ಗದಗ 06: ಜಿಲ್ಲೆಯಲ್ಲಿ ಮಾವಿನ ತೋಟಗಳಲ್ಲಿ ಹೂವು ಬಿಡುವುದು ತಡವಾಗಿದ್ದು, ರೈತರು ಮಾವಿನ ಬೆಳೆಗೆ 5 ಗ್ರಾಂ ಮ್ಯಾಂಗೋ ಸ್ಪೆಷಲ್ ಲಘು ಪೋಷಕಾಂಶಗಳ ಮಿಶ್ರಣನ್ನು ಹಾಗೂ 10 ಗ್ರಾಂ ಪೊಟ್ಯಾಶಿಯಂ ನೈಟ್ರೇಟ್ (13:0:45) ನೀರಿನಲ್ಲಿ ಕರಗುವ ಗೊಬ್ಬರವನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ಇದರ ಜೊತೆಗೆ ಒಂದು ಶ್ಯಾಂಪೂ ಪ್ಯಾಕೆಟ್ ಅಥವಾ 5 ಮಿ.ಲೀ. ಸೋಪಿನ ದ್ರಾವಣ (ಸ್ಟಿಕರ್) ಹಾಗೂ 2-3 ನಿಂಬೆ ಹಣ್ಣಿನ ರಸವನ್ನು 20 ಲೀಟರ್ ನೀರಿಗೆ ಹಾಕಿ ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ಎಲ್ಲ ಮಾವಿನ ಮರಗಳಲ್ಲಿ ಒಮ್ಮೆಲೇ ಹೂವು ಬಿಡಲು ಸಹಾಯವಾಗುತ್ತದೆ. ಇದರ ಜೊತೆಗೆ ಮಾವಿನ ಹೂವಿನ ವಿಕಾರತೆ (ಗೊಡ್ಡು ಹೂವಿನತೆನೆ) ಹಾಗೂ ಸ್ಪಾಂಜಿ ಟಿಶ್ಯೂ ಕಡಿಮೆಯಾಗುತ್ತದೆ ಮತ್ತು ಗುಣಮಟ್ಟದ ಇಳುವರಿಯನ್ನು ಪಡೆಯಬಹುದು.
ಮಾವಿನ ಬೆಳೆಯಲ್ಲಿ ಹೊಸ ಚಿಗುರು ಮೂಡುತ್ತಿದ್ದು, ಚಿಗುರು ಎಲೆಗಳನ್ನು ಬಾಧಿಸುವ ಗೂಡುಮಾರಿ ಹುಳು (ಎಲೆಗಳನ್ನು ಹೆಣೆಯುವ ಹುಳು), ಗೊಂಡೆ ಹುಳು (ಹೂವುಗಳನ್ನು ಹೆಣೆಯುವ ಹುಳು), ಎಲೆ ತಿನ್ನುವ ಕೀಡೆಗಳು, ರೆಂಬೆ ಕುಡಿ ಕೊರಕ ಮತ್ತು ಇತರೆ ಕೀಡೆಗಳು ಕಂಡು ಬರುತ್ತಿವೆ. ಆದ್ದರಿಂದ ರೈತರು ಮಾವಿನ ಬೆಳೆಗೆ 2.5 ಮಿ.ಲೀ ಪ್ರೊಪೆನೋಫಾಸ್ 50 ಈ.ಸಿ ಮತ್ತು 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ 80 ಡಬ್ಲ್ಯೂ.ಪಿ.ಗಳ ಜೊತೆಗೆ 0.5 ಮಿ.ಲೀ ಅಂಟನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು ಅಥವಾ 1 ಮಿ.ಲೀ. ಬೇವಿನ ಮೂಲದ ಕೀಟನಾಶಕವಾದ ಅಜಾಡಿರೆಕ್ಟಿನ್ (10000 ಪಿಪಿಎಂ)ನ್ನು ಕೀಟನಾಶಕಗಳ ಜೊತೆಗೆ ಬೆರಸಿ ಸಿಂಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ಕೀಟಗಳ ಹತೋಟಿಯನ್ನು ಮಾಡಬಹುದು. ಬೆಳೆಯ ಈ ಹಂತದಲ್ಲಿ ರೈತರು ಯಾವುದೇ ಕಾರಣಕ್ಕೂ ಬೆಳೆಗೆ ನೀರನ್ನು ಕೊಡಬಾರದು. ಒಂದು ವಾರದವರೆಗೆ ದಟ್ಟವಾದ ಇಬ್ಬನಿ ಅಥವಾ ಮಂಜು ಬಿದ್ದರೆ ಮಾವಿನ ಬೆಳೆಗೆ ರೋಗಗಳು ಖಚಿತವಾಗಿ ಬರುತ್ತವೆ. ಅಂತಹ ಸಂದರ್ಭಗಳಲ್ಲಿ ರೈತರು ಕೂಡಲೇ ಸಿಂಪರಣೆಯನ್ನು ಕೈಗೊಳ್ಳಬೇಕು.