ಧಾರವಾಡ 06: ಇನ್ನೊಬ್ಬರ ಏಳ್ಗೆಯನ್ನು ಕಂಡು ಖುಷಿ ಪಡುವ ಹೃದಯವಂತಿಕೆ ಉಳ್ಳವರು. ಸಮಾಜದ ದೃಷ್ಟಿಯಲ್ಲಿ ದೊಡ್ಡವರಾಗಿರುತ್ತಾರೆ. ಅಂತಹ ಹೃದಯ ಶ್ರೀಮಂತಿಕೆ ದಿ. ಅಶೋಕ ನಿಡವಣಿ ಅವರಲ್ಲಿ ಇತ್ತು ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ವಿಶ್ರಾಂತ ಡಿ. ಎಂ. ನಿಡವಣಿ ಹೇಳಿದರು
ಕರ್ನಾಟಕ ವಿದ್ಯಾವರ್ಧಕ ಸಂಘವು ಹೊಸಳ್ಳಿ ಪರಮ ಪೂಜ್ಯ ಶ್ರೀ ಬೂದೀಶ್ವರ ಮಹಾಸ್ವಾಮಿಗಳ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಅಶೋಕ ನಿಡವಣಿ ಅವರ ಸಾಧನೆ ಮತ್ತು ಕೊಡುಗೆ : ಒಂದು ಸ್ಮರಣೆ’ ವಿಷಯ ಕುರಿತು ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಶಾಲಾ ಹಂತದಲ್ಲಿಯೇ ಅವರಿಗೆ ಅನ್ಯಾಯದ ವಿರುದ್ಧ ಪ್ರತಿಭಟಿಸುವ ಮನೋಭಾವ ಇತ್ತು. ಅವರು ಹಠವಾದಿ ಮಾತ್ರವಲ್ಲ ಸ್ವಾಭಿಮಾನಿಗಳೂ ಆಗಿದ್ದರು. ನೊಂದವರಿಗೆ, ಬೆಂದವರಿಗೆ, ಸರ್ವಸಾಮಾನ್ಯರಿಗೆ ಧ್ವನಿಯಾಗಿದ್ದವರು. ನಿಜ ಅರ್ಥದಲ್ಲಿ ಅವರದು ಸಾರ್ಥಕ ಹಾಗೂ ಪರಿಪೂರ್ಣ ಬದುಕು. ದುಡಿಮೆಯಲ್ಲಿ ದೇವರನ್ನು ಕಂಡವರಾಗಿದ್ದರು. ಅಪಾರ ಸ್ನೇಹಿತರ ಬಳಗ ಹೊಂದಿದ್ದ ಅವರು ವಿವಿಧ ಸಂಘ-ಸಂಸ್ಥೆಗಳ ಜೊತೆ ಅವಿನಾಭಾವ ಸಂಬಂಧ ಹೊಂದಿ ಜನಮಾನಸದಲ್ಲಿ ಉಳಿದವರಾಗಿದ್ದಾರೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ವಿಶ್ರಾಂತ ಪ್ರಾಚಾರ್ಯ ಬಿ.ಎಂ. ಹುರುಕಡ್ಲಿ ಮಾತನಾಡಿ, ದಿ. ಅಶೋಕ ನಿಡವಣಿ ತನಗಾಗಿ ಎಂದಿಗೂ ಏನನ್ನೂ ಬಯಸದವರು. ಎಲ್ಲರೂ ಸುಖ-ಶಾಂತಿ ನೆಮ್ಮದಿಯಿಂದ ಬಾಳಬೇಕೆಂಬ ಮಹಾದಾಸೆ ಹೊಂದಿದ ಅವರು ಬಸವತತ್ವ ಪ್ರಸಾರಕರಾಗಿದ್ದರು ಎಂದು ಹೇಳಿದರು.
ವೇದಿಕೆ ಮೇಲೆ ದತ್ತಿದಾನಿಗಳ ಪರವಾಗಿ ಪ್ರಭಾ ಅಶೋಕ ನಿಡವಣಿ ಉಪಸ್ಥಿತರಿದ್ದು ಮಾತನಾಡಿ, ನಾನು ನಿಡವಣಿ ಕುಟುಂಬದ ಸೊಸೆಯಾಗಿದ್ದು ನನ್ನ ಹೆಮ್ಮೆ. ಪರಿವಾರದವರು ಕಷ್ಟಕಾಲದಲ್ಲಿ ನನಗೆ ನೀಡಿದ ಸಹಾಯ ಸಹಕಾರ ಸ್ಮರಣೀಯ ಎಂದರು.
ದಿವ್ಯ ಸಾನಿಧ್ಯ ವಹಿಸಿದ್ದ ಮುರುಘಾಮಠದ ಪೂಜ್ಯ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶೀರ್ವಚನ ನೀಡಿ ದಿ. ಅಶೋಕ ನಿಡವಣಿ ಅವರ ತ್ಯಾಗ ಸೇವೆ ಸ್ಮರಣೀಯ. ಅವರಿಂದ ಇನ್ನೂ ಅನೇಕ ಮಹಾತ್ಕಾರ್ಯಗಳು ಆಗಬೇಕಿತ್ತು ಎಂದು ಆಶೀರ್ವಚನ ನೀಡಿ ಪೂಜ್ಯರಾದ ಶ್ರೀ ಬೂದಿಶ್ವರ ಸ್ವಾಮಿಗಳನ್ನು ಹಾಗೂ ಅಂಕಲಗಿಯ ಅಡವಿಸಿದ್ದೇಶ್ವರರನ್ನು ಸ್ಮರಿಸಿದರು.
ಪ್ರಾರಂಭದಲ್ಲಿ ಶಿವಪ್ಪ ಕಿತ್ತೂರ ಹಾಗೂ ಸಂಗಪ್ಪ ಗಾಳಿ ಪ್ರಾರ್ಥಿಸಿದರು. ಸತೀಶ ತುರಮರಿ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.
ಕಾರ್ಯಕ್ರಮದಲ್ಲಿ ಬಸವಪ್ರಭು ಹೊಸಕೇರಿ, ಡಾ. ಮಹೇಶ ಧ. ಹೊರಕೇರಿ, ಡಾ. ಲಿಂಗರಾಜ ಅಂಗಡಿ, ಶ್ರೀಶೈಲ ನಿಡವಣಿ, ಮಡಿವಾಳಪ್ಪ ಶಿರಿಯನ್ನವರ, ರಾಜು ಮರಳಪ್ಪನವರ, ಶಾಂತವೀರ ಬೆಟಗೇರಿ, ಶಿವಶರಣ ಕಲಬಶೆಟ್ಟರ, ವಿ.ಸಿ. ಸವಡಿ, ಮುಕ್ತಾ ಸವದಿ, ಸುರೇಶ ಹಾಲಭಾವಿ, ಬಸವಂತಪ್ಪ ತೋಟದ, ನಿಡವಣಿ ಕುಟುಂಬದ ಸದಸ್ಯರು ಹಾಗೂ ಹೊಸಳ್ಳಿ ಗ್ರಾಮದ ಅನೇಕ ಭಕ್ತರು ಭಾಗವಹಿಸಿದ್ದರು.