ಕೇಂದ್ರ ಆರೋಗ್ಯ ಸಚಿವರೊಂದಿಗೆ ಶ್ರೀರಾಮುಲು‌ ವಿಡಿಯೋ ಸಂವಾದ; ರಾಜ್ಯದಲ್ಲಿ 10 ಹಾಟ್ ಸ್ಪಾಟ್ ಜಿಲ್ಲೆ ಗುರುತು

ಬಳ್ಳಾರಿ, ಏ.10, ರಾಜ್ಯದಲ್ಲಿ ಕೊರೋನಾ ಸೋಂಕಿನ ಹತ್ತು ಹಾಟ್ ಸ್ಪಾಟ್ ಗಳನ್ನು ಗುರುತಿಸಲಾಗಿದ್ದು, ಇವುಗಳ ಬಗ್ಗೆ ಕೇಂದ್ರ ಆರೋಗ್ಯ ಸಚಿವರ ಜೊತೆ ಮಾತುಕತೆ  ನಡೆಸಿದ್ದೇನೆ. ಪ್ರಧಾನಿ‌ ನರೇಂದ್ರ ಮೋದಿ ನಾಳೆ ಮುಖ್ಯ ಮಂತ್ರಿಗಳ‌ ಜೊತೆ ಸಭೆ ನಡೆಸಿದ ಬಳಿಕ  ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.ಕೇಂದ್ರ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ನಡೆಸಿದ ವೀಡಿಯೋ ಕಾನ್ಫರೆನ್ಸ್ ನಲ್ಲಿ ಜಿಲ್ಲಾ ಪಂಚಾಯತಿ ಕಚೇರಿಯ ಸಭಾಂಗಣದಲ್ಲಿ ಭಾಗವಹಿಸಿದ ಬಳಿಕ ಅವರು ಮಾತನಾಡಿದರು.
ಕೇಂದ್ರದ ಆರೋಗ್ಯ ಮಂತ್ರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ  ಮಾತನಾಡಿದ್ದಾರೆ. ಅವರಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ತಿಳಿಸಿದ್ದೇವೆ. ರಾಜ್ಯದಲ್ಲಿ ಕೊರೋನಾ ಸೋಂಕಿನ 207  ಪಾಸಿಟಿವ್ ಪ್ರಕರಣ ಹಾಗೂ 6 ಸಾವು ಸಂಭವಿಸಿದೆ. ಮಾತ್ರವಲ್ಲ ಮೂವತ್ತು ಜನರು ಗುಣಮುಖರಾಗಿದ್ದಾರೆ ಎಂದರು.10 ಜಿಲ್ಲೆಯನ್ನು ಹಾಟ್ ಸ್ಪಾಟ್ ಜಿಲ್ಲೆ ಎಂದು ಗುರುತಿಸಲಾಗಿದೆ. ಐದು ಸಾವಿರಕ್ಕೂ ಹೆಚ್ಚು ಐಸೋಲೇಷನ್ ವಾರ್ಡ್ ಮಾಡಿರುವ ಬಗ್ಗೆ ಕೇಂದ್ರ ಸಚಿವರಿಗೆ ತಿಳಿಸಿದ್ದೇವೆ. ಮೈಸೂರು ಜಿಲ್ಲೆಯಲ್ಲಿ 37 ಪಾಸಿಟಿವ್ ಬಂದಿವೆ. ಇವರಲ್ಲಿ‌ 26 ಜನ ಜ್ಯೂಬಿಲಿಯೆಂಟ್ ಕಾರ್ಖಾನೆಯಿಂದ ಬಂದವರಾಗಿದ್ದಾರೆ ಎಂದು ಶ್ರೀರಾಮುಲು ತಿಳಿಸಿದರು.
ಚೈನಾದಿಂದ ಬಂದ ಕಂಟೈನರ್ ನಿಂದ ರೋಗ ಬಂದಿದೆ. ಕಂಟೈನರ್ ನೊಳಗೆ ಇರುವವರ ರಕ್ತ ಮತ್ತು ಗಂಟಲು ದ್ರವ ಮಾದರಿಯನ್ನು ಪುನಾಗೆ ಕಳುಹಿಸಲಾಗಿದೆ. ಈ ಬಗ್ಗೆ ವರದಿ ಬಂದಿಲ್ಲ ಈ ಬಗ್ಗೆ ಕೇಂದ್ರಕ್ಕೆ ಮಾಹಿತಿ ನೀಡಿದ್ದೇವೆಂದರು. ಜ್ಯೂಬಲಿಯಂಟ್  ಜೊತೆ ಜಪಾನ್ ‌ನವರು ಬಂದಿದ್ದರು. ಜಪಾನ್ ಸಿಬ್ಬಂದಿಗೆ  ಸಹ‌ ಪತ್ರ ಬರೆದಿದ್ದೇವೆ ಅಲ್ಲಿಂದ ಇನ್ನೂ ಉತ್ತರ ಬಂದಿಲ್ಲವೆಂದರು.ಕೊರೋನಾ ಸ್ಪಾಟ್ ಟೆಸ್ಟಿಂಗ್ ಕಿಟ್ ಏಪ್ರಿಲ್ 13ನೇ ತಾರಿಖಿನೊಳಗೆ ಬರುತ್ತದೆ. ಕೇಂದ್ರ ಸರಕಾರಕ್ಕೆ ಐದು ಲಕ್ಷ ಪಿಪಿಇ ಕಿಟ್ ಕೇಳಿದ್ದೇವೆ. ಐದು ಲಕ್ಷ ಎನ್ -95 ಮಾಸ್ಕ್‌ ಕೇಳಿದ್ದೇವೆಂದು ಸಹ ಅವರು ತಿಳಿಸಿದರು. ಸಚಿವರಾದ ಡಾ.ಕೆ. ಸುಧಾಕರ, ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಆಶ್ವತ್ ನಾರಾಯಣ ಮಧ್ಯೆ ಭಿನ್ನಾಭಿಪ್ರಾಯ ಇಲ್ಲ. ನಾವೆಲ್ಲಾ ಗೆಳೆಯರು. ತುರ್ತು ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದಿಲ್ಲ. ಯಾವುದೇ ವಸ್ತು ಖರೀದಿ ಮಾಡಲು ಐಎಎಸ್ ಅಧಿಕಾರಿಗಳ ತಂಡವಿದೆ. ಅವರೇ ಖರೀದಿ ‌ಮಾಡುತ್ತಾರೆ.  ರಾಜ್ಯದಲ್ಲಿ ಸೀಲ್ ಡೌನ್ ಬಗ್ಗೆ ಇನ್ನೂ ಚರ್ಚೆಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.