ವಿಜಯಪುರ: 12ನೇಯ ಶತಮಾನದ ಬಸವಾದಿ ಶರಣರು ತಮ್ಮ ವಚನಗಳಲ್ಲಿ ನಮ್ಮ ಬದುಕು-ಜೀವನ, ಸಂಪ್ರದಾಯ, ಸಂಸ್ಕೃತಿ-ಸಂಸ್ಕಾರ ಮತ್ತು ಜೀವನ ಮೌಲ್ಯಗಳ ಬಗ್ಗೆ ಸಂದೇಶ ಸಾರಿದ್ದಾರೆ. ಬದುಕು ಸಂಕೀರ್ಣ, ಒತ್ತಡಯುಕ್ತ ಮತ್ತು ಮೌಲ್ಯಗಳಿಲ್ಲದೇ ಬದುಕು ಶೂನ್ಯವಾಗುತ್ತಿರುವ ಇಂದಿನ ದಿನಗಳಲ್ಲಿ ಇಡೀ ಜಗತ್ತಿಗೆ ಸಮಾನತೆ, ಸದ್ಭಾವ, ಸನ್ನಡತೆ, ಸಚ್ಚಾರಿತ್ರ್ಯ, ಸದಾಚಾರ ಮತ್ತು ಸಾರ್ಥಕ ಜೀವನಕ್ಕೆ ಬೇಕಾದ ಸಪ್ತ ಸೂತ್ರಗಳ ಮೂಲಕ ಸಂದೇಶ ಸಾರಿದ ಶರಣರು ವಚನಗಳು ನಮಗೆಲ್ಲ ದಾರೀದೀಪವಾಗಿವೆ ಎಂದು ಕೋಲ್ಹಾರ-ಬೇಲೂರು ಮಠದ ಪರಮಪೂಜ್ಯ ಷ.ಬ್ರ. ಶ್ರೀ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆ ಎದುರಿಗೆ ಇರುವ ಎನ್.ಜಿ.ಓ ಕಾಲನಿಯಲ್ಲಿ ಜೈ ಶ್ರೀ ಆಂಜನೇಯ ದೇವಸ್ಥಾನದ 5 ನೇಯ ವರ್ಷದ ಜಾತ್ರಾ ಮಹೋತ್ಸವದಲ್ಲಿ ಧರ್ಮಸಭೆ ಮತ್ತು ದಾನಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮ ಬದುಕು ಸುಖ-ಶಾಂತಿ, ನೆಮ್ಮದಿ ಮತ್ತು ಸಾರ್ಥಕ ಪಡೆಯಲು ನಾವು ದೇವರ ನಾಮಸ್ಮರಣೆ, ಧಾರ್ಮಿಕ-ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅಧ್ಯಾತ್ಮಿಕತೆಯ ಕಡೆಗೆ ಹೆಚ್ಚಿನ ಒಲವು ಹೊಂದಬೇಕಾಗಿದೆ. ಇಂದಿನ ನಮ್ಮ ಯುವ ಜನಾಂಗ ಸಮೂಹ ಮಾಧ್ಯಮ, ಪಾಶ್ಚಾತ್ಯೀಕರಣದ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಾನವೀಯ ಮೌಲ್ಯ, ಸಂಬಂಧಗಳು ಮತ್ತು ಹಿರಿಯರೆಂಬ ಗೌರವ ಭಾವವಿಲ್ಲದೇ ನಮ್ಮ ದೇಶೀಯ ಸಂಸ್ಕೃತಿ ನಶಿಸಿ ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಪ್ರತಿ ಮನೆಯಲ್ಲಿಯೂ ನಮ್ಮ ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯ ಮತ್ತು ಪರಂಪರೆಯನ್ನು ಆಚರಿಸುತ್ತಾ, ಅದು ಮುಂದಿನ ಯುವ ಪೀಳಿಗೆ ಉಳಿಸಿ-ಬೆಳೆಸಿಕೊಂಡು ಹೋಗುವಂತೆ ಪ್ರೇರೇಪಿಸಬೇಕಾಗಿದೆ ಎಂದರು.
