇತ್ರದ ಕೋಟ್ಯಾಳ ಹಾಗೂ ಕಾತ್ರಾಳದಲ್ಲಿ ತಲಾ 2.5 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ, ವಿವಿಧ ಕಂಪನಿಗಳು ಹಲವು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಸಿಎಸ್‌ಆರ್ ಅನುದಾನವನ್ನು ಬಳಸಿ, ವಿವಿಧ ರಸ್ತೆ ಅಭಿವೃದ್ದಿ, ಶಾಲಾ ಕೊಠಡಿಗಳು, ಸ್ಮಾರ್ಟ್‌ ಕ್ಲಾಸ್, ಮಕ್ಕಳಿಗಾಗಿ ಪಠ್ಯೇತರ ಚಟುವಟಿಕೆ, ಆಟೋಟ, ಸುಸಜ್ಜಿತ ಗ್ರಂಥಾಲಯ, ಮಕ್ಕಳಿಗಾಗಿ ಶಾಲೆಗಳಲ್ಲಿ ಪ್ರತ್ಯೇಕ ಶೌಚಾಲಯ ಸೇರಿದಂತೆ ವಿವಿಧ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.  

ಇತ್ತೀಚೆಗಷ್ಟೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡು, ಯಶಸ್ವಿಗೊಳಿಸಲಾಗಿದ್ದು, ಸಮಾವೇಶದಲ್ಲಿ ಭಾಗವಹಿಸಿದ್ದ ವಿವಿಧ ಕಂಪನಿಗಳಲ್ಲಿ ಶೇ.45ರಷ್ಟು ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದೆ ಬಂದಿವೆ. ಟೋಯೋಟಾ ಕಂಪನಿ ಮೂಲಕ ಈಗಾಗಲೇ 500ಕ್ಕೂ ಹೆಚ್ಚು ಜನರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಫಾಕ್ಸಾನ್ ಕಂಪನಿಯಿಂದಲೂ ನೇಮಕಾತಿ ನಡೆಯಲಿದ್ದು, ಈ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ 10 ಸಾವಿರ ಜನರಿಗೆ ಉದ್ಯೋಗಾವಕಾಶ ದೊರೆಯಲಿದೆ ಎಂದು ಅವರು ಹೇಳಿದರು.  

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಫೈನಾನ್ಸ್‌ ಆಫೀಸರ್ ಭಾಸ್ಕರ್ ಆನಂದ ರಾವ್ ಅವರು ಮಾತನಾಡಿ, ವಿವಿಧ ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳುವುದೇ ನಮ್ಮ ಪ್ರತಿಷ್ಠಾನದ ಉದ್ದೇಶವಾಗಿದೆ. ಪ್ರತಿಷ್ಠಾನದ ವತಿಯಿಂದ ಜಲ, ಶಿಕ್ಷಣ, ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಅಭಿವೃದಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ. 5 ಸರ್ಕಾರಿ ಶಾಲೆಗಳ ಮರು ನಿರ್ಮಾಣ, 25 ಶಾಲೆಗಳ ನವೀಕರಣ ಕಾರ್ಯಗಳನ್ನು ಈಗಾಗಲೇ ಪ್ರತಿಷ್ಠಾನದ ವತಿಯಿಂದ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.  

 ಮಕ್ಕಳ ಭವಿಷ್ಯಕ್ಕೆ ಅಧ್ಯಾಯ ಬರೆಯುವ ಈ ಮಹತ್ವದ ಕಾರ್ಯದಲ್ಲಿ ನಾನು ಭಾಗಿಯಾಗಿರುವುದು ಅತ್ಯಂತ ಹೆಮ್ಮೆ ಹಾಗೂ ಸಂತಸ ತಂದಿದೆ. ಸಚಿವರ ಬಯಕೆಯಂತೆ ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣ ದೊರಕಿಸುವ, ಹಳ್ಳಿಯ ಮಕ್ಕಳಿಗೆ ನಗರ ಮಕ್ಕಳಂತೆ ಶಿಕ್ಷಣ ದೊರೆಯುವ ಉದ್ದೇಶ ಅವರ ದೃಷ್ಟಿಕೋನದ ಫಲವಾಗಿ ಈ ಕಾರ್ಯ ಸಾಧ್ಯವಾಗಿದೆ ಎಂದು ಅವರು  ಹೇಳಿದರು.  

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೋಭಾ ಖೈರಾವ್, ಎಸ್‌ಡಿಎಂಸಿ ಅಧ್ಯಕ್ಷ ಸುಭಾಸ ಹಿಪ್ಪರಗಿ, ಕೆಂಪೇಗೌಡ ವಿಮಾನ  ನಿಲ್ದಾಣ ಪ್ರತಿಷ್ಠಾನದ ಪ್ರಧಾನ ವ್ಯವಸ್ಥಾಪಕ ದಿನೇಶ ಕುಮಾರ, ಕಾರ​‍್ೋರೇಟ್ ಅಸೋಸಿಯೇಟ್ಸ್‌ನ ಚಂದ್ರಶೇಖರ ಬಿರಾದಾರ, ಸಿಎಆರ್ ವ್ಯವಸ್ಥಾಪಕಿ ಶ್ರೀಮತಿ ಪ್ರತಿಭಾ ಕುಲಕರ್ಣಿ, ಅಭಿಯಂತರ ರಮೇಶ, ಜಕ್ಕಪ್ಪ ಯಡವೆ, ತಾಲೂಕ ಪಂಚಾಯತ ಕಾರ್ಯ ನಿರ್ವಾಹಕ ಅಧಿಕಾರಿ ಬಸವಂತ್ರಾಯಗೌಡ ಬಿರಾದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೋದಿನಿ ಬಳೋಲಮಟ್ಟಿ ಸೇರಿದಂತೆ ಗ್ರಾಮದ ಹಿರಿಯರು, ಇತರರು ಉಪಸ್ಥಿತರಿದ್ದರು.