ಪ್ರಮುಖಾಂಶಗಳು
ಸಿ ಕಾರ್ತಿಕ ದೀಪೋತ್ಸವ ಜ್ಞಾನದ ಸಂಕೇತ. ಮನಸ್ಸಿಗೆ ಬೆಳಕಿನ ಆಶಾಭಾವ ಮೂಡಿಸುತ್ತದೆ.
ಉತ್ತಮ ವಿಚಾರ ರೂಢಿಸಿಕೊಂಡು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು.
ಈ ಕಾರ್ತಿಕ ಮಾಸದ ದೀಪೋತ್ಸವ ಸಮಾರಂಭಕ್ಕೆ ಯಡುರಿನ ಗುರುಕುಲ ಪೀಠದ ಪಾಠಶಾಲೆಯ ಗುರುಗಳಾದ ಶ್ರೀಶೈಲ್ ಗುರೂಜಿ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಅಡವಯ್ಯ ಅರಳಿಕಟ್ಟಿಮಠ ಡಾ. ಪ್ರಭಾಕರ್ ಕೋರೆ ಕೋ. ಆಪ ಸೊಸೈಟಿಯ ನಿರ್ದೇಶಕ ಶ್ರೀಕಾಂತ್ ಉಮರಾಣಿ ಈರಯ್ಯ ಮಠಪತಿ ಮುತ್ತಯ್ಯ ಮಠದ, ಈಶ್ವರ್ ಹಿರೇಮಠ ಹಾಗೂ ಗುರುಕುಲ ಪೀಠದ ವಿದ್ಯಾರ್ಥಿಗಳು ಮತ್ತು ಭಕ್ತರು ಪಾಲ್ಗೊಂಡಿದ್ದರು.
ಮಾಂಜರಿ 02: ಸಮಾಜಕ್ಕೆ ಜ್ಞಾನದ ಮೂಲಕ ಬೆಳಕು ಪಸರಿಸಿ ಧಾರ್ಮಿಕ ಭಾವನೆಗಳ ಮೂಲಕ ಶಾಂತಿ ನೆಲೆಸುವಂತೆ ಮಾಡುತ್ತದೆ ಎಂದು ಶ್ರೀಶೈಲ ಜಗದ್ಗುರುಗಳು ಹಾಗೂ ಸುಕ್ಷೇತ್ರ ಯಡುರಿನ ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿ ಹಾಗೂ ಕಾಡ ಸಿದ್ದೇಶ್ವರ ಸಂಸ್ಥಾನ ಮಠದ ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಸುಪ್ರಸಿದ್ಧ ಪುಣ್ಯ ಕ್ಷೇತ್ರ ಸುಕ್ಷೇತ್ರ ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠ ಮತ್ತು ಗುರುಕುಲ ಪಾಠಶಾಲೆಯ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ರವಿವಾರ ರಾತ್ರಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವ ಹಾಗೂ ಬೆಳ್ಳಿಪಲ್ಲಕ್ಕಿ ಉತ್ಸವ ದೀಪ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಹೊರಗಿನ ಕತ್ತಲೆ ಕಳೆಯಲು ದೀಪಬೇಕು, ಅಜ್ಞಾನವೆಂಬ ಕತ್ತಲೆ ಕಳೆಯಲು ಗುರುಬೇಕು. ಅರಿವು, ಆದರ್ಶಗಳ ಪರಿಪಾಲನೆಯಿಂದ ಜೀವನ ಉಜ್ವಲಗೊಳ್ಳುತ್ತದೆ ಎಂದು ತಿಳಿಸಿದ ಅವರು ಕಾರ್ತಿಕ ಮಾಸದ ಲಕ್ಷದೀಪೋತ್ಸವ ಪರಮಾತ್ಮನಿಗೆ ಅತಿ ಪ್ರಿಯವಾದ ಸೇವೆ. ಭಕ್ತರ ಜ್ಞಾನದ ಹಸಿವನ್ನು ನೀಗಿಸಿ ಸುಜ್ಞಾನ ಜ್ಯೋತಿಯನ್ನು ಬೆಳಗಿಸಿ ಪಾವನಗೊಳಿಸುವ ಧಾರ್ಮಿಕ ಪ್ರಜ್ಞೆಯ ಬಗ್ಗೆ ಜಾಗೃತಿಗೊಳಿಸುವ ಕಾರ್ಯಕ್ರಮವಾಗಿದೆ ಎಂದು ಶ್ರೀಶೈಲ್ ಜಗದ್ಗುರುಗಳು ತಿಳಿಸಿದರು.
ವಿಜಾಪುರದ ಸಿದ್ದೇಶ್ವರ ದೇವರು ಸ್ವಾಮೀಜಿ ಮಾತನಾಡಿ, ಕಾರ್ತಿಕ ದೀಪೋತ್ಸವ ಜ್ಞಾನದ ಸಂಕೇತ, ಮನಸ್ಸಿಗೆ ಬೆಳಕಿನ ಆಶಾಭಾವ ಮೂಡಿಸುತ್ತದೆ. ಉತ್ತಮ ಆಚಾರ ವಿಚಾರ ರೂಢಿಸಿಕೊಂಡು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು ಎಂದರು.