ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ : ಶ್ರೀನಿವಾಸ ಮಾನೆ ಚಾಲನೆ

Srinivasa Mane launches chariot festival in the backdrop of Grama Devi Jatra festival

ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ : ಶ್ರೀನಿವಾಸ ಮಾನೆ ಚಾಲನೆ  

ಹಾನಗಲ್ 19: ಇಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಗ್ರಾಮದೇವಿ ಮಹಾರಥೋತ್ಸವ ಸಹಸ್ರ ಸಹಸ್ರ ಸಂಖ್ಯೆಯ ಭಕ್ತ ಸಮೂಹದ ಹರ್ಷೋದ್ಘಾರದ ಮಧ್ಯೆ ಸಂಭ್ರಮದಿಂದ ನೆರವೇರಿತು. ಭಕ್ತರ ದ್ಯಾಮವ್ವ ನಿನ್ನಾಲ್ಕುಧೋ.. ಉಧೋ... ಜಯಘೋಷಣೆ ಮತ್ತು ವಿವಿಧ ಕಲಾವಾಧ್ಯ ಮೇಳಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ಸಾಗಿಬಂದ ಮಹಾರಥೋತ್ಸವ ಬುಧವಾರ ನಸುಕಿನಲ್ಲಿ ಪಾದಗಟ್ಟಿ ಬಳಿಯ ಆಕರ್ಷಕ ಮಂಟಪದಲ್ಲಿ ಕೊನೆಗೊಂಡು ಬಳಿಕ ಪ್ರತಿಷ್ಠಾಪನಾ ಮಹೋತ್ಸವ ಜರುಗಿತು. ಮಂಗಳವಾರ ರಾತ್ರಿ ಗ್ರಾಮದೇವಿ ದೇವಸ್ಥಾನದ ಬಳಿ ವಿಶೇಷ ಪೂಜೆ ಮತ್ತು ಧಾರ್ಮಿಕ ವಿಧಿಗಳು ಸಂಪನ್ನಗೊಂಡ ಬಳಿಕ ಶಾಸಕ ಶ್ರೀನಿವಾಸ ಮಾನೆ ಮಹಾರಥೋತ್ಸವಕ್ಕೆ ಚಾಲನೆ ನೀಡಿ, ಹಾನಗಲ್ ತಾಲೂಕಿನ ಸಮಸ್ತ ಜನತೆಯ ಸುಭಿಕ್ಷೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ರಥೋತ್ಸವ ರಂಜನಿ ವೃತ್ತದ ಮೂಲಕ ಪೇಟೆ ರಸ್ತೆಯಲ್ಲಿ ಹಾಯ್ದು ಮುಖ್ಯರಸ್ತೆ ಮೂಲಕ ಪಾದಗಟ್ಟಿ ದೇವಸ್ಥಾನ ಪ್ರವೇಶಿಸಿತು. ನೆರೆದ ಭಕ್ತ ಸಮೂಹದ ಕಾಳಿ ಕಾಳಿ ಮಹಾಕಾಳಿ, ದ್ಯಾಮವ್ವ-ದುರ್ಗವ್ವ ಮೂರು ಮುಕ್ತೆವ್ವ ನಿನ್ನಾಲ್ಕುಧೋ ಉಧೋ... ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಗ್ರಾಮದೇವಿ ಮೂರ್ತಿಯನ್ನು ಚಿನ್ನ ಮತ್ತು ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗಿತ್ತು. ಸೇಬು ಮತ್ತು ನಿಂಬೆಹಣ್ಣುಗಳ ಹಾರಗಳಿಂದ ಅಲಂಕರಿಸಲಾಗಿದ್ದು, ಗಮನ ಸೆಳೆಯಿತು. ದೇವಿಯ ಮೂರ್ತಿಗೆ ಪ್ರತಿಯೊಂದು ಮನೆಗಳ ಎದುರು ಹೆಂಗಳೆಯರು ಆರತಿ ಬೆಳಗಿ, ಭಕ್ತಿಭಾವದಿಂದ ಬರಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂದಿತು. ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಇಡೀ ಪಟ್ಟಣ ಸಿಂಗಾರಗೊಂಡಿತ್ತು. ಪೂಜಾ ಕುಣಿತ, ಚಂಡಿ ವಾದ್ಯ, ವೀರಗಾಸೆ, ಭಜನಾ ಮೇಳ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳ ಕಲಾ ಪ್ರದರ್ಶನ ಸಾಂಸ್ಕೃತಿಕ ಲೋಕವನ್ನೇ ಅನಾವರಣಗೊಳಿಸಿ ಜಾತ್ರಾ ಮಹೋತ್ಸವಕ್ಕೆ ಮೆರಗು ತಂದುಕೊಟ್ಟಿತು. ಕೆಲವು ಯುವಕರು ಹಲಿಗೆ ನುಡಿಸುತ್ತಾ ಬಗೆ ಬಗೆಯ ಸ್ವರಗಳನ್ನು ಹೊರಸೂಸಿ ನರ್ತಿಸಿ, ಸಂಭ್ರಮಿಸಿದರು. ಲಂಬಾಣಿ ಮಹಿಳೆಯರು ತಮ್ಮ ಸಮುದಾಯದ ಸಾಂಪ್ರದಾಯಿಕ ನೃತ್ಯ ಪ್ರದರ್ಶಿಸಿ ಗಮನ ಸೆಳೆದರು. ಮೆರವಣಿಗೆಯುದ್ದಕ್ಕೂ ಜೋಗತಿಯರು ಚಾಮರ ಅಲುಗಾಡಿಸುತ್ತಾ ತನ್ಮಯತೆಯಿಂದ ಉಧೋ.. ಉಧೋ... ಎಂದು ಉದ್ಘರಿಸುತ್ತಾ ಸಾಗಿಬಂದು ಭಕ್ತಿಭಾವ ಪ್ರದರ್ಶಿಸಿದರು. ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ, ತಹಶೀಲ್ದಾರ್ ರೇಣುಕಾ ಎಸ್‌., ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಪುರಸಭೆ ಅಧ್ಯಕ್ಷ ಪರಶುರಾಮ ಖಂಡೂನವರ, ಉಪಾಧ್ಯಕ್ಷೆ ವೀಣಾ ಗುಡಿ ಸೇರಿದಂತೆ ಜಾತ್ರಾ ಮಹೋತ್ಸವ ಸಮಿತಿಯ ಪದಾಧಿಕಾರಿಗಳು, ಅಪಾರ ಸಂಖ್ಯೆಯ ಭಕ್ತರು ನೆರೆದಿದ್ದರು.ಹಾನಗಲ್‌ನಲ್ಲಿ ಗ್ರಾಮದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಥೋತ್ಸವಕ್ಕೆ ಶಾಸಕ ಶ್ರೀನಿವಾಸ ಮಾನೆ ಚಾಲನೆ ನೀಡಿ ತಾಲೂಕಿನ ಸಮಸ್ತ ಜನತೆಯ ಸುಭಿಕ್ಷೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.