ವಿಜಯಪುರ ಮಾ.14: ಕೈವಾರ ತಾತಯ್ಯನವರು ತಮ್ಮ ಆದ್ಯಾತ್ಮಕತೆಯಿಂದ ಸಮಾಜದ ಕಣ್ಣುಗಳಾಗಿ ಜಗಕ್ಕೆ ಸನ್ಮಾರ್ಗ ತೋರಿದ ಮಹಾನ್ ಯತಿಗಳಾಗಿದ್ದರು ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣುರ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಸತ್ಪುರುಷರ ಭೋದನೆ, ತತ್ವಸಿದ್ಧಾಂತಗಳು ಮಾನವ ಒಳಿತಿಗಾಗಿ ಬಿಟ್ಟು ಹೋದ ಅವರ ಚಿಂತನೆಗಳು ನಮಗೆ ಆದರ್ಶಪ್ರಾಯವಾಗಿವೆ. ಜಿಡ್ಡು ಹಿಡಿದ ಸಮಾಜವನ್ನು ತಿದ್ದಿ ತೀಡಿ ಶುದ್ಧಗೊಳಿಸಿ ಲೋಕ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನೆ ದಾರೆ ಎರೆದಿರುವರು. ಸಮ ಸಮಾಜವನ್ನು ನಿರ್ಮಿಸಿ ಎಲ್ಲ ಮಾನವ ಕುಲ ಒಂದೇ ಎಂದು ಪ್ರತಿಪಾದಿಸಿದ ಮಹಾನ ದಾರ್ಶನಿಕರಾಗಿದ್ದರು ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಇಂದು ನಾವುಗಳು ಸಾಗಬೇಕು ಎಂದು ಅವರು ತಿಳಿಸಿದರು.
ಅನಕ್ಷರತೆ, ಮೂಡನಂಬಿಕೆಗಳು ನಾಗರೀಕ ಸಮಾಜವನ್ನು ಹಿನ್ನಡೆಯತ್ತ ಕೊಂಡೊಯುತ್ತವೆ. ಇವುಗಳಿಂದ ಹೊರಬಂದು ಜ್ಞಾನಾರ್ಜನೆಯಲ್ಲಿ ತೊಡಗಿ ಸಮಾಜವನ್ನು ಮುನ್ನಡಿಸಬೇಕು ಎಂದು ಕೈವಾರ ತಾತಯ್ಯನವರು ತಮ್ಮ ಗೀತೆ, ವಚನಗಳಿಂದ ಸಾರಿದರು ಎಂದು ಅವರು ಹೇಳಿದರು.
ಸಾಧು ಸತ್ಪರುಷರು, ಶರಣರು ಮತ್ತು ದಾರ್ಶನಿಕರ ನುಡಿಗಳು ಇಂದಿಗೂ ಜನಸಾಮಾನ್ಯರ ಬದುಕನ್ನು ಹಸನಗೊಳಿಸುವ ಮತ್ತು ವಿಚಾರವಂತರನ್ನಾಗಿ ಮಾಡುವ ಮೂಲಕ ನೈತಿಕ ಪ್ರಜ್ಞೆಯನ್ನು ಅರಳಿಸುವ ನಿಟ್ಟಿನಲ್ಲಿ ಮಹನೀಯರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದರು.
ಕನ್ನಡನಾಡು ನಡೆಗೆ ಅನುಪಮ ಸೇವೆ ಸಲ್ಲಿಸಿದ ಮತ್ತು ಸಾಂಸ್ಕೃತಿಕ ಲೋಕಕ್ಕೆ ವಿಶಿಷ್ಟ ಕೊಡುಗೆಯನ್ನು ನೀಡಿದ ಮಹನೀಯರನ್ನು ಸ್ಮರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸುವುದು ಹಾಗೂ ಅವರ ವಿಚಾರಗಳನ್ನು ಪ್ರಸ್ತುತ ಕಾಲಘಟ್ಟದಲ್ಲಿ ಜನಮಾಸಕ್ಕೆ ತಲುಪಿಸುವ ನಿಟ್ಟಿನಲ್ಲಿ ಜಯಂತಿ ಆಚರಣೆ ಮಹತ್ವವಾಗಿವೆ ಎಂದು ಅವರು ಹೇಳಿದರು.
ಬಿ.ವಿ.ದರಬಾರ ಪದವಿ ಮಹಾವಿದ್ಯಾಲಯದ ಉಪನ್ಯಾಸಕರಾದ ಕಾಶೀನಾಥ ಕೋಣೆನವರ ವಿಶೇಷ ಉಪನ್ಯಾಸ ನೀಡಿ ಕೈವಾರ ತಾತ್ಯಯನವರು ಭೂಮಿ ಮೇಲಿನ ಕಂದಾಚಾರ ತೋಲಗಿ ಆದ್ಯಾತ್ಮಿಕತೆಯನ್ನು ಬಿತ್ತಲು ಹುಟ್ಟಿಬಂದವರು. ಭಕ್ತಿಭಾವದ ಮೂಲಕ ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವ ಗೀತೆಗಳನ್ನು ಶ್ರೀ ಯೋಗಿನಾರೇಯಣ ಯತೀಂದ್ರ (ಕೈವಾರ ತಾತಯ್ಯ)ರವರು ರಚಿಸಿದರು. ಮಾನವ ಜನಾಂಗಕ್ಕೆ ಸನ್ಮಾರ್ಗ ತೋರುವತ್ತಾ ಕೈವಾರ ತಾತಯ್ಯನವರು ರಚಿಸಿದ ಕಾಲಜ್ಞಾನ ಇಂದಿನ ಕಾಲಕ್ಕೂ ಪ್ರಸ್ತುತವಾಗಿವೆ. ಇಂತಹ ಮಹನೀಯರ ಜಯಂತಿ ಆಚರಣೆಗಳ ಮೂಲಕ ಅವರ ವಿಚಾರಗಳನ್ನು ಪುನರಮನನ ಮಾಡಿ ಜನರಿಗೆ ತಿಳಿಸಿಕೊಡಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಬಿ.ಎಸ್.ರಾಠೋಡ, ಪೊಲೀಸ್ ಇಲಾಖೆಯ ಡಿವೈಎಸ್‌ಪಿ ಡಿ.ಎಸ್.ಧನಗರ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ತಹಶೀಲ್ದಾರ ಪವಾರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬದ್ರೂದ್ದಿನ್ ಸೌದಾಗರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಖಜಾನೆ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.