ನವದೆಹಲಿ, ಫೆ ೭, ಅಯೋಧ್ಯೆ ರಾಮಜನ್ಮ ಭೂಮಿಯಲ್ಲಿ ದೇವಸ್ಥಾನ ನಿರ್ಮಿಸುವ ಸಲುವಾಗಿ ಕೇಂದ್ರ ಸರಕಾರ ರಚಿಸಿರುವ ಸದಸ್ಯರ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ನ ೧೪ ಮಂದಿ ಟ್ರಸ್ಟಿಗಳ ಪೈಕಿ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರನ್ನು ನೇಮಿಸಲಾಗಿದೆ. ಪೇಜಾವರ ಮಠಾಧೀಶರಾಗಿದ್ದು ಇತ್ತೀಚೆಗೆ ಅಗಲಿದ ಹಿರಿಯ ವಿಶ್ವೇಶತೀರ್ಥ ಶ್ರೀಪಾದರು ರಾಮಮಂದಿರ ಆಂದೋಲನದಲ್ಲಿ ಸಲ್ಲಿಸಿದ್ದ ಸೇವೆ ಪರಿಗಣಿಸಿ ವಿಶ್ವಪ್ರಸನ್ನ ತೀರ್ಥರಿಗೆ ಟ್ರಸ್ಟ್ ನಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಒಟ್ಟು ಟ್ರಸ್ಟಿಗಳ ಪೈಕಿ ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಎರಡು ಟ್ರಸ್ಟಿಗಳನ್ನು ಹೊಂದಲಿದ್ದು, ಎರಡು ಟ್ರಸ್ಟಿಗ ಳನ್ನು ಉಳಿದ ಟ್ರಸ್ಟಿಗಳು ಸರ್ವಾನುಮತದಿಂದ ಆಯ್ಕೆ ಮಾಡ ಬೇಕೆಂಬ ನಿಯಮಗಳನ್ನು ರೂಪಿಸಲಾಗಿದೆ. ಪ್ರಯಾಗದ ವಾಸುದೇವಾನಂದ ಸರಸ್ವತಿ ಸ್ವಾಮೀಜಿ, ಹರಿದ್ವಾರದ ಪರಮಾನಂದಜೀ ಸ್ವಾಮೀಜಿ, ಪುಣೆಯ ಗೋವಿಂದ ದೇವ ಗಿರಿ, ಅಯೋಧ್ಯೆ ನಿರ್ಮೋಹಿ ಅಖಾಡದ ಮಹಂತ ದೇವೇಂದ್ರದಾಸ್ ಸಹ ಟ್ರಸ್ಟಿಗಳಾಗಿದ್ದಾರೆ. ಪ್ರತಿ ೩ ತಿಂಗಳಿಗೊಮ್ಮೆ ಸಭೆ ನಡೆಸಿ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ದೇಗುಲ ನಿರ್ಮಾಣ, ನಿರ್ವಹಣೆ, ಭದ್ರತೆ, ಹಣಕಾಸು ವ್ಯವಹಾರವೂ ಸೇರಿದಂತೆ ವಿವಿಧ ಚಟುವಟಿಕೆಗಳನ್ನು ನಡೆಸುವ ಅಧಿಕಾರವನ್ನು ಟ್ರಸ್ಟ್ಗೆ ಕಲ್ಪಿಸಲಾಗಿದೆ.