ಸಾನಿಧ್ಯ ವಹಿಸಿದ ಜಮಖಂಡಿ ಓಲೆಮಠದ ಪೂಜ್ಯ ಶ್ರೀ ಆನಂದ ದೇವರು ಅವರು ಮಾತನಾಡುತ್ತಾ, ಇಂದಿನ ಜಾತ್ರೋತ್ಸವಗಳಲ್ಲಿ ನಾವು ತೋರುವ ಭಕ್ತಿ-ಭಾವಗಳು ತೋರಿಕೆಗಾಗಿ ಅಥವಾ ಜಿದ್ದಿಗೆ ಬಿದ್ದು ಅದ್ಧೂರಿ ಮತ್ತು ಆಡಂಭರವನ್ನು ಬಿಟ್ಟು ಸರಳ ರೀತಿಯಿಂದ ಆಚರಿಸುವ ಮನೋಭಾವ ನಮ್ಮದಾಗಬೇಕು. ಸಂಸ್ಕೃತಿ-ಸಂಸ್ಕಾರ, ಸಂಪ್ರದಾಯ, ಪರಂಪರೆ ಮತ್ತು ನಮ್ಮ ಭವ್ಯ ಭಾರತದ ಇತಿಹಾಸವನ್ನು ಅಭಿವ್ಯಕ್ತಿಗೊಳಿಸುವಂತಹ ಸತ್ಸಂಗ, ಸಂಕೀರ್ತನೆ, ರಾಮಾಯಣ, ಮಹಾಭಾರತ, ಭಗವದ್ಘೀತೆ, ಉಪನಿಷತ್ ಮತ್ತು ಅಧ್ಯಾತ್ಮಿಕ, ವೈಚಾರಿಕ ಮತ್ತು ಮೌಲ್ವಿಕ ವಿಚಾರಧಾರೆಗಳ ಬಗ್ಗೆ ಜಾಗೃತಿ ಮೂಡಿಸುವಂತಾಬೇಕು. ಪ್ರತಿ ವರ್ಷದ ನವರಸಪುರದ ಎಲ್ಲ ಬಡಾವಣೆಗಳ ದೇವಸ್ಥಾನಗಳಲ್ಲಿ ಆಯೋಜಿಸುತ್ತಿರುವ ಈ ಧಾರ್ಮಿಕ ಮತ್ತು ಸಾಮಾಜಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳು ನಿಜಕ್ಕೈ ಶ್ಲ್ಯಾಘನೀಯವಾದುದು. ಭಕ್ತಿ-ಭಾವದ ಸಂಗಮ ಮತ್ತು ಶಾಂತಿ-ಸಾಮರಸ್ಯದ ನಮ್ಮ ನಾಡಿನಲ್ಲಿ ಜಾತ್ರೆಯ ನೆಪದಲ್ಲಿ ಯುವ ಮನಸ್ಸುಗಳಲ್ಲಿ ಒಳ್ಳೆಯ ಸದ್ಗುಣಗಳನ್ನು ಬೆಳೆಸಿವಲ್ಲಿ ಸಹಕಾರಿಯಾಗಿದೆ.
ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಯ ಮತ್ತು ಸಮೂಹ ಮಾಧ್ಯಮಗಳ ಪ್ರಭಾವದಿಂದ ಮೌಲ್ವಿಕ-ಸಂಸ್ಕೃತಿ-ಸಂಸ್ಕಾರಗಳಿಲ್ಲದೇ ಬದುಕುತ್ತಿರುವ ನಮ್ಮ ಮಕ್ಕಳು, ಯುವಕರು, ಮಹಿಳೆಯರಲ್ಲಿ ಆರೋಗ್ಯಯುತ ಮತ್ತು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಈ ದೇವಸ್ಥಾನದಲ್ಲಿ ಹಮ್ಮಿಕೊಳ್ಳುತ್ತಿರುವ ಧಾರ್ಮಿಕ ಕಾರ್ಯಕ್ರಮಗಳೇ ಇತರರಿಗೆ ಮಾದರಿಯಾಗಿವೆ. ಅದಕ್ಕಾಗಿ ನಾವೆಲ್ಲರೂ ಶಿಸ್ತು-ಶಾಂತಿ, ಸಂಯಮ, ಸಹಕಾರ, ಸ್ನೇಹಪರತೆಯಂತಹ ಗುಣಗಳನ್ನು ಹೊಂದುತ್ತಾ ಸಮಾಜದಲ್ಲಿ ಶಾಂತಿ-ನೆಮ್ಮದಿಗೆ ಭಂಗ ಬರದಂತೆ ಮತ್ತು ದ್ವೇಷ-ಅಸೂಯೆ, ಮೇಲು-ಕೀಳುಗಳೆಂಬ ಭಾವವನ್ನು ತೊರೆದು ಪ್ರೀತಿ-ವಿಶ್ವಾಸದಿಂದ "ನಾವೆಲ್ಲರೂ ಒಂದೇ ಮತ್ತು ವಸುದೈವ ಕುಟುಂಬಕಂ" ಎನ್ನುವಂತೆ ಸರ್ವ ಜನಾಂಗದ ಶಾಂತಿಯ ತೋಟವಾದ ಭಾರತದಲ್ಲಿ ಒಳ್ಳೆಯ ಸದ್ಭಾವನೆಯೊಂದಿಗೆ ಗಣೇಶ ಉತ್ಸವವನ್ನು ಅರ್ಥಪೂರ್ಣವನ್ನಾಗಿ ಆಚರಿಸಬೇಕು. ಈ ಆಂಜನೇಯ ದೇವಸ್ಥಾನ ಅಭಿವೃದ್ಧಿಗೆ ಕೇವಲ ಎಲ್ಲರೂ ತನು-ಮನ-ಧನದಿಂದ ದೇಣಿಗೆ ನೀಡಿ ಕೈ ಜೋಡಿಸುತ್ತಿರುವ ವಿಜಯಪುರ ನಗರದಲ್ಲಿಯೇ ಇದು ಮಾದರಿಯಾದ ದೇವಸ್ಥಾನವಾಗಿದೆ ಎಂದರು
ಕಾರ್ಯಕ್ರಮದಲ್ಲಿ ವಿಶ್ವನಾಥ ದೇವರು, ಸಂಗಮೇಶ ಬಬಲೇಶ್ವರ, ಗುರು ಗಚ್ಚಿನಮಠ, ನಾನಾಸಾಬ ಕೂಟನೂರ, ಪ್ರೊ. ಎಂ.ಎಸ್.ಖೊದ್ನಾಪೂರ, ಶಿವಾನಂದ ಬಿಜ್ಜರಗಿ, ಆರ್.ಬಿ.ಕುಮಟಗಿ, ವೇದಿಕೆಯ ಮೇಲಿದ್ದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಅಧ್ಯಕ್ಷ ಸಂತೋಷ ಪಾಟೀಲ, ಮಲ್ಲನಗೌಡ ಪಾಟೀಲ, ಲಕ್ಷ್ಮಣ ಶಿಂಧೆ, ಅನೀಲ ಪಾಟೀಲ, ಗೊಲ್ಲಾಳ ಎಚ್ಚಿ,, ಮಾಧುರಿ ದೇಶಪಾಂಡೆ, ಲಲಿತಾ ರಜಪೂತ, ಗಿರಿಜಾ ಮಠಪತಿ, ಶಾಂತಾ ಹಿರೇಮಠ, ಜ್ಯೋತಿ ಪಾಟೀಲ, ಸವಿತಾ ಕುಮಟಗಿ, ಮಾಯಕ್ಕ ಸಂಖ, ರಾಜೇಶ್ವರಿ ಮುಧೋಳ ಸೇರಿದಂತೆ ನವರಸಪುರ ಬಡಾವಣೆಗಳ ನೂರಾರು ಯುವಕರು, ಮಕ್ಕಳು, ಮಹಿಳೆಯರು ಮತ್ತು ಹಿರಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.