ಸಿಡ್ನಿ, ಜ 6 ನ್ಯೂಜಿಲೆಂಡ್ ತಂಡದ ಹಿರಿಯ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ರಾಸ್ ಟೇಲರ್ ಟೆಸ್ಟ್ ಕ್ರಿಕೆಟ್ ವೃತ್ತಿ ಜೀವನದಲ್ಲಿ ವಿಶಿಷ್ಠ ದಾಖಲೆಗೆ ಭಾಜನರಾಗಿದ್ದಾರೆ. ದೀರ್ಘ ಅವಧಿ ಮಾದರಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಕಿವೀಸ್ ಮೊದಲ ಆಟಗಾರ ಎಂಬ ಹಿರಿಮೆಗೆ ಟೇಲರ್ ಪಾತ್ರರಾಗಿದ್ದಾರೆ.ಸಿಡ್ನಿ ಕ್ರಿಕೆಟ್ ಅಂಗಳದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ನಾಲ್ಕನೇ ದಿನ ಈ ಸಾಧನೆ ಮಾಡಿದರು. ದ್ವಿತೀಯ ಇನಿಂಗ್ಸ್ ನಲ್ಲಿ ನಥಾನ್ ಲಿಯಾನ್ ಎಸೆತದಲ್ಲಿ ಮಿಡ್ ವಿಕೆಟ್ ಕಡೆ ಚೆಂಡು ಹೊಡೆದು ಮೂರು ರನ್ ಗಳಿಸುತ್ತಿದ್ದಂತೆ ಟೇಲರ್ ಈ ಮೈಲಗಲ್ಲು ಸೃಷ್ಠಿಸಿದ್ದಾರೆ.
35ರ ಪ್ರಾಯದ ರಾಸ್ ಟೇಲರ್ 99 ಪಂದ್ಯಗಳಲ್ಲಿ 174 ಇನಿಂಗ್ಸ್ ಗಳಿಂದ 7,174 ರನ್ ದಾಖಲಿಸಿದ್ದಾರೆ. ಇದರಲ್ಲಿ ಅವರು 46.28 ಸರಾಸರಿಯೊಂದಿಗೆ 19 ಶತಕಗಳು ಸೇರಿದಂತೆ 33 ಅರ್ಧಶತಕಗಳು ಒಳಗೊಂಡಿವೆ. 111 ಟೆಸ್ಟ್ ಪಂದ್ಯಗಳಿಂದ 7,172 ರನ್ ಗಳಿಸಿರುವ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಸ್ಟಿಫೆನ್ ಫ್ಲೆಮಿಂಗ್ ಅವರನ್ನು ಟೇಲರ್ ಹಿಂದಿಕ್ಕಿದ್ದಾರೆ.ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ರಾಸ್ ಟೇಲರ್ ರನ್ ಗಳಿಸುವಲ್ಲಿ ತಿಣುಕಾಡುತ್ತಿದ್ದಾರೆ. ಮೆಲ್ಬೋರ್ನ್ ಅಂಗಳದಲ್ಲಿಯೇ ಇವರು ಈ ದಾಖಲೆ ಮಾಡಬಹುದಿತ್ತು. ಆದರೆ, ಅವರು 6 ರನ್ ಗಳಿಗೆ ಸೀಮಿತರಾಗಿದ್ದರು. ಆರೂ ಇನಿಂಗ್ಸ್ ಗಳಲ್ಲಿ ಕ್ರಮವಾಗಿ 80, 22, 4, 2, 22 ಹಾಗೂ 22 ರನ್ ಗಳಿಸಿದ್ದಾರೆ. ಆ ಮೂಲಕ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.ಕಳೆದ ಫೆಬ್ರುವರಿಯಲ್ಲಿ ರಾಸ್ ಟೇಲರ್ ಅವರು ಏಕದಿನ ಕ್ರಿಕೆಟ್ ನಲ್ಲಿಯೂ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಫ್ಲೆಮಿಂಗ್ ದಾಖಲೆ ಹಿಂದಿಕ್ಕಿದ್ದರು.