ಬಿಜೆಪಿ ಬಲಗೊಳಿಸಲು ರಾಜ್ಯ ಪ್ರವಾಸ; ಯಡಿಯೂರಪ್ಪ

yadiyurappa

ಹುಬ್ಬಳ್ಳಿ: ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಬಲಗೊಳಿಸಿ ಮುಂಬರುವ ಚುನಾವಣೆಯಲ್ಲಿ 150 ವಿಧಾನಸಭಾ  ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಕರ್ನಾಟಕವನ್ನು ಅತ್ಯಂತ ಶಕ್ತಿಯುತ ರಾಜ್ಯ ಎಂದು ಸಾಬೀತುಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಬಿಜೆಪಿ ಏರ್ಪಡಿಸಿದ್ದ ಸಿಎಎ ಕುರಿತ ಜನಜಾಗೃತಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ನಾವು ಕೇವಲ ಮೂರು ವರ್ಷ ಮಾತ್ರ ಅಧಿಕಾರವಿರುತ್ತದೆ. ನಂತರ ಎಲ್ಲರ ಶ್ರಮದಿಂದ 150 ವಿಧಾನಸಭಾ ಕ್ಷೇತ್ರಗಳನ್ನು ಗೆದ್ದು ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಲುವಾಗಿ ರಾಜ್ಯದಾದ್ಯಂತ ಪ್ರವಾಸ ಕೈಗೊಳ್ಳಬೇಕಿದೆ. ಮೋದಿ ಹಾಗೂ ಅಮಿತ್ ಶಾ ಅವರಿಗೆ ಕರ್ನಾಟಕ ಶಕ್ತಿಯುತ ರಾಜ್ಯ ಎಂದು ತೋರಿಸಬೇಕಾಗಿದೆ ಎಂದರು. 

ರಾಜ್ಯದಲ್ಲಿ ನೀರಾವರಿ ಯೋಜನೆಗೆ ಆದ್ಯತೆ ನೀಡಿ, ರೈತರ ಬೆಲೆಗೆ ವೈಜ್ಞಾನಿಕ ಬೆಲೆ ಕೊಟ್ಟಿ, ಎಲ್ಲರೂ ಸ್ವಾಭಿಮಾನದಿಂದ ಬದುಕುವ ವ್ಯವಸ್ಥೆ ಮಾಡಬೇಕಿದೆ. ಮಾರ್ಚ್ 5ರ ಬಜೆಟ್ ನಲ್ಲಿ ರಾಜ್ಯದ ರೈತರು, ದೀನದಲಿತರು, ಮಹಿಳೆಯರು, ಯುವಕರ ಪರವಾಗಿ ಅನೇಕ ನಿರ್ಧಾರಗಳನ್ನು ಕೈಗೊಂಡು ಕರ್ನಾಟಕವನ್ನು ಮಾದರಿ ರಾಜ್ಯ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು. 

ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇವೆ. ಯುವ ಮೋರ್ಚಾ, ಸೇರಿದಂತೆ ಎಲ್ಲಾ ಮೋರ್ಚಾಗಳನ್ನು ಬಲಗೊಳಿಸಿ, ಪಕ್ಷ ಬಲಗೊಳಿಸಿ ಸಂಕಲ್ಪ ಮಾಡೋಣ  ಎಂದು ಕರೆ ನೀಡಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ನಿರಾಶ್ರಿತರಿಗೆ ನೆರವು ನೀಡುವ ಉದಾತ್ತ ಗುರಿಯನ್ನು ಹೊಂದಿದೆ. ಅದನ್ನು ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕು ಎಂದು ಕರೆ ನೀಡಿದರು.