ಕ್ರೀಡೆಯು ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಜೊತೆಗೆ ಶಿಸ್ತಿನ ಜೀವನಶೈಲಿಯನ್ನು ಬೆಳೆಸುವಂತೆ ಮಾಡುತ್ತದೆ : ಕೊಕರೆ

Sports promotes physical and mental health along with a disciplined lifestyle : Kokare

ಕ್ರೀಡೆಯು ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಜೊತೆಗೆ ಶಿಸ್ತಿನ ಜೀವನಶೈಲಿಯನ್ನು ಬೆಳೆಸುವಂತೆ ಮಾಡುತ್ತದೆ : ಕೊಕರೆ 

ವಿಜಯಪುರ  03: ಕ್ರೀಡೆಯು ಶಾರೀರಿಕ ಹಾಗೂ ಮಾನಸಿಕ ಆರೋಗ್ಯದ ಜೊತೆಗೆ ಶಿಸ್ತಿನ ಜೀವನಶೈಲಿಯನ್ನು ಬೆಳೆಸುವಂತೆ ಮಾಡುತ್ತದೆ ಎಂದು ಬೆಂಗಳೂರಿನ ಕರ್ನಾಟಕ ವಾಲಿಬಾಲ್ ಸಂಸ್ಥೆಯ ಉಪಾಧ್ಯಕ್ಷ ಭೀಮಸೇನ ಕೊಕರೆ ಹೇಳಿದರು. ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಮತ್ತು ದೈಹಿಕ ನಿರ್ದೇಶನಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ವಾಲಿಬಾಲ್ ಕ್ರೀಡೆಯ ಕುರಿತು ಮೂರು ದಿನಗಳ ಕಾರ್ಯಾಗಾರ ಮತ್ತು ನಿರ್ಣಾಯಕರ ಪರೀಕ್ಷೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜೀವನದಲ್ಲಿ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಇದಕ್ಕಾಗಿ ಕ್ರೀಡೆ ಪ್ರಮುಖ ಪಾತ್ರ ವಹಿಸುತ್ತದೆ. ಕ್ರೀಡೆಯಿಂದ ಮಾನವ ಜೀವನದ ಅವಧಿ ಹೆಚ್ಚುವುದರ ಜೊತೆಗೆ, ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಆಟ ಮತ್ತು ಪಾಠ ಎರಡೂ ಸಮಪ್ರಮುಖವೆಂದು ಅಭಿಪ್ರಾಯಪಟ್ಟರು ಎಂದರು. ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಕ್ರೀಡೆಯ ಮೂಲಕ ಕ್ರೀಡಾಪಟುಗಳು ದೈಹಿಕ ಮಾನಸಿಕ ಆರೋಗ್ಯ ಬೆಳೆಸುವದರ ಜೊತೆಗೆ ಜೀವನದ ಸೋಲು ಗೆಲುವು ಸಮನಾಗಿ ಸ್ವೀಕರಿಸುವ ಧೈರ್ಯ ಬೆಳೆಸಿಕೊಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಹಂಗಾಮಿ ಕುಲಪತಿ ಪ್ರೊ.ಶಾಂತಾದೇವಿ ಟಿ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಆತ್ಮಸ್ಥೈರ್ಯ ಶ್ರದ್ದೆ ಪರಿಶ್ರಮದಂತಹ ಗುಣಗಳು ಬೆಳೆದು ಸದಾ ಗೆಲುವಿನ ಕಡೆಗೆ ಸಾಗುವ ಮನಸ್ಸು ಬೆಳೆಯುತ್ತೆ. ಅದಕ್ಕಾಗಿ ಸದೃಡ ದೇಹ ಸದೃಡ ಮನಸ್ಸು ಬೇಕು ಎಂದರು. ಕಾರ್ಯಾಗಾರದಲ್ಲಿ ರಾಜ್ಯ ಸಂಪನ್ಮೂಲ ವ್ಯಕ್ತಿ  ಬಾಲಾಜಿ ಪ್ರಭು, ಬೆಂಗಳೂರಿನ ಕೆ.ವೆಂಕಟೇಶಗೌಡ, ಶಿಕ್ಷಣ ನಿಕಾಯದ ಡೀನ ಪ್ರೊ.ಸಕ್ಪಾಲ್ ಹೂವಣ್ಣ, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ವಿಭಾಗದ ಅಧ್ಯಾಪಕರಾದ ಪ್ರೊ.ಶ್ರೀನಿವಾಸ್, ಪ್ರೊ.ಜ್ಯೋತಿ ಉಪಾದ್ಯ ಹಾಗೂ ಡಾ.ಅಶ್ವಿನಿ ಕೆ.ಎನ್ ಉಪಸ್ಥಿತರಿದ್ದರು.   ಕಾರ್ಯಾಗಾರದಲ್ಲಿ ನಿರ್ದೇಶನಾಲಯದ ನಿರ್ದೇಶಕ ಪ್ರೊ.ಹನುಮಂತಯ್ಯ ಪೂಜಾರಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಅತಿಥಿ ಉಪನ್ಯಾಸಕಿ ಡಾ.ಕಸ್ತೂರಿ ರಜಪೂತ ಅತಿಥಿಯರನ್ನು ಪರಿಚಯಿಸಿದರು. ಅತಿಥಿ ಉಪನ್ಯಾಸಕಿ ಡಾ.ಜ್ಯೋತಿ ಅವಟಿ ನಿರೂಪಿಸಿದರು.