ಶ್ರೀನಗರ ಎನ್ ಕೌಂಟರ್ : ಇಬ್ಬರು ಉಗ್ರರು ಹತ, ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮ, ಓರ್ವ ಉಗ್ರ ಜೀವಂತ ಸೆರೆ

ಶ್ರೀನಗರ, ಫೆ 5 :      ನಗರದ ಹೊರವಲಯದ ಶ್ರೀನಗರ-ಬಾರಾಮುಲ್ಲಾ ರಸ್ತೆಯಲ್ಲಿ ಬುಧವಾರ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದು, ಓರ್ವ ಸಿಆರ್‌ಪಿಎಫ್ ಯೋಧ ಹುತಾತ್ಮರಾಗಿದ್ದಾರೆ. 

ಘಟನೆಯಲ್ಲಿ ಒಬ್ಬ ಉಗ್ರನನ್ನು ಸೆರೆ ಹಿಡಿಯಲಾಗಿದೆ.   

ನಗರದಿಂದ ಸುಮಾರು 12 ಕಿ.ಮೀ ದೂರದಲ್ಲಿರುವ ಲಾವಪೊರಾದ ಶ್ರೀನಗರ-ಬಾರಾಮುಲ್ಲಾ  ರಸ್ತೆಯಲ್ಲಿ ಸಿಆರ್ ಪಿಎಫ್  ತಪಾಸಣೆ ತಂಡದ ಮೇಲೆ ಮೋಟಾರ್ ಸೈಕಲ್‌ ನಲ್ಲಿ ಬಂದ ಮೂವರು ಉಗ್ರರು ಗುಂಡು ಹಾರಿಸಿದ್ದಾರೆ ಎಂದು  ಸಿಆರ್‌ಪಿಎಫ್ ವಕ್ತಾರರು ಯುಎನ್‌ಐಗೆ ತಿಳಿಸಿದ್ದಾರೆ.  

ಈ ವೇಳೆ ಭದ್ರತಾ ಪಡೆಗಳು ಸಹ ಪ್ರತಿದಾಳಿ ನಡೆಸಿದ್ದು, ಪರಸ್ಪರ ಗುಂಡಿನ ಚಕಮಕಿ ನಡೆದಿದೆ. ಘಟನೆಯಲ್ಲಿ ಇಬ್ಬರು ಉಗ್ರರು  ಹತರಾಗಿದ್ದು, ಸಿಆರ್ ಪಿಎಫ್ ನ ರಮೇಶ್ ರಂಜನ್ ಹುತಾತ್ಮರಾಗಿದ್ದಾರೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಸಿಆರ್ ಪಿಎಫ್ ಸೈನಿಕರು  ಗಾಯಗೊಂಡಿದ್ದರು. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಇಬ್ಬರಲ್ಲಿ ಒಬ್ಬ ಸೈನಿಕ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.  

ಗಾಯಗೊಂಡ ಓರ್ವ ಉಗ್ರನನ್ನು ಜೀವಂತವಾಗಿ ಹಿಡಿಯಲಾಗಿದ್ದು, ಆತನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಅವರು ಹೇಳಿದರು.  

ಘಟನೆಯ ನಂತರ ಶ್ರೀನಗರದಿಂದ ಬಾರಾಮುಲ್ಲಾಗೆ ಮತ್ತು ವಿಶ್ವ ಪ್ರಸಿದ್ಧ ಸ್ಕೀ ರೆಸಾರ್ಟ್ ಗುಲ್ಮಾರ್ಗ್‌ಗೆ  ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.