ಮಕ್ಕಳ ಪಾಲನಾ ಸಂಸ್ಥೆಗಳ ಕಟ್ಟಡ ನಿರ್ಮಾಣ ಸ್ಥಳಕ್ಕೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಭೇಟಿ: ಪರೀಶೀಲನೆ

State Child Rights Protection Commission member Shekaragouda Ramatna visits construction site of chi

ಲೋಕದರ್ಶನ ವರದಿ 

ಮಕ್ಕಳ ಪಾಲನಾ ಸಂಸ್ಥೆಗಳ ಕಟ್ಟಡ ನಿರ್ಮಾಣ ಸ್ಥಳಕ್ಕೆ ರಾಜ್ಯ ಮಕ್ಕಳ ಹಕ್ಕುಗಳ  ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಭೇಟಿ: ಪರೀಶೀಲನೆ 

ಕೊಪ್ಪಳ 17: ಕೊಪ್ಪಳ ತಾಲೂಕಿ ಟಣಕನಕಲ್ಲ ಗ್ರಾಮದಲ್ಲಿ ಮಕ್ಕಳ ನ್ಯಾಯ(ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015 “ಮಿಷನ್ ವಾತ್ಸಲ್ಯ”ದಡಿಯಲ್ಲಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ಮಕ್ಕಳ ಪಾಲನಾ ಕೇಂದ್ರಗಳಾದ “ಸರಕಾರಿ ಬಾಲಕರ ಬಾಲಮಂದಿರ ಮತ್ತು ಬಾಲಕಿಯರ ಬಾಲಮಂದಿರ” ಕಟ್ಟಡ ನಿರ್ಮಾಣ ಸ್ಥಳಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶೇಖರಗೌಡ ಜಿ. ರಾಮತ್ನಾಳ ಅವರು ಮಂಗಳವಾರ ಭೇಟಿ ನೀಡಿ, ಕಾಮಗಾರಿಯನ್ನು ವೀಕ್ಷಿಸಿದರು.  

ಮಕ್ಕಳ ಪಾಲನಾ ಕೇಂದ್ರಗಳಲ್ಲಿ “ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಮಕ್ಕಳ, ಆರೈಕೆ ಮತು ್ತರಕ್ಷಣೆ ಕೈಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಪೋಷಣೆ ಮತ್ತು ರಕ್ಷಣೆ ಅವಶ್ಯವಿರುವ ಬಹಳಷ್ಟು ಮಕ್ಕಳು ಇದ್ದು, ಈ ಬಾಲಮಂದಿರಗಳು ಜಿಲ್ಲೆಗೆ ಅತ್ಯವಶ್ಯಕವಾಗಿವೆ. ಸದ್ಯ ಬಾಲಮಂದಿರಗಳು ಬಾಡಿಗೆ ಕಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದನ್ನು ಗಮನಿಸಿ ಸರಕಾರವು ಎರಡು ಬಾಲ ಮಂದಿರಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಗೊಳಿಸಿ ಮಂಜುರಾತಿ ಆದೇಶ ನೀಡಿದೆ. ಬಾಲಮಂದಿರಗಳ ನಿರ್ಮಾಣಕ್ಕೆ ಶಿಲಾನ್ಯಾಸವಾಗಿ ವರ್ಷಗಳು ಕಳೆದಿದ್ದು, ಕೇವಲ ಬಾಲಕರ ಬಾಲಮಂದಿರ ಕಟ್ಟಡವು ಬುನಾದಿ ಹಂತದಲ್ಲಿದೆ. ಬಾಲಕಿಯರ ಬಾಲಮಂದಿರವು ನಿರ್ಮಾಣ ಕಾರ್ಯ ಆರಂಭಿಸದಿರುವ ಬಗ್ಗೆ ತೀವ್ರ ಅಸಮಾದಾನವನ್ನು ವ್ಯಕ್ತಪಡಿಸಿದ ಅವರು, ಈ ಕಟ್ಟಡಗಳ ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಆರಂಭಿಸಿ, ಉತ್ತಮ ಗುಣಮಟ್ಟದ ಕಟ್ಟಡವನ್ನು ನಿರ್ಮಾಣ ಮಾಡುವಂತೆ ಕೊಪ್ಪಳ ನಿರ್ಮಿತಿ ಕೇಂದ್ರದ ಸಹಾಯಕ ಅಭಿಯಂತರರಿಗೆ ಸೂಚಿಸಿದರು. ತಪ್ಪಿದಲ್ಲಿ ನಿರ್ಮಾಣ ಕಾಮಗಾರಿಯ ಗುತ್ತಿಗೆಯನ್ನು ರದ್ದುಪಡಿಸಿ, ಬೇರೆ ಸಂಸ್ಥೆಗೆ ನೀಡುವಂತೆ ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದಾಗಿ ಎಚ್ಚರಿಸಿದರು.  

ಈ ಕಟ್ಟಡ ನಿರ್ಮಾಣ ಕಾಮಗಾರಿಗೆ ಮತ್ತು ಮುಂದಿನ ದಿನಗಳಲ್ಲಿ ಮಕ್ಕಳಿಗೆ ಅವಶ್ಯಕವಾಗಬಹುದಾದ ನೀರಿನ ಸೌಲಭ್ಯವನ್ನು ಒದಗಿಸುವಂತೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು. ಕಟ್ಟಡ ನಿರ್ಮಾಣ ಕಾಮಗಾರಿಗೆ ಜಿಲ್ಲಾಧಿಕಾರಿಗಳು ನೀಡಿರುವ ಭೂವಿಯು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಹೆಸರಿನಲ್ಲಿದ್ದು, ಕೇಂದ್ರ ಕಛೇರಿಯ ಸುತ್ತೋಲೆಯಂತೆ ಈ ಜಮೀನನ್ನು ನಿರ್ದೇಶಕರು, ಮಕ್ಕಳ ರಕ್ಷಣಾ ನಿರ್ದೇಶನಾಲಯ ಬೆಂಗಳೂರುರವರ ಹೆಸರಿನಲ್ಲಿ ವರ್ಗಾಯಿಸುವಂತೆ ತಹಶೀಲ್ದಾರರಿಗೆ ತಿಳಿಸಿದರು.  

ಈ ಭೇಟಿ ಅವಧಿಯಲ್ಲಿ ಕೊಪ್ಪಳ ತಹಶೀಲ್ದಾರ ವಿಠ್ಠಲ ಚೌಗಲಾ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ, ಓಜನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹುಚ್ಚಪ್ಪ ಭೋವಿ, ಕೊಪ್ಪಳ ನಿರ್ಮಿತಿ ಕೇಂದ್ರದ ಸಹಾಯಕ ಅಭಿಯಂತರರು, ಓಜನಹಳ್ಳಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಬಸಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.